ಮಂಡ್ಯ: ಹಿರಿಯ ಸಾಹಿತಿ ಪ್ರೊ ಭಗವಾನ್ (Prof. KS Bhagavan) ವಿರುದ್ಧ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ (Srirangapatna Town Police Station) ದೂರು ದಾಖಲಾಗಿದೆ. ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ನಾಲಿಗೆ ಹರಿಬಿಟ್ಟಿದ್ದ ಭಗವಾನ್, ಶ್ರೀರಾಮಚಂದ್ರ (Rama) ಮದ್ಯಸೇವನೆ ಮಾಡುತ್ತಿದ್ದ. ಸೀತೆಯನ್ನ ಕಾಡಿಗೆ ಅಟ್ಟಿದ್ದ ಎಂದಿದ್ದರು. ಭಗವಾನ್ ಅವರ ಹೇಳಿಕೆಯಿಂದ ರೊಚ್ಚಿಗೆದ್ದಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು (Hindu Activist) ತಕ್ಷಣವೇ ಎಫ್ಐಆರ್ ದಾಖಲಿಸಿಕೊಂಡು ಭಾಗವಾನ್ರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಶ್ರೀರಾಮ ಹಾಗೂ ಹಿಂದೂ ಧರ್ಮದ ಬಗ್ಗೆ ಉದ್ದೇಶ ಪೂರ್ವಕವಾಗಿಯೇ ಭಗವಾನ್ ಹೇಳಿಕೆ ನೀಡಿದ್ದಾರೆ. ಚುನಾವಣೆಯ ಸಮಯದಲ್ಲಿ ಮಂಡ್ಯದ ಕೆಆರ್ ಪೇಟೆಯಲ್ಲಿ ಬಂದು ಇಂತಹ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಆತನಿಗೆ ಪೊಲೀಸ್ ರಕ್ಷಣೆಯನ್ನು ನೀಡಿದ್ದರು.
ಇಂತಹ ಮಾನಸಿಕತೆ ಹೊಂದಿರುವ ವ್ಯಕ್ತಿ ಚುನಾವಣೆಯ ಸಮಯದಲ್ಲೇ ಈ ರೀತಿ ಮಾತನಾಡುತ್ತಿದ್ದಾನೆ. ಚುನಾವಣೆ ನಡೆದು ಅಧಿಕಾರ ಹಿಡಿಯಬೇಕಾದ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಸ್ವಾಸ್ಥ್ಯ, ಶಾಂತಿ ಕೆಡಿಸುವ ಉದ್ದೇಶದಿಂದಲೇ ಕೆಆರ್ ಪೇಟೆಗೆ ಬಂದು ಮಾತನಾಡಿದ್ದಾರೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Marriage with Lord Vishnu: ಭಗವಾನ್ ವಿಷ್ಣು ಜೊತೆ ಮದುವೆಯಾದ ಯುವತಿ! ದೇವಸ್ಥಾನದಲ್ಲೇ ದೇವರ ಜೊತೆ ಕಲ್ಯಾಣೋತ್ಸವ!
ಪ್ರೊ ಭಗವಾನ್ ಹೇಳಿದ್ದೇನು?
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನಲ್ಲಿ ನಡೆದ ನಿವೃತ್ತ ಶಿಕ್ಷಕ ತಿಮ್ಮೆಗೌಡ ರಚಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ್ದ ಭಗವಾನ್ ಅವರು, ಶ್ರೀರಾಮನ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ದೇವಸ್ಥಾನದಿಂದಲೇ ಭ್ರಷ್ಟಾಚಾರ ಶುರು
ನಮ್ಮ ರಾಷ್ಟ್ರ, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಅವನು ಯಾವುದೇ ಪಕ್ಷದವ ಆದರೂ ಭಷ್ಟಾಚಾರದಿಂದ ಹೊರತಾಗಿಲ್ಲ. ಭ್ರಷ್ಟಾಚಾರ ಇಲ್ಲದ ವ್ಯಕ್ತಿಯೇ ಇಲ್ಲ. ಬಹುಶಃ ಭ್ರಷ್ಟಾಚಾರ ಮಾಡಲು ಬಾರದೆ ಇರೋ ವ್ಯಕ್ತಿಗೆ ರಾಜಕೀಯ ಮಾಡೋಕೆ ಆಗೋದಿಲ್ಲ. ಅಂತಹ ವಾತಾವರಣ ನಿರ್ಮಾಣವಾಗಿದೆ. ದೇವರ ಪೂಜೆಗೆ ಹೋಗುತ್ತೀರಿ, ಅಲ್ಲಿ ಏನಾದರೂ ಕಾಣಿಕೆ ಹಾಕುತ್ತೀರಿ. ತಟ್ಟೆ ಹಾಕದೆ ಇದ್ದರೆ ಅವನು ತಟ್ಟೆಯನ್ನೇ ನಿಮಗೆ ತೋರಿಸೋದಿಲ್ಲ. ದೇವಸ್ಥಾನದಿಂದಲೇ ಭ್ರಷ್ಟಾಚಾರ ಶುರುವಾಗಿದೆ.
ಈಗ ದೇಶದಲ್ಲಿ ರಾಮನ ದೇವಸ್ಥಾನ ಕಟ್ಟುತ್ತಿದ್ದಾರೆ. ನಾನು ಒಂದು ಪುಸ್ತಕ ಬರೆಯುತ್ತಿದ್ದೇನೆ, ರಾಮ ಮಂದಿರ ಏಕೆ ಬೇಡ ಎಂದು ಬರೆದಿದ್ದೇನೆ. ವಿವಿಧ ಭಾಷೆಗಳಲ್ಲಿ ಪುಸ್ತಕ ಬಿಡುಗಡೆ ಆಗಲಿದೆ ಎಂದು ಹೇಳಿದರು. ಅಲ್ಲದೇ 2 ಸಾವಿರ ವರ್ಷಗಳಿಂದ ಶೂದ್ರ ಎಂಬ ಪದವನ್ನು ಕೇಳಿಸಿಕೊಂಡು ಬಂದಿದ್ದಾರೆ. ಇಲ್ಲಿ ರಾಮ ರಾಜ್ಯ ಎಂಬುವುದು ಅಪಾಯಕಾರಿಯಾದ ಮಾತು. ನಮಗೆ ಬೇಕಿರೋದು ಸಂವಿಧಾನದಲ್ಲಿ ಇರುವ ರಾಜ್ಯ.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಕನ್ನಂಬಾಡಿ ಕಟ್ಟಲು ಮೊದಲು ಪ್ರಯತ್ನಿಸಿದ್ದ; ಪ್ರೊ ಕೆಎಸ್ ಭಗವಾನ್
ಶ್ರೀರಾಮ ದೇವರಂತು ಅಲ್ವೇ ಅಲ್ಲ, ಆತನೊಬ್ಬ ನಿರ್ಧಯಿ. ತನ್ನ ತುಂಬು ಗರ್ಭಿಣಿ ಪತ್ನಿಯನ್ನು ಕಾಡಿಗೆ ಕಳುಹಿಸಿದ ನಿರ್ಧಯಿ ರಾಮ. ತನ್ನ ಸೇವಕ ಶಂಭೂಕನನ್ನು ಘೋರವಾಗಿ ಹತ್ಯೆ ಮಾಡಿಸಿದ್ದು ಕೂಡ ಇದೇ ಶ್ರೀರಾಮ. ಕೊಲೆ ಮಾಡಿದ ರಾಮ ಹೇಗೆ ದೇವರಾಗುತ್ತಾನೆ?
ನಮಗೆ ರಾಮ ರಾಜ್ಯ ಬೇಕಾಗಿಲ್ಲ, ಎಲ್ಲರೂ ಒಂದೇ ಎಂಬ ಸಂದೇಶ ಬೇಕಿದೆ. ರಾಮ ರಾಜ್ಯಭಾರವೇ ಮಾಡಿಲ್ಲ ಅಂತ ವಾಲ್ಮೀಕಿ ರಾಮಾಯಾಣದಲ್ಲಿದೆ. ರಾಮ ಪುರೋಹಿತ ಜೊತೆ ಕುಳಿತು ಹರಟುತ್ತಿದ್ದ. ಪತ್ನಿ ಸೀತೆ ಜೊತೆ ಕುಳಿತು ಇಬ್ಬರೂ ಮದ್ಯ ಸೇವನೆ ಮಾಡುತ್ತಿದ್ದರು. ಈ ಬಗ್ಗೆ ವಾಲ್ಮೀಕಿ ರಾಮಾಯಾಣದ ಉತ್ತರ ಕಾಂಡಾದಲ್ಲಿ ಮಾಹಿತಿ ಇದೆ ಎಂದು ಭಗವಾನ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ