• Home
  • »
  • News
  • »
  • state
  • »
  • Kannada: ಕನ್ನಡ, ಕರ್ನಾಟಕ ಎರಡೂ ಕಟುಕರ ಕೈಯಲ್ಲೇ ಸಿಕ್ಕಿಬಿದ್ದಿವೆ; ಶಿಕ್ಷಣ ಇಲಾಖೆಯ ಆದೇಶಕ್ಕೆ HDK ಕೆಂಡಾಮಂಡಲ

Kannada: ಕನ್ನಡ, ಕರ್ನಾಟಕ ಎರಡೂ ಕಟುಕರ ಕೈಯಲ್ಲೇ ಸಿಕ್ಕಿಬಿದ್ದಿವೆ; ಶಿಕ್ಷಣ ಇಲಾಖೆಯ ಆದೇಶಕ್ಕೆ HDK ಕೆಂಡಾಮಂಡಲ

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

ಇಂಥ ಕರಾಳ ಆದೇಶಕ್ಕೆ ರಾಜ್ಯ ಬಿಜೆಪಿ ಸರಕಾರ ಮತ್ತು ಶಿಕ್ಷಣ ಸಚಿವರೇ ನೇರ ಹೊಣೆ. ಸರಕಾರಕ್ಕೆ ಗೊತ್ತಿಲ್ಲದೆಯೇ ಇಂಥ ಆದೇಶ ಬರಲು ಸಾಧ್ಯವೇ? ತಿಳಿಗೇಡಿ ಆಡಳಿತಕ್ಕೆ ಹಿಡಿದ ಕನ್ನಡಿ ಇದಾಗಿದೆ.

  • Share this:

ಶಿಕ್ಷಣ ಇಲಾಖೆಯ (Education Department) ಹಿಂದಿ (Hindi) ಹೇರಿಕೆಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 'ಒಂದು ಭಾರತ-ಶ್ರೇಷ್ಠ ಭಾರತ' ಕಾರ್ಯಕ್ರಮದಡಿ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು (Students) ಹೊರ ರಾಜ್ಯಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಹಿಂದಿ ಭಾಷೆ ಬರುವ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆಯ ಈ ಆದೇಶ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಈ ಸಂಬಂಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. 'ಒಂದು ಭಾರತ, ಒಂದು ಭಾಷೆ'ಯ ಹುನ್ನಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು (BJP Government),  ಶಾಲಾ ಮಕ್ಕಳ ಪ್ರವಾಸದಲ್ಲಿಯೂ ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಕನ್ನಡವನ್ನು ಹತ್ತಿಕ್ಕುವ ಹೀನಕೃತ್ಯ ಎಸಗುತ್ತಿವೆ. ಇದು ಅಕ್ಷಮ್ಯ ಮತ್ತು ಖಂಡನೀಯ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.


ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ 'ಒಂದು ಭಾರತ-ಶ್ರೇಷ್ಠ ಭಾರತ' ಕಾರ್ಯಕ್ರಮದಡಿ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಹೊರ ರಾಜ್ಯಗಳ ಪ್ರವಾಸಕ್ಕೆ ಕರೆದೊಯ್ಯಲು ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡುವಂತೆ ಆದೇಶಿಸಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವ ಈ ಆಘಾತಕಾರಿ ಸುದ್ದಿ ನನಗೆ ತೀವ್ರ ಕಳವಳ ಉಂಟು ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಕನ್ನಡಕ್ಕೆ ಬಗೆದಿರುವ ಘೋರ ದ್ರೋಹ


ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನು ಮಾತ್ರ ಪ್ರವಾಸಕ್ಕೆ ಆಯ್ಕೆ ಮಾಡುವಂತೆ ಬೆಂಗಳೂರು ಡಿಡಿಪಿಐ ಆದೇಶ ನೀಡಿರುವುದು ಕನ್ನಡಕ್ಕೆ ಬಗೆದಿರುವ ಘೋರ ದ್ರೋಹ ಎಂದು ಗುಡುಗಿದ್ದಾರೆ.


ಇಂಥ ಕರಾಳ ಆದೇಶಕ್ಕೆ ರಾಜ್ಯ ಬಿಜೆಪಿ ಸರಕಾರ ಮತ್ತು ಶಿಕ್ಷಣ ಸಚಿವರೇ ನೇರ ಹೊಣೆ. ಸರಕಾರಕ್ಕೆ ಗೊತ್ತಿಲ್ಲದೆಯೇ ಇಂಥ ಆದೇಶ ಬರಲು ಸಾಧ್ಯವೇ? ತಿಳಿಗೇಡಿ ಆಡಳಿತಕ್ಕೆ ಹಿಡಿದ ಕನ್ನಡಿ ಇದಾಗಿದೆ.


ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದ ಮೇಲೆ ಕನ್ನಡ ಮತ್ತು ಕರ್ನಾಟಕದ ಮೇಲೆ ದಬ್ಬಾಳಿಕೆ ಹೆಚ್ಚುತ್ತಲೇ ಇದೆ. ಕನ್ನಡವನ್ನೇ ಮೂಲೋತ್ಪಾಟನೆ ಮಾಡಿ, ಕನ್ನಡ ಅಸ್ಮಿತೆಯನ್ನೇ ಕಣ್ಮರೆಗೊಳಿಸುವ ಕಿರಾತಕ ಹುನ್ನಾರ ಇದಾಗಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ:  Shivamogga: ಅಂದು ಗೋಕಾಕ್ ಚಳವಳಿ, ಇಂದು ಕುಪ್ಪಳ್ಳಿ ಕಹಳೆ: ಹಂಸಲೇಖ


ಕನ್ನಡ ದ್ರೋಹಿಗಳಿಗೆ ದಿಕ್ಕಾರ


ಕನ್ನಡ, ಕರ್ನಾಟಕ ಎರಡೂ ಕಟುಕರ ಕೈಯ್ಯಲ್ಲೇ ಸಿಕ್ಕಿಬಿದ್ದಿವೆ. ಹಿಂದಿ ಪೋಷಿತ ಆ ಕಬಂಧ ಸಂಕೋಲೆಗಳಿಂದ ನಮ್ಮ ಕನ್ನಡ, ಕರ್ನಾಟಕವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ


ಕೂಡಲೇ ಇಂಥ ದ್ರೋಹದ ಆದೇಶ ನೀಡಿದ ಅಧಿಕಾರಿಯನ್ನು ಕಿತ್ತೊಗೆಯಬೇಕು ಮತ್ತು ಆ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಪ್ರವಾಸಕ್ಕೆ ಕನ್ನಡ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿ  ಕನ್ನಡ ದ್ರೋಹಿಗಳಿಗೆ ದಿಕ್ಕಾರ ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡಿದ್ದಾರೆ.


ಶಿಕ್ಷಣ ಸಚಿವರು ಕ್ಷಮೆ ಕೇಳಲಿ


ಶಿಕ್ಷಣ ಇಲಾಖೆಯ ಹಿಂದಿ ಹೇರಿಕೆ ಆದೇಶದ ವಿರುದ್ಧ ಕರವೇ ಸಹ ಆಕ್ರೋಶ ಹೊರ ಹಾಕಿದೆ. ಈ ಕುರಿತು ಮಾತನಾಡಿರುವ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಜಾ ಮಾಡುವಂತೆ ಆಗ್ರಹಿಸಿದ್ದಾರೆ. ಆದೇಶ ಹೊರಡಿಸಿದ ಸಚಿವರು ಕ್ಷಮೆ ಯಾಚಿಸಬೇಕು. ಈ ಆದೇಶ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗವುದು ಎಂದು ಎಚ್ಚರಿಕೆ ನೀಡಿದರು.


ಈಗಾಗಲೇ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಇಲ್ಲಸಲ್ಲದ್ದನ್ನ ತುರುಕಿದ್ದಾರೆ. ಕುವೆಂಪು, ಬಸವಣ್ಣ ಸೇರಿದಂತೆ ನಾಡಿನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಈಗ ಹಿಂದಿ ಹೇರುವ ಹುನ್ನಾರ ಮಾಡ್ತಿದ್ದಾರೆ. ಹಿಂದಿ ಬಾರದ ಕಾರ್ಮಿಕರ ಮಕ್ಕಳು, ದೀನ ದಲಿತರ ಮಕ್ಕಳು ಏನು ಮಾಡಬೇಕು?ಆ ಮಕ್ಕಳು ಪ್ರವಾಸ ಹೋಗಬಾರದಾ..? ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.


ಶಿಕ್ಷಣ ಇಲಾಖೆಗೆ ನಾಗಾಭರಣ ಪತ್ರ


ಇನ್ನು ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್. ನಾಗಾಭರಣ ಸಹ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಕೇವಲ ಹಿಂದಿ ಭಾಷೆ ಬಂದವರಿಗಷ್ಟೇ ಅವಕಾಶ ಕೊಟ್ಟರೆ, ಕನ್ನಡ ವಿದ್ಯಾರ್ಥಿಗಳಿಗೆ ವಂಚಿಸಿದಂತಾಗುತ್ತದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ ಭಾಷೆ. ಹಿಂದಿ ಭಾಷೆ ತಿಳಿಯದ ಕನ್ನಡದ ವಿದ್ಯಾರ್ಥಿಗಳಿಗೂ ಪ್ರವಾಸದ ಅವಕಾಶ ಕೊಡಬೇಕು.


ಇದನ್ನೂ ಓದಿ:  Chitradurga: ನಾವು ಇನ್ನೊಬ್ಬರ ಆಸ್ತಿ, ಮಠ ಆಕ್ರಮಿಸಲ್ಲ, ನಮ್ಮದನ್ನು ಬಿಡಲ್ಲ ಎಂದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು


ಭಾಷೆಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭೇದ ಭಾವ ಬಿತ್ತುವ ಶಿಕ್ಷಣ ಇಲಾಖೆ ಕ್ರಮ ಸರಿಯಲ್ಲ. ಶಿಕ್ಷಣ ಇಲಾಖೆ ಈ ಕೂಡಲೇ ಆದೇಶ ಹಿಂಪಡೆಯಬೇಕು. ಹಿಂದಿ ಬಂದವರಿಗಷ್ಟೆ ಅಮೃತ‌ ಮಹೋತ್ಸವದ ಪ್ರವಾಸದಲ್ಲಿ‌ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಆದೇಶಕ್ಕೆ ಟಿ.ಎಸ್.ನಾಗಭರಣ ವಿರೋಧ ವ್ಯಕ್ತಪಡಿಸಿದರು.

Published by:Mahmadrafik K
First published: