ಶಿವಮೊಗ್ಗದಲ್ಲಿ ಮುಂದುವರಿದ Hijab Controversy: ನಾವೇನಾದ್ರೂ ಕೊಲೆ ಮಾಡೋಕೆ ಬಂದಿದ್ದೀವಾ? ವಿದ್ಯಾರ್ಥಿನಿ ಆಕ್ರೋಶ

ಶಿವಮೊಗ್ಗ ನಗರದಲ್ಲಿ ಇಂದು ಕೂಡ  ಹಿಜಾಬ್ ವಿವಾದ ತಾರಕ್ಕೇರಿತ್ತು, ಹಿಜಾಬ್ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ, ತರಗತಿ ಪ್ರವೇಶಿಸದೆ 11 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹೊರ ನಡೆದರು.

ಶಿವಮೊಗ್ಗ ಕಾಲೇಜ್

ಶಿವಮೊಗ್ಗ ಕಾಲೇಜ್

  • Share this:
ಶಿವಮೊಗ್ಗ (Shivamogga) ನಗರದಲ್ಲಿ ಶನಿವಾರ ಹಿಜಾಬ್ ವಿವಾದ (Hijab Row) ತಾರಕ್ಕೇರಿತ್ತು. ಹಿಜಾಬ್ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ, ತರಗತಿ ಪ್ರವೇಶಿಸದೇ 11ಕ್ಕೂ ಹೆಚ್ಚು ವಿದ್ಯಾರ್ಥಿನಿಯರು (Students) ಹೊರ ನಡೆದರು. ನಗರದ ಎರಡು ಖಾಸಗಿ ಕಾಲೇಜಿನಲ್ಲಿ (Private College) ಹಿಜಾಬ್ ವಿಚಾರವಾಗಿ ಗೊಂದಲ ಸೃಷ್ಟಿಯಾಗಿತ್ತು. ಬುರ್ಖಾ (burqa) ಮತ್ತು ಹಿಜಾಬ್ (Hijab) ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಕಾಲೇಜು ಆವರಣದಿಂದ ಹಿಂದಿರುಗಿದರು. ಶಿವಮೊಗ್ಗದ ಡಿವಿಎಸ್ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದಿದ್ದರು. ಆದರೆ ಆಡಳಿತ ಮಂಡಳಿಯವರು ತರಗತಿಯಲ್ಲಿ ಬುರ್ಖಾ, ಹಿಜಾಬ್ ಗೆ ಅವಕಾಶವಿಲ್ಲ ಎಂದು ತಿಳಿಸಿದರು. ಇದನ್ನು ಒಪ್ಪದ ವಿದ್ಯಾರ್ಥಿನಿಯರು, ಆಡಳಿತ ಮಂಡಳಿ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಪೋಷಕರು (Parents) ಕೂಡ ವಿದ್ಯಾರ್ಥಿನಿಯರ ಜೊತೆಯಾದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, ‘ವಿಷ ಕುಡಿಯುತ್ತೇವೆ. ಆದರೆ ಹಿಜಾಬ್ ಬಿಡುವುದಿಲ್ಲ. ಹಿಜಾಬ್, ಬುರ್ಖಾ ಧರಿಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ’ ಎಂದರು.

ಹರಿದು ಹೋದ ಬಟ್ಟೆ ಧರಿಸಿ ಬಂದರೂ ತರಗತಿಗೆ ಬಾ ಓದು ಎಂದು ಕರೆಯಬೇಕು. ನಮ್ಮ ಪರೀಕ್ಷೆಗಳು ಹತ್ತಿರ ಬಂದಿವೆ. ಆದರೆ ತರಗತಿ ಒಳಗೆ ನಮ್ಮನ್ನು ಬಿಡುತ್ತಿಲ್ಲ. ನಾವೇನಾದರೂ ಕೊಲೆ ಮಾಡಲು ಬಂದಿದ್ದೇವಾ? ಹಿಜಾಬ್ ಅನ್ನುವುದು ನಮ್ಮ ಹೆಮ್ಮೆ. ಅದನ್ನು ತೆಗೆಯಬೇಕು ಎಂದು ಹೇಳುವುದು ತಪ್ಪು’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:  Mandya: ಈ ಕಾರಣಕ್ಕೆ ಬಾವಿಗೆ ಜಿಗಿದು ತಾಯಿ-ಮಗಳು ಆತ್ಮಹತ್ಯೆ

NES ಕ್ಯಾಂಪಸ್ಸಿನಲ್ಲೂ ಆಕ್ರೋಶ

ಇತ್ತ NES ಶಿಕ್ಷಣ ಸಂಸ್ಥೆ ಆವರಣದಲ್ಲಿನ ಕಾಲೇಜುಗಳಿಗೂ ಬುರ್ಖಾ, ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು. ಆಡಳಿತ ಮಂಡಳಿ ಅವಕಾಶ ನೀಡದ ಹಿನ್ನೆಲೆ ವಿದ್ಯಾರ್ಥಿನಿಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಕಾಲೇಜಿಗೆ ಭೇಟಿ ನೀಡಿ, ಮನವರಿಕೆ ಮಾಡಲು ಯತ್ನಿಸಿದರು. ಆದರೆ ಅವರ ಪ್ರಯತ್ನ ವಿಫಲವಾಯಿತು.

ಸಹ್ಯಾದ್ರಿ ಕ್ಯಾಂಪಸ್ ಕೂಲ್ ಕೂಲ್

ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಇವತ್ತು ಶಾಂತಿಯುತವಾಗಿತ್ತು. ವಿದ್ಯಾರ್ಥಿಗಳು ಎಂದಿನಂತೆ ತರಗತಿಗಳಿಗೆ ಬಂದಿದ್ದರು. ಸಹ್ಯಾದ್ರಿ ಕಾಲೇಜು ಪ್ರವೇಶ ದ್ವಾರದ ಮುಂಭಾಗ ಪೊಲೀಸ್ ಬಂದೊಬಸ್ತ್ ನಿಯೋಜನೆ ಮಾಡಲಾಗಿತ್ತು. ಗುರುತು ಚೀಟಿ ಇದ್ದವರಿಗೆ ಮಾತ್ರ ಕಾಲೇಜು ಆವರಣದೊಳಗೆ ಪ್ರವೇಶ ನೀಡಲಾಯಿತು.

ಶಿವಮೊಗ್ಗ ನಗರದ ಉಳಿದ ಕಾಲೇಜುಗಳಲ್ಲಿಯುವ ತರಗತಿಗಳು ಸುಗಮವಾಗಿ ನಡೆದವು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರದ ಕಾಲೇಜುಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ

ಶಿವಮೊಗ್ಗ ಜಿಲ್ಲೆಯಾದ್ಯಾಂತ ಎಲ್ಲಾ ಶಾಲೆ, ಕಾಲೇಜು ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಫೆ.19ರ ರಾತ್ರಿ 9 ಗಂಟೆವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಶಾಲೆ, ಕಾಲೇಜು ಬಳಿ ಗುಂಪುಗೂಡುವನ್ನು ನಿಷೇಧಿಸಲಾಗಿದೆ.

ಮೂರು ಕಾಲೇಜಿಗೆ ರಜೆ

ಹಿಜಾಬ್, ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದ್ದ ಮೂರು ಕಾಲೇಜುಗಳಿಗೆ ಒಂದು ದಿನ ಹೆಚ್ಚುವರಿ ರಜೆ ಘೋಷಿಸಲಾಗಿತ್ತು. ಫೆ.16ರಂದು ಮೂರು ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಶಿವಮೊಗ್ಗದ ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೈನ್ಸ್ ಮೈದಾನದ ಪಿಯು ಕಾಲೇಜು, ಸಾಗರದ ಸರ್ಕಾರಿ ಪಿಯು ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಫೆ.17ರಿಂದ ಈ ಕಾಲೇಜುಗಳಲ್ಲಿ ತರಗತಿ ಆರಂಭವಾಗಲಿದೆ.

ಇದನ್ನೂ ಓದಿ:  Bengaluru: ಪರೀಕ್ಷೆ ಹತ್ತಿರವಾಗ್ತಿದ್ದಂತೆ ಶಾಕ್ ಕೊಟ್ಟ ಖಾಸಗಿ ಶಾಲೆಗಳು, ಫುಲ್​ ಫೀಸ್ ಕಟ್ಟಿಲ್ಲ ಅಂದ್ರೆ ನೋ ಎಕ್ಸಾಂ

ಹಿಜಾಬ್ ವಿವಾದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಮುಖ ಕಾಲೇಜುಗಳ ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
Published by:Mahmadrafik K
First published: