ಬೆಂಗಳೂರು (ಮಾ.14): ನಾಳೆ ಹೈಕೋರ್ಟ್ನಲ್ಲಿ(High Court) ಹಿಜಾಬ್ ಪ್ರಕರಣದ (Hijab Case) ಕುರಿತು ಅಂತಿಮ ತೀರ್ಪು ಹೊರಬೀಳಲಿದೆ. ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಗೊಳ್ಳುತ್ತಿದ್ದು ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ನಾಳೆಯಿಂದ ಒಂದು ವಾರ ಬೆಂಗಳೂರು (Bengaluru) ನಗರದಾದ್ಯಂತ 144 ಸೆಕ್ಷನ್ (Section 144) ಜಾರಿ ಮಾಡಲಾಗ್ತಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಶಾಲಾ- ಕಾಲೇಜುಗಳಿಗೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು, ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ರಾಜ್ಯಾಧ್ಯಂತ ಶಾಲಾ- ಕಾಲೇಜುಗಳ ಬಳಿಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮೈಸೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.
ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿ
ನಾಳೆ ಹೈಕೋರ್ಟ್ನಲ್ಲಿ ಹಿಜಾಬ್ ತೀರ್ಪು ಪ್ರಕಟಿಸುವ ಹಿನ್ನೆಲೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ಎಂದಿನಂತೆ ಮುಂದುವರಿಯುತ್ತವೆ. ಆದರೆ ಆಂತರಿಕ ಪರೀಕ್ಷೆಗಳನ್ನು ಮುಂದೂಡುವಂತೆ ಆದೇಶ ಹೊರಡಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್
ನಾಳೆ ಹಿಜಾಬ್ ಪ್ರಕರಣದ ತೀರ್ಪು ಹೈಕೋರ್ಟ್ನನಿಂದ ಹೊರಬೀಳುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಮಾಡಲು ಚಿಂತಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳ ಮುಂದೆ ನಾಳೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಕೈಗೊಳ್ಳವ ಬಗ್ಗೆ, ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ.
ಬನವಾಸಿ, ಹೊನ್ನಾವರ, ಭಟ್ಕಳ ತಾಲೂಕಿನ ಮೇಲೆ ಹೆಚ್ಚು ನಿಗಾ ಇಡಲು ಸೂಚಿಸಲಾಗಿದೆ. ಅಹಿತಕರ ಘಟನೆಗಳು ನಡೆಸುವ ವ್ಯಕ್ತಿಗಳ ಮೇಲೆ, ಸಂಘಟನೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡುವ ಬಗ್ಗೆ ಸೇರಿದಂತೆ ಇನ್ನು ಹೆಚ್ಚಿನ ಕ್ರಮಕ್ಕಾಗಿ ಇಂದು ರಾತ್ರಿ 8:30 ಕ್ಕೆ ಎಸ್ಪಿ, ಡಿಸಿ ಮೀಟಿಂಗ್ ನಡೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಸುಮನ್ ಪೆನ್ನೆಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Hijab Row: ನಾಳೆ ಹೈಕೋರ್ಟ್ನಿಂದ ಹಿಜಾಬ್ ಪ್ರಕರಣದ ಅಂತಿಮ ತೀರ್ಪು ಪ್ರಕಟ
ರಾಯಚೂರಿನಲ್ಲೂ ಹೈ ಅಲರ್ಟ್
ನಾಳೆ ಹೈಕೋರ್ಟ್ ನಿಂದ ಹಿಜಾಬ್ ಕೇಸ್ ತೀರ್ಪು ಹಿನ್ನೆಲೆ ಇಂದು ಸರ್ಕಾರ, ಜಿಲ್ಲಾಡಳಿತದ ಮಟ್ಟದಲ್ಲಿ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್ನಲ್ಲಿ ರಾಯಚೂರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಭಾಗಿಯಾಗಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗುವುದು. ಹಿಜಾಬ್-ಕೇಸರಿ ಶಾಲು ವಿವಾದದ ವೇಳೆ ನಿಯೋಜಿಸಲಾಗಿದ್ದ ರೀತಿಯಲ್ಲೇ ಬಿಗಿ ಭದ್ರತೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ತಿಳಿಸಿದ್ದಾರೆ.
ರಾಯಚೂರು ತಾಲ್ಲೂಕು, ಲಿಂಗಸುಗೂರು ತಾಲ್ಲೂಕು ಹಾಗೂ ಸಿಂಧನೂರು ತಾಲ್ಲೂಕುಗಳು ಅತೀ ಸೂಕ್ಷ್ಮ ಪ್ರದೇಶ. ಇನ್ನುಳಿದ ಮಸ್ಕಿ,ಸಿರವಾರ,ಮಾನ್ವಿ ತಾಲ್ಲೂಕುಗಳು ಸೂಕ್ಷ್ಮ ಪ್ರದೇಶ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳ ಬೆಳವಣಿಗೆ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಸದ್ಯ ಈ ಬಗ್ಗೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದು ವಿಸಿ ಬಳಿಕ ಅಧಿಕಾರಿಗಳು ಸೂಚಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದ ರಾಜಕೀಯಕ್ಕೆ ತ್ರಿಕೋನ ಸ್ಪರ್ಧೆಯೇ ಇರಬೇಕು: ‘ಕೈ’ ನಾಯಕ KH Muniyappa ಲೆಕ್ಕಾಚಾರ
ಈ ಜಿಲ್ಲೆಗಳಲ್ಲಿಯೂ ಸೆಕ್ಷನ್ 144 ಜಾರಿ
ನಾಳೆ ಹಿಜಾಬ್ ಪ್ರಕರಣದ ತೀರ್ಪು ಹೈಕೋರ್ಟ್ನಿಂದ ಹೊರಬೀಳುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ, ಗದಗ, ಕಲಬುರಗಿ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯನಗರ, ಬೆಳಗಾವಿ, ಧಾರವಾಡ, ರಾಮನಗರ, ವಿಜಯಪುರ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಧಾರವಾಡ, ಉತ್ತರ ಕನ್ನಡ, ರಾಯಚೂರು, ಶಿವಮೊಗ್ಗ, ಹಾಸನ, ತುಮಕೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ