Hijab Hearing: ಆಧಾರ್ ಕಾರ್ಡ್​​​ನಲ್ಲಿ ಹಿಜಾಬ್ ಧರಿಸದ ಫೋಟೋ ಇದೆ: ಹೈಕೋರ್ಟ್​​ನಲ್ಲಿ ವಾದ-ಪ್ರತಿವಾದ

ಸರ್ಕಾರಿ ಕಾಲೇಜುಗಳ ಪರವಾಗಿ ವಕೀಲ ನಾಗಾನಂದ್ ವಾದ ಮಂಡನೆ ಮಾಡಿದರು. ಅರ್ಜಿದಾರರ ಆಧಾರ್ ಕಾರ್ಡ್ ನಲ್ಲಿ ಹಿಜಾಬ್ ಧರಿಸದ ಫೋಟೋ ಇರುವುದರ ಬಗ್ಗೆ ವಕೀಲರು ಉಲ್ಲೇಖಿಸಿದರು. ಈ ಮೂಲಕ ಅವರು ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್​​ ಧರಿಸದ ಬಗ್ಗೆ ಪ್ರಶ್ನೆ ಉದ್ಭವ ಆಗುತ್ತೆ ಎಂದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ಹೈಕೋರ್ಟ್‌ನ (High Court of Karnataka) ಪೂರ್ಣ ಪೀಠವು ರಾಜ್ಯದ ಕೆಲ ಕಾಲೇಜುಗಳಲ್ಲಿ (Collage) ಹಿಜಾಬ್ (Hijab) ಧರಿಸುವುದನ್ನು ನಿಷೇಧಿಸುವುದರ ವಿರುದ್ಧ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಇಂದೂ ವಾದ-ಪ್ರತಿವಾದವನ್ನು ಆಲಿಸಿ ಮುಂದಿನ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ನಡೆಸಲಿದೆ. ಇಂದು ಸರ್ಕಾರಿ ಕಾಲೇಜುಗಳ ಪರವಾಗಿ ವಕೀಲ ನಾಗಾನಂದ್ ವಾದ ಮಂಡನೆ ಮಾಡಿದರು. ಅರ್ಜಿದಾರರ ಆಧಾರ್ ಕಾರ್ಡ್ ನಲ್ಲಿ ಹಿಜಾಬ್ ಧರಿಸದ ಫೋಟೋ ಇರುವುದರ ಬಗ್ಗೆ ವಕೀಲರು ಉಲ್ಲೇಖಿಸಿದರು. ಈ ಮೂಲಕ ಅವರು ಸಾರ್ವಜನಿಕ  ಸ್ಥಳದಲ್ಲಿ ಹಿಜಾಬ್​​ ಧರಿಸದ ಬಗ್ಗೆ ಪ್ರಶ್ನೆ ಉದ್ಭವ ಆಗುತ್ತೆ ಎಂದು ಹಿರಿಯ ವಕೀಲರಾದ ನಾಗಾನಂದ್ ವಾದ ಮಂಡಿಸಿದರು.

ಇಂಟರ್​​ನಲ್​​​ ಮಾರ್ಕ್ಸ್​​ ಬಗ್ಗೆ ಹೆದರಿಸಿಲ್ಲ  

ಶಿಕ್ಷಕರ ವಿರುದ್ದ ವಿನಾಕಾರಣ ವಿದ್ಯಾರ್ಥಿಗಳು ಆರೋಪ ಮಾಡ್ತಿದ್ದಾರೆ. ನಿಮಗೆ ಇಂಟರ್ ನಲ್ ಮಾರ್ಕ್​​ ನೀಡಲ್ಲ ಅಂತಾ ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡ್ತಿದ್ದಾರೆ. ಸೆಪ್ಟೆಂಬರ್​ನಿಂದ ಎರಡು ತಿಂಗಳು ಸುಮ್ಮನಿದ್ದು, ಮೂರು ತಿಂಗಳ ನಂತರ ಕಂಪ್ಲೇಂಟ್ ಕೊಟ್ಟು, 6 ತಿಂಗಳ ನಂತರ ಕೋರ್ಟ್ ಗೆ ಬಂದ್ರೆ ಹೇಗೆ ನಂಬೋದು ಎಂದು ನಾಗನಂದ್ ಪ್ರಶ್ನಿಸಿದರು. ಶಿಕ್ಷಕರಿಗೆ ಜೀವ ಬೆದರಿಕೆ ಹಾಕಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು  ತಮ್ಮ ಮಕ್ಕಳ ಹಾಗೆ ನೋಡಿಕೊಳ್ತಾರೆ, ಹೀಗಿದ್ದರೂ ಬೆದರಿಕೆ ಹಾಕಲಾಗಿದೆ. ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಪೀಠಕ್ಕೆ ವಕೀಲ ನಾಗಾನಂದ್​ ತಿಳಿಸಿದರು.

ಇದನ್ನೂ ಓದಿ: Hijab Hearing: ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ: ಹೈಕೋರ್ಟ್​​ಗೆ ಸರ್ಕಾರದ ಉತ್ತರ

ಯಾವಾಗ ದೂರು ನೀಡಲಾಗಿದೆ  ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಿಜೆ ಪ್ರಶ್ನಿಸಿದರು. ಅದರ ಕುರಿತು ಮಾಹಿತಿ ಇಲ್ಲ.  ಪರಿಶೀಲನೆ ನಡೆಸಿ ಕೋರ್ಟ್ ಗೆ ಮಾಹಿತಿ ನೀಡುತ್ತೇನೆ ಎಂದು ಎಜಿ ಪ್ರಭುಲಿಂಗ ನಾವದಗಿ ಉತ್ತರಿಸಿದರು. ಸಿಎಫ್ಐ ಸಂಘಟನೆಯವರು ಡ್ರಮ್ ಬಾರಿಸುತ್ತಾ ಹಿಜಾಬ್ ಹಿಜಾಬ್ ಎಂದು ಘೋಷಣೆ ಕೂಗಲಾಗ್ತಿದೆ. ಅವರು ಕಾಲೇಜಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ಇರಬಹುದು. ಅವರು ಅಲ್ಲಿ ವ್ಯಾಸಾಂಗ ಮಾಡ್ತಿಲ್ಲ, ಅವರಿಗೂ ಕಾಲೇಜಿಗೂ ಸಂಬಂಧವೇ ಇಲ್ಲ ಎಂದರು.

ಆತ್ಮಸಾಕ್ಷಿ ಹಕ್ಕು ಮತ್ತು ಧಾರ್ಮಿಕ ಹಕ್ಕು

ಆತ್ಮಸಾಕ್ಷಿ ಹಕ್ಕು ಮತ್ತು ಧಾರ್ಮಿಕ ಹಕ್ಕಿನ ಬಗ್ಗೆ ತುಂಬಾ ವ್ಯತ್ಯಾಸವಿದೆ. ಎರಡರ ನಡುವಿನ ವ್ಯತ್ಯಾಸಕ್ಕೆ ತನ್ನದೇ ರೀತಿಯ ವ್ಯಖ್ಯಾನ ನೀಡಿದ ನಾಗನಂದ್, ಆತ್ಮಸಾಕ್ಷಿ ಹಕ್ಕು ಎನ್ನುವುದು ನಂಬಿಕೆಯನ್ನ ಪ್ರಶ್ನೆ ಮಾಡುತ್ತದೆ. ಧರ್ಮ ನಂಬಿಕೆಯ ವ್ಯವಸ್ಥೆಯನ್ನು ವ್ಯಾಖ್ಯಾನ ಮಾಡುತ್ತದೆ. ಆ ನಂಬಿಕೆಗಳನ್ನು ಪ್ರಶ್ನೆ ಮಾಡುವ ಅವಕಾಶವನ್ನು ಆತ್ಮಸಾಕ್ಷಿ ನೀಡುತ್ತದೆ. ಕಾರಣ ಆತ್ಮಸಾಕ್ಷಿ ಮನಸ್ಸಿನಿಂದ ಹೇಳುತ್ತದೆ. ಧರ್ಮದ ವಿಚಾರ ನಿಯಮಗಳಿಂದ ಉಲ್ಲೇಖವಾಗುತ್ತದೆ ಎಂದರು. ಕೇಶವನಂದಾ ಭಾರತಿ ಕೇಸ್ ಉಲ್ಲೇಖಿಸಿ ನಾಗನಂದ್ ವಾದ ಮಂಡಿಸಿದರು.

ಮಗು, ಪೋಷಕರ ಉದಾಹರಣೆ

10 ವರ್ಷದ ಮಗು ಗಲಾಟೆ ಮಾಡುತ್ತಾ ಇರುತ್ತೆ. ಪೋಷಕರು ಇಷ್ಟು ತುಂಟತನ ಮಾಡುವಂತಿಲ್ಲ ಎಂದು ಹೇಳುತ್ತಾರೆ. ಆದರೆ ಮಗು ಕೇಳುವುದಿಲ್ಲ ತನ್ನ ಪಾಡಿಗೆ ತಾನು ತುಂಟಾಟ ಮಾಡ್ತಿರುತ್ತೆ. ಮಗುವಿಗೆ ಶಿಸ್ತು ಕಲಿಸಲು ಪೋಷಕರು ಕ್ರಮ ತೆಗೆದುಕೊಳ್ಳುತ್ತಾರೆ. ಅದು ಅವರಿಗೆ ಇರುವ ಹಕ್ಕಾಗಿರುತ್ತೆ. ಅದೇ ರೀತಿ ತರಗತಿಯಲ್ಲಿ ಶಿಸ್ತು ತರಲು ಶಿಕ್ಷಕರು ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಅದನ್ನು ತಪ್ಪು ಅಂತಾ ಹೇಳಲು ಸಾಧ್ಯವಿಲ್ಲ. ಮನೆಯಲ್ಲಿದ್ದಾಗ ಮಗು ಗಲಾಟೆ ನಿಯಂತ್ರಿಸಲು ಪೋಷಕರಿಗೆ ಅವಕಾಶ ಇದೆ. ಅದೇ ರೀತಿ ತರಗತಿಯಲ್ಲಿದ್ದಾಗ ಅದರ ನಿಯಂತ್ರಣ ಯಾರು ಮಾಡಬೇಕು ಎಂದು ಉದಾಹರಣೆ ಸಹಿತ ವಕೀಲರು ವಾದಿಸಿದರು.

ಇದನ್ನೂ ಓದಿ: High Court: ಹಿಜಾಬ್ ವೀಡಿಯೋಗಾಗಿ ಮಕ್ಕಳ ಬೆನ್ನು ಬೀಳದಂತೆ 60ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ವಿರುದ್ಧ PIL ಸಲ್ಲಿಕೆ

ಶಾಲೆಗಳಲ್ಲಿ ಶಿಸ್ತು ತರುವುದು ತುಂಬಾನೇ ಮುಖ್ಯ. ಒಬ್ಬರಿಗೆ ಶಿಸ್ತಿನಿ ಪಾಠ ಮಾಡಿದ್ರೆ ಉಳಿದವರು ಸುಮ್ಮನಿರ್ತಾರೆ. ಆದರೆ ಇಲ್ಲಿ ನೀವು ಶಿಸ್ತು ತರುವುದೇ ಸರಿಯಲ್ಲ ಎಂದರೆ ಹೇಗೆ ಎಂದು ಕಾಲೇಜು ಪ್ರಿನ್ಸಿಪಾಲ್ ಪರ ವಕೀಲ ನಾಗನಂದ್ ವಾದ ಮಂಡನೆ ಮಾಡಿದರು.

ಪಟಾಕಿ ನಿಷೇಧದ ಬಗ್ಗೆ ಉಲ್ಲೇಖ

ಆಲಹಾಬಾದ್ ಹೈಕೋರ್ಟ್ ತೀರ್ಪು ಉಲ್ಲೇಖಿಸುತ್ತಿರುವ ನಾಗನಂದ್, ಆರ್ಟಿಕಲ್ 25 (2) ಅಡಿಯಲ್ಲಿ ಸತಿ ಪದ್ದತಿ ಕೇಸ್ ನಿರ್ಮೂಲನೆ ಬಗ್ಗೆ ಸುಪ್ರೀಂ ಕೋರ್ಟ್ ಹಿಂದೆ ಹೇಳಿದೆ. ಅಲ್ಲದೇ ಹಬ್ಬಕ್ಕೆ ಪಟಾಕಿ ಸಿಡಿಸುವುದು ಅಗತ್ಯ ಎಂದಿರುವುದಕ್ಕೆ ಕೋರ್ಟ್ ಬೇಡ ಅಂದಿದೆ. ಕಾಲೇಜು CDCಯಲ್ಲಿ ಏಕರೂಪತೆ ಕಾರಣಕ್ಕೆ ಈ ರೀತಿ ನಿರ್ಧಾರ ಕೈಗೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಿಗೂ ಒಳ್ಳೆಯ ಅಂಶವಾಗಿದೆ. ವಿದ್ಯಾರ್ಥಿಗಳು ಯಾವುದೇ ಧರ್ಮದ ಪ್ರಭಾವದಿಂದ ಮುಕ್ತರಾಗುತ್ತಾರೆ. ಕಾರಣ ಅವರು ಶಾಲೆಗೆ ಬರುವುದು ಅಲ್ಲಿ ಕಲಿಯುವುದಕ್ಕಾಗಿ, ಅಲ್ಲಿ ಬಾಹ್ಯ ಚಿಹ್ನೆಗಳ ಅವಶ್ಯಕತೆ ಏನು ಎಂದು ಪ್ರಶ್ನಿಸುವ ಮೂಲಕ ಹಿರಿಯ ವಕೀಲ ನಾಗಾನಂದ್ ವಾದ ಮುಕ್ತಾಯಗೊಳಿಸಿದರು.
Published by:Kavya V
First published: