South Karnataka: ಮಳೆಯಿಂದ ದಕ್ಷಿಣ ಕರ್ನಾಟಕದ ಹೆದ್ದಾರಿಗಳು ಬಂದ್; ವ್ಯಾಪಾರಿಗಳಿಗೆ ಭಾರೀ ನಷ್ಟ

ದಕ್ಷಿಣ ಕರ್ನಾಟಕ (South Karnataka) ಭಾಗದ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಉದ್ಯಮಿಗಳು ಆಗ್ರಹಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕರುನಾಡಿನಲ್ಲಿ ಕಳೆದ ಕೆಲ ದಿನಗಳಿಂದ ವರುಣನ (Karnataka Rains) ಅಬ್ಬರ ಜೋರಾಗಿಯೇ ಇದೆ. ನದಿಗಳು (Rivers of Karnataka) ತುಂಬಿ ಹರಿಯುತ್ತಿದ್ದು, ಜಲಾಶಯಗಳು (Dams) ಭರ್ತಿ ಸನಿಹದಲ್ಲಿವೆ. ಮಳೆಯಿಂದ ವ್ಯಾಪಾರಿಗಳಿಗೆ ಭಾರೀ ನಷ್ಟವೂ ಎದುರಾಗಿದೆ.  ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದ ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರವನ್ನು ಆಯಾ ಜಿಲ್ಲಾಡಳಿತಗಳು ನಿಯಂತ್ರಿಸುತ್ತಿದ್ದು, ದಕ್ಷಿಣ ಕರ್ನಾಟಕ (South Karnataka) ಭಾಗದ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಉದ್ಯಮಿಗಳು ಆಗ್ರಹಿಸುತ್ತಿದ್ದಾರೆ.

ಎಲ್ಲೆಲ್ಲಿ ಭಾರೀ ವಾಹನಗಳ ಸಂಚಾರ ಬಂದ್​

ಶುಕ್ರವಾರ ಚಿಕ್ಕಮಗಳೂರು ಜಿಲ್ಲಾಡಳಿತ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಹಾಸನ ಜಿಲ್ಲಾಡಳಿತ ಶಿರಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಈ ಎರಡೂ ರಸ್ತೆಗಳು ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಪ್ರದೇಶವನ್ನು ಮತ್ತು ಮೈಸೂರನ್ನು ಕರಾವಳಿ ಪ್ರದೇಶಗಳೊಂದಿಗೆ ಸಂಪರ್ಕಿಸುವ ನಿರ್ಣಾಯಕ ರಸ್ತೆ ಸಂಪರ್ಕಗಳಾಗಿವೆ. ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಪಾಜೆ ಘಾಟ್ ಸೇರಿದಂತೆ ಜಿಲ್ಲೆಯ ಎಲ್ಲಾ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ಜುಲೈ 8 ರಂದು ನಿಷೇಧಿಸಿತ್ತು.

ಇದನ್ನೂ ಓದಿ: National Highway: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣ ಬಂದ್

ಚಿಕ್ಕಮಗಳೂರು ಜಿಲ್ಲಾಡಳಿತ ಹೊರಡಿಸಿರುವ ಆದೇಶದ ಪ್ರಕಾರ, 12,000 ಕೆಜಿಗಿಂತ ಹೆಚ್ಚಿನ ತೂಕದ ವಾಹನಗಳು ಚಾರ್ಮಾಡಿ ಘಾಟ್​ನಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಕೊಡಗು ಜಿಲ್ಲಾಡಳಿತವು 16,200 ಕೆಜಿಗಿಂತ ಹೆಚ್ಚಿನ ತೂಕದ ವಾಹನಗಳನ್ನು ಜಿಲ್ಲೆಯ ರಸ್ತೆಗಳಲ್ಲಿ ಬಳಸುವುದನ್ನು ನಿಷೇಧಿಸಿದೆ.

ಗ್ರಾಹಕರಿಲ್ಲದೆ ವ್ಯಾವಾರಿಗಳ ಪರದಾಟ

ಈ ರಸ್ತೆಗಳಲ್ಲಿ ನೂರಾರು ಹೋಟೆಲ್‌ಗಳು ಮತ್ತು ಅಂಗಡಿ ಮಾಲೀಕರು ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಾರೆ. ಸಕಲೇಶಪುರದ ಹೋಟೆಲ್ ಮಾಲೀಕ ಸಮರ್ಥ್ ಶಾಜಿಲ್ ಅವರು ಟೈಮ್ಸ್​​ ಆಫ್​ ಇಂಡಿಯಾಗೆ ನೀಡಿರುವ ಹೇಳಿಕೆ ಪ್ರಕಾರ, ಈ ರಾಷ್ಟ್ರೀಯ ವಿಸ್ತರಣೆಯು ಹೋಟೆಲ್‌ಗಳು, ಅಂಗಡಿಗಳನ್ನು ನಡೆಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮತ್ತು ಹಲವಾರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಜೀವನಾಡಿಯಾಗಿದೆ. ಇವರ ಗ್ರಾಹಕರು ಚಾಲಕರು, ಪ್ರಯಾಣಿಕರು ಮತ್ತು ಪ್ರವಾಸಿಗರು. ಸಂಚಾರ ಬಂದ್​ನಿಂದ ಯಾವುದೇ ಗ್ರಾಹಕರು ಇರುವುದಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಟ್ರಕ್​​ಗಳು ಸಿಲುಕಿಕೊಂಡು ನಷ್ಟ

ಈ ಬಗ್ಗೆ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಆರ್ ಷಣ್ಮುಗಪ್ಪ ಅವರು ಪ್ರತಿಕ್ರಿಯಿಸಿ, ಇದು ಪ್ರತಿ ವರ್ಷ ಎದುರಿಸುತ್ತಿರುವ ಸಮಸ್ಯೆಯಾಗಿದೆ ಎಂದರು. ಶಿರಾಡಿ ಘಾಟ್ ಮಾರ್ಗವಾಗಿ ಪ್ರತಿದಿನ 30,000 ವಾಹನಗಳು ಸಂಚರಿಸುತ್ತವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಳಪೆ ನಿರ್ವಹಣೆ ಕಾಮಗಾರಿಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು. ದೋಣಿಗಲ್ ಮತ್ತು ಮಾರನಹಳ್ಳಿ ನಡುವೆ ಕಳೆದ ಎರಡು ದಿನಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ 700ಕ್ಕೂ ಹೆಚ್ಚು ಟ್ರಕ್‌ಗಳು ಸಿಲುಕಿಕೊಂಡಿವೆ. ಈ ಪ್ರದೇಶವು ಭಾರೀ ಮಳೆಗೆ ಸಾಕ್ಷಿಯಾಗುತ್ತಿರುವುದರಿಂದ ಅವರ ಸುರಕ್ಷತೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಅವರು ಹೇಳಿದರು.

ಸರ್ವಋತು ರಸ್ತೆ ಸಂಪರ್ಕಕ್ಕೆ ಆಗ್ರಹ

ಇನ್ನು ಕೆಲವು ಟ್ರಕ್‌ಗಳು ಇತರೆಡೆ ಸಿಕ್ಕಿಹಾಕಿಕೊಂಡಿರುವುದರಿಂದ ದಕ್ಷಿಣ ಕನ್ನಡ ಪೊಲೀಸರು ಹಾಗೂ ಜಿಲ್ಲಾಡಳಿತದೊಂದಿಗೆ ಜಂಟಿಯಾಗಿ ತೀರ್ಮಾನ ಕೈಗೊಂಡು ದೋಣಿಗಲ್-ಮಾರನಹಳ್ಳಿ ನಡುವೆ ಸಿಕ್ಕಿಹಾಕಿಕೊಂಡಿರುವ ಟ್ರಕ್‌ಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹಾಸನ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಬೆಂಗಳೂರು ಪ್ರವಾಸಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮಾತನಾಡಿ, ದಕ್ಷಿಣ ಕರ್ನಾಟಕದಿಂದ ಕರಾವಳಿ ಪ್ರದೇಶಗಳಿಗೆ ಸರ್ವಋತು ರಸ್ತೆ ಸಂಪರ್ಕದ ತುರ್ತು ಅಗತ್ಯವಿದೆ. “ಕಳಪೆ ರಸ್ತೆಗಳಿಂದಾಗಿ ಪ್ರವಾಸಿ ವಾಹನಗಳು ಈಗ ಕರಾವಳಿ ಪ್ರದೇಶಗಳಿಗೆ ಸಂಚಾರವನ್ನು ನಿಲ್ಲಿಸಿವೆ. ಕರಾವಳಿ ಪ್ರದೇಶಗಳನ್ನು ತಲುಪಲು ಸೂಚಿಸಲಾದ ಪರ್ಯಾಯ ರಸ್ತೆಗಳು ಸಹ ಉತ್ತಮ ಸ್ಥಿತಿಯಲ್ಲಿಲ್ಲ, ”ಎಂದು ಅವರು ಹೇಳಿದರು.
Published by:Kavya V
First published: