ಪೌರತ್ವ ಕಾಯ್ದೆ ವಿರುದ್ಧ ಇಂದು ಸೌಹಾರ್ದ ಕಾರ್ಯಕ್ರಮ; ಒಂದು ಲಕ್ಷ ಮಂದಿ ಭಾಗಿ ಸಾಧ್ಯತೆ; ಬಿಗಿ ಪೊಲೀಸ್​​ ಬಂದೋಬಸ್ತ್​​​​

ಇಂದು 144 ಸೆಕ್ಷನ್ ಹಾಕಲ್ಲ. ಮದ್ಯಪಾನ ನಿಷೇಧ ಮಾಡಲ್ಲ. ಮೊಬೈಲ್ ನೆಟ್​​ವರ್ಕ್​​ ತೆಗೆಯುವುದಿಲ್ಲ. ಶಾಂತಿ ಸುವ್ಯವಸ್ಥೆ ಸಲುವಾಗಿ ನಾವು ಎಲ್ಲ ಸಪೋರ್ಟ್ ಮಾಡುತ್ತೇವೆ. ಯಾರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ- ಭಾಸ್ಕರ್​​ ರಾವ್​​

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು(ಡಿ.22): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಲ್ಪಸಂಖ್ಯಾತರು ಇಂದು ಬೆಂಗಳೂರಿನಲ್ಲಿ ಸೌಹಾರ್ದ ಕಾರ್ಯಕ್ರಮ ಮಾಡುತ್ತಿದ್ದಾರೆ. ಯಾವುದೇ ರೀತಿ ಪ್ರತಿಭಟನೆ ಮಾಡದೆ ಶಾಂತಿಯುತವಾಗಿ ಸೌಹಾರ್ದ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅನಾಹುತ ಸಂಭವಿಸಿದಂತೆ ನೋಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್​​ ತಿಳಿಸಿದ್ಧಾರೆ.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್​​, ಇಂದು  ನಗರದ ಈದ್ಗಾ ಮೈದಾನದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಂದ ಕಾರ್ಯಕ್ರಮ ನಡೆಯಲಿದೆ. ಮೊದಲಿಗೆ ಇವರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, 16ನೇ ತಾರೀಕು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಸಭೆ ಕರೆದು ಧೈರ್ಯ ತುಂಬಿದ್ದರು. ಹಾಗಾಗಿ ನಾಳೆ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಒಂದು ಸೌಹಾರ್ದ ಸಂದೇಶ ಕೊಡಲಿದ್ದಾರೆ ಎಂದರು.

  ಇನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಮುಗಿಸಲಿದ್ದಾರೆ. ನಗರದ ನಾನಾ ಕಡೆಗಳಿಂದ ಮುಸ್ಲಿಂ ಸಮುದಾಯದ ಮುಖಂಡರು ಬರಲಿದ್ದಾರೆ. ಹಾಗಾಗಿ ಯಾವುದೇ ಟ್ರಾಫಿಕ್ ಅಡಚಣೆಯಾಗದಂತೆ ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಮೈದಾನದಲ್ಲಿ 1 ಸಾವಿರ ಸಿಸಿ ಕ್ಯಾಮರಾಗಳ ಆಳವಡಿಕೆ ಮಾಡಲಾಗಿದೆ. ಮೈದಾನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು ಭಾಸ್ಕರ್​ ರಾವ್​.

  ನಗರದ ಕಂಟೋನ್ಮೆಂಟ್, ಮಿಲ್ಲರ್ಸ್ ರಸ್ತೆ, ಭಾರತೀನಗರ ಕಡೆ ವ್ಯಾಪಕ ಸಂಚಾರ ದಟ್ಟಣೆ ಇರುತ್ತೆ. 53 ಕೆಎಸ್​ಆರ್​​ಪಿ, 60 ಸಿಎಆರ್, ಆಯಾ ಡಿಸಿಪಿಗಳ ನಿಯೋಜನೆ ಮಾಡಲಾಗಿದೆ. 2 ಕಂಪನಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಲಾಗಿದೆ. ಜೋಧಪುರ ಮತ್ತು ಕೊಯಮತ್ತೂರಿನಿಂದ ಎರಡು ಕಂಪನಿ ಕರೆಸಲಾಗಿದೆ. ಈಗಾಗಲೇ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಒಂದು ಸುತ್ತು ನಾವು ಮಾತುಕತೆ ಮಾಡಿದ್ದೇವೆ. ಶಾಂತಿಯುತವಾಗಿ ಅಗಬೇಕು ಎಂದು ಹೇಳಿದ್ದೇವೆ. ಆಯೋಜಕರಿಗೆ ಎಲ್ಲ ನಾವು ಬಿಟ್ಟಿದ್ದೇವೆ. ಭಯ ತೆಗೆದು ಅಭಯ ನೀಡಬೇಕು ಎಂದು ಆಯೋಜಕರಿಗೆ ಹೇಳಿದ್ದೇವೆ ಎಂದು ಹೇಳಿದರು.

  ಇಂದು 144 ಸೆಕ್ಷನ್ ಹಾಕಲ್ಲ. ಮದ್ಯಪಾನ ನಿಷೇಧ ಮಾಡಲ್ಲ. ಮೊಬೈಲ್ ನೆಟ್​​ವರ್ಕ್​​ ತೆಗೆಯುವುದಿಲ್ಲ. ಶಾಂತಿ ಸುವ್ಯವಸ್ಥೆ ಸಲುವಾಗಿ ನಾವು ಎಲ್ಲ ಸಪೋರ್ಟ್ ಮಾಡುತ್ತೇವೆ. ಯಾರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಇದು ಶಾಂತಿ, ಸೌಹಾರ್ದ ಕಾರ್ಯಕ್ರಮ. ಅವರು ಶಾಂತಿ ಸಭೆಗೆ ಮಾತ್ರ ಮನವಿ ಮಾಡಿದ್ದಾರೆ, ಪ್ರತಿಭಟನೆಗೆ ಅಲ್ಲ. ಅಪಾರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ. ನಾಳೆ ಮಿಲ್ಲರ್ ರೋಡ್, ನಂದಿದುರ್ಗ ರಸ್ತೆ ಸಂಚಾರ ಬಂದ್ ಮಾಡಲಾಗುವುದು ಎಂದರು.

  ಇದನ್ನೂ ಓದಿ: ಮಂಗಳೂರಿನಲ್ಲಿ ಕರ್ಫ್ಯೂ ಪುನರಾರಂಭ; ನಾಳೆಯಿಂದ ಮತ್ತೆ ನಿಷೇಧಾಜ್ಞೆ

  ಸಾರ್ವಜನಿಕರಿಗೆ ಬದಲಿ ಮಾರ್ಗಗಳನ್ನ ಸೂಚಿಸಲಾಗಿದೆ. ಜಯಮಹಲ್, ಆರ್​​. ಟಿ ನಗರ, ಮೂಲಕ ಮೇಖ್ರಿ ಸರ್ಕಲ್ ಮೂಲಕ ಸಂಚಾರ ಮಾಡಬೇಕು. ಫನ್ ವರ್ಲ್ಡ್, ಅಮಾನುಲ್ಲ ಮಂಡಿ ಸೇರಿ ನಾಲ್ಕು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಾಳೆ ಯಾರು ಬಲವಂತವಾಗಿ ಅಂಗಡಿ ಮುಗ್ಗಟ್ಟು ಬಂದ್ ಮಾಡುವಂತಿಲ್ಲ. ಶಾಲಾ ಕಾಲೇಜುಗಳು, ಕಚೇರಿಗಳು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಬಲವಂತವಾಗಿ ಅಂಗಡಿ ಮುಗ್ಗಟ್ಟು ಮುಚ್ಚಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ ಒಂದು ಲಕ್ಷ ಮಂದಿ ಭಾಗಿಯಾಗುವ ಸಾದ್ಯತೆ ಇದೆ ಎಂದು ತಿಳಿಸಿದರು.
  Published by:Ganesh Nachikethu
  First published: