ಸಿಎಎ ಪ್ರತಿಭಟನೆ ಹತ್ತಿಕ್ಕಲು ಹೊರಡಿಸಿದ್ದ ನಿಷೇಧಾಜ್ಞೆ ಕಾನೂನು ಬಾಹಿರ: ಹೈಕೋರ್ಟ್​​

ಆರಂಭದಿಂದಲೂ ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ಜಾರಿ ವಿರೋಧಿಸಿ ರಾಜ್ಯದಲ್ಲಿನ ಹೋರಾಟದ ಕಿಚ್ಚು ಜೋರಾಗಿತ್ತು. ಇಬ್ಬರು ಪ್ರತಿಭಟನಾಕಾರರು ಹೋರಾಟದ ವೇಳೆ ಸಾವನ್ನಪ್ಪಿದ ಬಳಿಕ ಮಂಗಳೂರಿನಲ್ಲಿ ಪರಿಸ್ಥಿರಿ ತೀರಾ ಹದಗೆಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜೊತೆಗೆ ಕರ್ಫ್ಯೂ ಜಾರಿ ಮಾಡಿ, 48 ಗಂಟೆಗಳ ಕಾಲ ಇಂಟರ್​ನೆಟ್​ ನಿಷೇಧ ಮಾಡಲಾಗಿತ್ತು. ಬಳಿಕ 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಲಾಗಿತ್ತು.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

 • Share this:
  ಬೆಂಗಳೂರು(ಫೆ.13): ಎನ್​​ಆರ್​ಸಿ ಮತ್ತು ಸಿಎಎ ವಿರುದ್ಧ ಪ್ರತಿಭಟನೆ ಹತ್ತಿಕ್ಕಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೊರಡಿಸಿದ್ದ ನಿಷೇಧಾಜ್ಞೆ ಕಾನೂನು ಬಾಹಿರ ಎಂದು ಹೈಕೋರ್ಟ್ ತಪರಾಕಿ ಬಾರಿಸಿದೆ. ಈ ಹಿಂದೆ ಪೌರತ್ವ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದ ಹೊತ್ತಲ್ಲೇ ಮೂರು ದಿನಗಳ ಕಾಲ ನಗರದಾದ್ಯಂತ ಭಾಸ್ಕರ್​​​ ನಿಷೇಧಾಜ್ಞೆ ಹೊರಡಿಸಿದ್ದರು. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​ ಹೀಗೆ ಭಾಸ್ಕರ್​​​ ರಾವ್​​​ ಹೇರಿದ್ದ ನಿಷೇಧಾಜ್ಞೆಗೆ ಛೀಮಾರಿ ಹಾಕಿದೆ. 

  ಈ ಹಿಂದೆ ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಭಾಸ್ಕರ್​​​​​​ ಹೊರಡಿಸಿದ ನಿಷೇಧಾಜ್ಞೆ ವಿರುದ್ಧ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಪ್ರೊ. ರಾಜೀವಗೌಡ ನೇತೃತ್ವದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಪಿಯುಸಿಎಲ್‌ ಸಂಘಟನೆ ಕಾರ್ಯಕರ್ತರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಮಾಡುವ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿತ್ತು. ನಿಷೇಧಾಜ್ಞೆ ಜಾರಿಗೊಳಿಸಿ ಭಾಸ್ಕರ ರಾವ್‌ ಹೊರಡಿಸಿದ್ದ ಆದೇಶ 'ಕಾನೂನು ಬಾಹಿರ. ಆಯುಕ್ತರ ಈ ಆದೇಶ ಕಾನೂನು ಪರಿಶೀಲನೆ ಎದುರು ನಿಲ್ಲುವುದಿಲ್ಲ. ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದ ಅವಧಿ ಮುಕ್ತಾಯಗೊಂಡಿದೆ. ಹಾಗಾಗಿ ಆಯಕ್ತರ ಆದೇಶ ಕಾನೂನು ಬಾಹಿರ ಎಂದಷ್ಟೇ ಹೇಳಬಹುದು ಎಂದು ಹೈಕೋರ್ಟ್​ ಹೇಳಿತು.

  ಆರಂಭದಿಂದಲೂ ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ಜಾರಿ ವಿರೋಧಿಸಿ ರಾಜ್ಯದಲ್ಲಿನ ಹೋರಾಟದ ಕಿಚ್ಚು ಜೋರಾಗಿತ್ತು. ಇಬ್ಬರು ಪ್ರತಿಭಟನಾಕಾರರು ಹೋರಾಟದ ವೇಳೆ ಸಾವನ್ನಪ್ಪಿದ ಬಳಿಕ ಮಂಗಳೂರಿನಲ್ಲಿ ಪರಿಸ್ಥಿರಿ ತೀರಾ ಹದಗೆಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜೊತೆಗೆ ಕರ್ಫ್ಯೂ ಜಾರಿ ಮಾಡಿ, 48 ಗಂಟೆಗಳ ಕಾಲ ಇಂಟರ್​ನೆಟ್​ ನಿಷೇಧ ಮಾಡಲಾಗಿತ್ತು. ಬಳಿಕ 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಲಾಗಿತ್ತು.

  ಇದನ್ನೂ ಓದಿ: ಅಶೋಕ್ ಹೆಸರು ಹೇಳಿ ತುರ್ತಾಗಿ ಪೋಸ್ಟ್ ಮಾರ್ಟಂ ಮಾಡಿಸಿದರು: ಡಾ. ಮಹಾಂತೇಶ್

  ನಂತರ ಡಿಸೆಂಬರ್​​ 18ರಿಂದ 21ರ ಮಧ್ಯರಾತ್ರಿವರೆಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆ ಮೂರು ದಿನಗಳ ಅವಧಿಯಲ್ಲಿ ಮೆರವಣಿಗೆ, ಪ್ರತಿಭಟನೆ ಮಾಡುವಂತಿರಲಿಲ್ಲ. ಶಾಲಾ- ಕಾಲೇಜು, ಹೂ ಮಾರುಕಟ್ಟೆ, ಹಣ್ಣು ತರಕಾರಿ ಮಾರುಕಟ್ಟೆ, ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ಆಟೋಗಳಿಗೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ, ಹೀಗಾಗಿ ಅವುಗಳು ಎಂದಿನಂತೆ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆ ಮುಂದುವರೆದಿತ್ತು.

  ಪೌರತ್ವ ತಿದ್ದುಪಡಿ ಕಾಯ್ದೆ ಪರ ಅಥವಾ ವಿರೋಧ ಪ್ರತಿಭಟನೆ ನಡೆಸಲು ಯಾವುದಕ್ಕೂ ಅವಕಾಶವಿಲ್ಲ ಎಂದು ತುರ್ತು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಸಿಎಎ ಪ್ರತಿಭಟನೆಗೆ ನಾವು ಅವಕಾಶ ನೀಡಿಲ್ಲ. ಇವತ್ತು ಪರ ಮಾಡ್ತಿವಿ ಅಂತ ಕೆಲವರು ಕೇಳುತ್ತಿದ್ದಾರೆ, ಕ್ಯಾಂಡಲ್ ಹಚ್ಚೋದು. ಮೆರವಣಿಗೆ ಇವಕ್ಕೆಲ್ಲ ಅವಕಾಶ ಕೊಟ್ಟಿಲ್ಲ. ದೇಶದಲ್ಲಿ ಈ ಬಗ್ಗೆ ಏನಾಗ್ತಿದೆ ಅನ್ನೋದು ನಿಮಗೆಲ್ಲ ಗೊತ್ತಿದೆ. ಈ ಉದ್ದೇಶದಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದರು.
  First published: