ಶಾಸಕರ ಅಪಹರಣ ಮಾಡಿದ್ದೀರಾ? ಅತೃಪ್ತರ ಮುಖಂಡ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ನೋಟೀಸ್

ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ನಾಪತ್ತೆಯಾಗಿದ್ದಾರೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯ ಸಂಬಂಧ ರಮೇಶ್ ಜಾರಕಿಹೊಳಿ ಅವರಿಗೆ ಹೈಕೋರ್ಟ್ ನೋಟೀಸ್ ನೀಡಿದೆ.

Vijayasarthy SN | news18
Updated:February 12, 2019, 11:32 AM IST
ಶಾಸಕರ ಅಪಹರಣ ಮಾಡಿದ್ದೀರಾ? ಅತೃಪ್ತರ ಮುಖಂಡ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ನೋಟೀಸ್
ರಮೇಶ್​ ಜಾರಕಿಹೊಳಿ
Vijayasarthy SN | news18
Updated: February 12, 2019, 11:32 AM IST
ಬೆಂಗಳೂರು(ಫೆ. 12): ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಾಪತ್ತೆ ಪ್ರಕರಣ ಸಂಬಂಧ ಕಾಂಗ್ರೆಸ್​ನ ಅತೃಪ್ತ ಶಾಸಕರ ಲೀಡರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಹೈಕೋರ್ಟ್ ನೋಟೀಸ್ ನೀಡಿದೆ. ಬೆಳಗಾವಿಯ ಅಥಣಿ ಮೂಲದ ಸಾಮಾಜಿಕ ಕಾರ್ಯಕರ್ತ ದಯಾನಂದ್ ಹಿರೇಮಠ್ ಅವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ ಸಂಬಂಧ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಈ ನೋಟೀಸ್ ಜಾರಿ ಮಾಡಿದೆ. ಹಾಗೆಯೇ, ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಗೂ ನೋಟೀಸ್ ಕೊಟ್ಟಿದೆ.

ದೂರಿನಲ್ಲಿ ಏನಿದೆ?

ತಮ್ಮ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರು ನಾಪತ್ತೆಯಾಗಿದ್ದಾರೆ. ಮಾಧ್ಯಮಗಳಲ್ಲಿ ತಮ್ಮ ಶಾಸಕರು ರಮೇಶ್ ಜಾರಕಿಹೊಳಿ ಅವರೊಂದಿಗೆ ಮುಂಬೈನ ಹೋಟೆಲ್​ವೊಂದರಲ್ಲಿ ಇದ್ದಾರೆಂಬ ಸುದ್ದಿ ಬಂದಿದೆ. ಜಾರಕಿಹೊಳಿ ಅವರು ತಮ್ಮ ಶಾಸಕ ಮಹೇಶ್ ಕುಮಟಳ್ಳಿ ಅವರನ್ನ ಅಪಹರಿಸಿ ಗೃಹ ಬಂಧನದಲ್ಲಿಟ್ಟಿರಬಹುದೆಂಬ ಅನುಮಾನವಿದೆ. ರಮೇಶ್ ಜಾರಕಿಹೊಳಿ ಅವರು ತಮ್ಮನ್ನು ಬಿಜೆಪಿಗೆ ಸೇರುವಂತೆ ಬಲವಂತಪಡಿಸುತ್ತಿದ್ದಾರೆಂದು ಮಹೇಶ್ ಅವರು ತಮ್ಮೊಂದಿಗೆ ಆತಂಕ ತೋಡಿಕೊಂಡಿದ್ದರು ಎಂದು ದಯಾನಂದ್ ಹಿರೇಮಠ್ ಅವರು ತಮ್ಮ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ವಿವರಿಸಿದ್ದರು.

ಇದನ್ನೂ ಓದಿ: ಯುವತಿಯನ್ನು ಕಾರಿನಿಂದ ಹೊರಗೆಳೆದು 10 ಮಂದಿಯಿಂದ ಸಾಮೂಹಿಕ ಅತ್ಯಾಚಾರ!

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು, ರಮೇಶ್ ಜಾರಕಿಹೊಳಿ ಅವರಿಂದ ಉತ್ತರ ಕೋರಿ ನೋಟೀಸ್ ಕೊಟ್ಟಿದೆ. ಮಹೇಶ್ ಕುಮಟಳ್ಳಿ ಅವರನ್ನು ನೀವೇ ಕರೆದೊಯ್ದು ಕೂಡಿಟ್ಟಿದ್ದೀರೆಂಬ ಆರೋಪಗಳಿವೆ. ಇದಕ್ಕೆ ನೀವು ಉತ್ತರ ಕೊಡಬೇಕೆಂದು ನ್ಯಾಯಾಲಯವು ಈ ನೋಟೀಸ್​ನಲ್ಲಿ ಸೂಚಿಸಿದೆ.

ಹಾಗೆಯೇ, ಮಹೇಶ್ ಕುಮಟಳ್ಳಿ ಅವರು ಎಲ್ಲಿದ್ದಾರೆಂದು ಹುಡುಕಿ ಪತ್ತೆ ಹಚ್ಚಬೇಕೆಂದು ಅಥಣಿ ಠಾಣೆಯ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ, ಈ ಪ್ರಕರಣದಲ್ಲಿ ಸರಕಾರದ ನಿಲುವೇನೆಂಬುದನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರಕಾರಕ್ಕೂ ಕೋರ್ಟ್ ನೋಟೀಸ್ ಕೊಟ್ಟಿದೆ.ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬೆನ್ನತ್ತುತ್ತಿದ್ದಾರೆ ಸಿಎಂ ಗುಪ್ತಚರರು..! ಬೆಂಗಳೂರು, ಮುಂಬೈನಲ್ಲಿ ಭರ್ಜರಿ ತಲಾಶ್

ವಿಪ್ ಜಾರಿ ಮಾಡಿದರೂ ಶಾಸಕಾಂಗ ಸಭೆ, ಬಜೆಟ್ ಅಧಿವೇಶನಗಳಿಗೆ ಗೈರಾಗಿರುವ ರಮೇಶ್ ಜಾರಕಿಹೊಳಿ ಅವರು ತಮ್ಮೊಂದಿಗೆ ಇನ್ನೂ ಮೂವರು ಅತೃಪ್ತರನ್ನು ಜೊತೆಯಲ್ಲಿಟ್ಟುಕೊಂಡಿರುವ ಸಾಧ್ಯತೆ ಇದೆ. ಈ ನಾಲ್ವರು ಶಾಸಕರ ಅನರ್ಹತೆಗೆ ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದ್ದು, ಸ್ಪೀಕರ್ ಅವರಿಗೆ ಮನವಿಯನ್ನೂ ಮಾಡಿದೆ. ಇದೇ ವೇಳೆ, ಆಡಿಯೋ ಪ್ರಕರಣದ ಸದ್ದು ರಾಷ್ಟ್ರಾದ್ಯಂತ ಆಗಿದ್ದು ಬಿಜೆಪಿಯ ಆಪರೇಷನ್ ಕಮಲದ ಪ್ರಯತ್ನಕ್ಕೆ ಮುಖಭಂಗವಾದಂತಾಗಿದೆ. ಇವೆಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಅಜ್ಞಾತವಾಸದಿಂದ ಬೇಗ ವಾಪಸ್ ಬರುವ ಕಾಲ ಸನ್ನಿಹಿತವಾಗುತ್ತಾ ಎಂಬುದು ಪ್ರಶ್ನೆ.
First published:February 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ