ಬೆಂಗಳೂರು(ಫೆ.27): ಮಂಗಳೂರು ಗೋಲಿಬಾರ್ ಪ್ರಕರಣ ಸಂಬಂಧ 16 ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಹೋರಾಟದ ವೇಳೆ ಮಂಗಳೂರಿನಲ್ಲಿ ಘರ್ಷಣೆ ಸಂಭವಿಸಿತ್ತು. ಅಂದು ಮಂಗಳೂರು ಉತ್ತರ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದರು ಎಂಬ ಆರೋಪದಡಿ ಹಲವರನ್ನು ಬಂಧಿಸಲಾಗಿತ್ತು. ಈ ಪೈಕಿ ಈಗ 16 ಮಂದಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ಇನ್ನು ಸುಹೈಲ್ ಹಾಗೂ ತಂಝೀಲ್ ಸೇರಿದಂತೆ ಒಟ್ಟು 16 ಆರೋಪಿಗಳು ಜಾಮೀನು ಕೋರಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ನ್ಯಾಯಪೀಠ, 16 ಮಂದಿಗೆ ಜಾಮೀನು ಮಂಜೂರು ಮಾಡಿದೆ.
ಇತ್ತೀಚೆಗೆ
ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ಮ್ಯಾಜಿಸ್ಟಿರಿಯಲ್ ವಿಚಾರಣೆ ನಡೆಸಲು ಉಡುಪಿ ಜಿಲ್ಲಾ ದಂಡಾಧಿಕಾರಿಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕಳೆದ ವರ್ಷ ಡಿಸೆಂಬರ್ 19ನೇ ತಾರೀಕಿನಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಬಗ್ಗೆ ಯಾರ ಬಳಿಯಾದರೂ ವಿಡಿಯೋ ತುಣುಕು ಮತ್ತು ಸಮರ್ಪಕ ಸಾಕ್ಷಾಧಾರಗಳಿದ್ದರೆ ಸಲ್ಲಿಸಬಹುದು. ಇದಕ್ಕೆ ಫೆಬ್ರವರಿ 19ನೇ ತಾರೀಕು ಕೊನೆಯ ಅವಕಾಶ ಎಂದು ಪ್ರಕಟನೆ ಹೊರಡಿಸಿತ್ತು.
ಮಂಗಳೂರು ಗೋಲಿಬಾರ್ನಲ್ಲಿ ಇಬ್ಬರು ಅಮಾಯಕರು ಮೃತಪಟ್ಟಿದ್ಧಾರೆ. ಪ್ರತಿಭಟನಾಕಾರರ ಮೇಲಿನ ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್ಗೆ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಮತ್ತು ಉಮರ್ ಎಂಬುವರು ಅರ್ಜಿ ಸಲ್ಲಿಸಿದರು. ಈ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಪೊಲೀಸರ ಗೋಲಿಬಾರ್ ಕುರಿತಂತೆ ಸೂಕ್ತ ದಾಖಲೆಗಳನ್ನು ನೀಡುವಂತೆ ಆದೇಶಿಸಿತ್ತು.
ಇದನ್ನೂ ಓದಿ: 1 ಕೋಟಿ. ರೂ ಪರಿಹಾರ ಕೇಳಿದ ಜಾಮಿಯಾ ವಿದ್ಯಾರ್ಥಿ: ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ಹೈಕೋರ್ಟ್ ನೋಟಿಸ್
ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಂತೆಯೇ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಈ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಬೆನ್ನಲ್ಲೇ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಾದ್ ವಿರುದ್ಧವೇ ಎಫ್ಐಆರ್ ದಾಖಲಿಸುವ ಮೂಲಕ ಪೊಲೀಸರು ವಿವಾದಕ್ಕೆ ಕಾರಣರಾಗಿದ್ದರು. ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರನ್ನು ಕೊಲ್ಲು ಸಂಚು ರೂಪಿಸಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿತ್ತು.ಈ ಘಟನೆಗೆ ಸಂಬಂಧಿಸಿದಂತೆ ಮೃತ ಅಬ್ದುಲ್ ಜಲೀಲ್ ಮತ್ತು ನೌಶಾದ್ ಸೇರಿದಂತೆ 29 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಗುಂಡಿನ ದಾಳಿಗೆ ಬಲಿಯಾದ ಜಲೀಲ್ನನ್ನು 3ನೇ ಆರೋಪಿಯೆಂದು ಹಾಗೂ ನೌಶಾದ್ನನ್ನು 8ನೇ ಆರೋಪಿಯೆಂದು ನಮೂದಿಸಲಾಗಿದೆ. ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು, ಅವರ ಸಾವಿಗೆ ನ್ಯಾಯ ದೊರಕಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೃತರ ವಿರುದ್ಧವೇ ಎಫ್ಐಆರ್ ದಾಖಲಿಸಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮಧ್ಯೆಯೇ ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಹೈಕೋರ್ಟ್ ಮೆಟ್ಟಿಲೇರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ