ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಜೈಲಿನಲ್ಲಿರುವ ನಟಿಮಣಿಯರ ಜಾಮೀನು ಅರ್ಜಿಯನ್ನು ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದೆ. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ದಸರಾ ಹಬ್ಬಕ್ಕೆ ಜಾಮೀನು ಸಿಗುವ ಆಸೆಯಲ್ಲಿದ್ದ ನಟಿಯರಿಗೆ ಮತ್ತೆ ನಿರಾಸೆಯಾಗದೆ.
ಡಗ್ರ್ ಜಾಲದ ನಂಟಿನಲ್ಲಿ ಸಿಲುಕಿ ಬಂಧನವಾಗಿರುವ ನಟಿಯರಾದ ರಾಗಿಣಿ ದ್ವೀವೆದಿ ಮತ್ತು ಸಂಜನಾ ಗಲ್ರಾಣಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನಟಿ ಸಂಜನಾ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು. ಸಿಸಿಬಿ ಪೊಲೀಸರು ನಟಿ ಸಂಜನಾ ಮನೆ ಮೇಲೆ ದಾಳಿ ನಡೆಸುವ ಮುನ್ನ ಎನ್ ಡಿಪಿಎಸ್ ಕಾಯ್ದೆಯ ಸೆಕ್ಷನ್ 42 ಪಾಲಿಸಿಲ್ಲ. ಅಲ್ಲದೆ, ಪೊಲೀಸರು ಸರ್ಚ್, ಸೀಜ್ ಮಾಡುವ ಪ್ರಕ್ರಿಯೆ ಪಾಲಿಸಿಲ್ಲ. ದಾಳಿ ನಡೆಸಿದ ವೇಳೆ ಆರೋಪಿತೆ ಸಂಜನಾರ ಮನೆಯಲ್ಲಿ ಪೊಲೀಸರು ಡ್ರಗ್ಸ್ ವಶಕ್ಕೆ ಪಡೆದಿಲ್ಲ. ಸಂಜನಾ ವಿರುದ್ಧದ ಆರೋಪಕ್ಕೂ ಕೇಸಿಗೂ ಸಂಬಂಧವಿಲ್ಲ. ಯಾವುದೇ ಸಾಕ್ಷ್ಯಗಳಿಲ್ಲದೇ ಸಂಜನಾ ಬಂಧನ ಮಾಡಲಾಗಿದೆ. ಹೀಗಾಗಿ ಸಂಜನಾಗೆ ಜಾಮೀನು ನೀಡಲು ಮನವಿ ಸಂಜನಾ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದರು.
ಇದೇ ವೇಳೆ ನಟಿ ರಾಗಿಣಿ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಂಡಿಸಿ ಜಾಮೀನು ನೀಡುವಂತೆ ಕೋರಿದರು. ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಅಮಾಯಕಿ. ಆಕೆಗೆ ಇದರ ಬಗ್ಗೆ ಮಾಹಿತಿಯೂ ಇಲ್ಲ. ಅಲ್ಲದೆ, ಸಿಸಿಬಿ ಪೊಲೀಸರು ರಾಗಿಣಿ ವಿರುದ್ಧ ಯಾವುದೇ ಸಾಕ್ಷ್ಯ ಸಂಗ್ರಹಿಸಿಲ್ಲ. ನಟಿ ಮನೆ ಮೇಲೆ ಸಿಸಿಬಿ ಪೊಲೀಸರು ಸರ್ಚ್ ವೇಳೆ ಡ್ರಗ್ಸ್ ಸಿಗದಿದ್ದರೂ ಗಂಭೀರ ಕೇಸ್ ಹಾಕಿದ್ದಾರೆ. ಇನ್ನು, ಪೊಲೀಸರು ತನಿಖೆಗೆ ಸಹಕರಿಸಿಲ್ಲ ಎಂದು ಹೇಳುತ್ತಾರೆ. ಆದ್ರೆ ನಟಿ ರಾಗಿಣಿ ಸಿಸಿಬಿ ತನಿಖೆಗೆ ರಾಗಿಣಿ ಸಹಕಾರ ನೀಡಿದ್ದಾರೆ. ಅಲ್ಲದೆ, ನಟಿ ರಾಗಿಣಿ ಈಗಾಗಲೇ ಕಳೆದ ಒಂದೂವರೆ ತಿಂಗಳಿನಿಂದ ಬಂಧನದಲ್ಲಿದ್ದಾರೆ. ಆದ್ದರಿಂದ ಜಾಮೀನು ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಕೀಲರು ಮನವಿ ಮಾಡಿದರು.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಗೆ ನೀಡಲು ವಿರೋಧ; ಕಟ್ಟಡಕ್ಕೆ ಬೀಗ ಜಡಿದು ಪ್ರತಿಭಟನೆ
ನಟಿಮಣಿಯರ ವಾದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿಸಿಬಿ ಎಸ್ಪಿಪಿ ವೀರಣ್ಣ ತಿಗಡಿ, ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಎಲ್ಲಾ ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಈ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುತ್ತಾರೆ. ಇನ್ನು ಕೆಲ ಆರೋಪಿಗಳು ಪೊಲೀಸರ ಮೇಲೆಯೇ ಪ್ರಭಾವ ಬಳಸಿದ್ದಾರೆ. ಮಾಹಿತಿ ಸೋರಿಕೆ ಆರೋಪದಡಿ ಸಿಸಿಬಿ ಎಸಿಪಿ ಹಂತದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಕೆಲ ಆರೋಪಿಗಳು ಈಗಲೂ ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಿದ ನಂತರ ಡಗ್ರ್ ಕೇಸ್ಗೆ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯಲಿದೆ. ಡ್ರಗ್ಸ್ ಪ್ರಕರಣದ ತನಿಖೆ ಇನ್ನೂ ತನಿಖಾ ಹಂತದಲ್ಲಿದು, ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಬಹುದು. ಹೀಗಾಗಿ ಸಂಜನಾ, ರಾಗಿಣಿ ಸೇರಿದಂತೆ ಆರೋಪಿಗಳಿಗೆ ಜಾಮೀನು ಬೇಡವೆಂದು ಹೈಕೋರ್ಟ್ ನ್ಯಾಯಪೀಠಕ್ಕೆ ಸಿಸಿಬಿಯ ಎಸ್ಪಿಪಿ ಕೇಳಿಕೊಂಡರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿಸಿದೆ. ದಸರಾ ಹಬ್ಬಕ್ಕೆ ಜಾಮೀನು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ನಟಿ ರಾಗಿಣಿ ಮತ್ತು ಸಂಜನಾಗೆ ಭಾರಿ ನಿರಾಸೆಯಾಗಿದೆ. ಜಾಮೀನು ಸಿಗುತ್ತದೋ ಇಲ್ಲವೋ ಎಂಬ ಅನಿಶ್ಚಿತ ಸ್ಥಿತಿಯಲ್ಲಿ ಅವರು ದಿನದೂಡುವುದು ಅನಿವಾರ್ಯವಾಗಿದೆ.
ವರದಿ: ಮುನಿರಾಜು ಹೊಸಕೋಟೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ