ಬೆಂಗಳೂರು ( ಮೇ.14) : ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಮೆಕ್ಕಾಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.
ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನಲಪಾಡ್ ಜೈಲುಪಾಲಾಗಿ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಈ ನಡುವೆ ಕೋರ್ಟ್ ಷರತ್ತು ವಿಧಿಸಿ ನಲಪಾಡ್ ಗೆ ಜಾಮೀನು ನೀಡಿತ್ತು. ಈ ವೇಳೆ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ಕೋರ್ಟ್ ಸೂಚಿಸಿತ್ತು. ಆದರೆ ಮೊಹಮ್ಮದ್ ನಲಪಾಡ್ ಮೆಕ್ಕಾ ಮದೀನಾ ಯಾತ್ರೆಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಮೊಹಮ್ಮದ್ ನಲಪಾಡ್ ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಮೆಕ್ಕಾ ಯಾತ್ರೆ ಕೈಗೊಳ್ಳಲು ಅನುಮತಿ ನೀಡಿದೆ. ಮೇ 25 ರಿಂದ ಜೂನ್ 16 ರವರೆಗೆ ಮೆಕ್ಕಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾಗೆ ತೆರಳಲು ಅವಕಾಶ ನೀಡಿದೆ.
2018ರ ಫೆಬ್ರವರಿಯಲ್ಲಿ ಬಂಧಿತನಾಗಿದ್ದ ನಲಪಾಡ್ ಜೈಲಿನಲ್ಲಿದ್ದು 116 ದಿನಗಳ ಬಳಿಕ ಹೈಕೋರ್ಟ್ ಜಾಮೀನು ನೀಡಿತ್ತು. 2 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಪಡೆದಿರುವ ನ್ಯಾಯಾಲಯ, ಸಾಕ್ಷ್ಯ ನಾಶ ಮಾಡದಂತೆ, ಬೆಂಗಳೂರು ಬಿಟ್ಟು ಎಲ್ಲಿಗೂ ತೆರಳದಂತೆ ಷರತ್ತು ಕೂಡ ವಿಧಿಸಿತ್ತು.
ಇದನ್ನೂ ಓದಿ : 3 ತಿಂಗಳ ಬಳಿಕ ಜೈಲು ಹಕ್ಕಿ ನಲಪಾಡ್ಗೆ ಬಿಡುಗಡೆ ಭಾಗ್ಯ: ಈವರೆಗೆ ಏನೇನಾಯ್ತು?
ಆದರೆ ಮೊಹಮ್ಮದ್ ನಲಪಾಡ್ ಮೆಕ್ಕಾ ಯಾತ್ರೆಗೆ ತೆರಳಲು ಒಂದು ತಿಂಗಳು ಕಾಲಾವಕಾಶ ನೀಡುವಂತೆ, ಷರತ್ತು ಸಡಿಲಿಸುವಂತೆ ಮನವಿ ಮಾಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಆದರೆ ನ್ಯಾಯಾಧೀಶ ನಟರಾಜನ್ ಈ ಮನವಿಯನ್ನು ತಿರಸ್ಕರಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ