ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ (Accused) ಕಕ್ಷಿದಾರರಿಂದ ವಕೀಲರಾದ ಕಾಂಚನ್ ಶ್ರೀನಿವಾಸನ್ ಪಡೆದಿರುವ ಮೊತ್ತ ರೂ 3 ಲಕ್ಷ ವೃತ್ತಿಪರ ಶುಲ್ಕಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸಲ್ಲಿಸಿರುವ ಮನವಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಪುರಸ್ಕರಿಸಿದೆ ಹಾಗೂ ವಕೀಲರ ಖಾತೆಯನ್ನು ಪುನರಾರಂಭಿಸಲು ಬ್ಯಾಂಕ್‌ಗೆ(Bank) ಸೂಚಿಸುವಂತೆ ಪೊಲೀಸರಿಗೆ ತಿಳಿಸಿದೆ.
ವಕೀಲರ ಖಾತೆಯನ್ನು ಫ್ರೀಜ್ ಮಾಡಲಾಗಿತ್ತು
ತನಿಖೆಯ ಸಂದರ್ಭದಲ್ಲಿ ವಕೀಲರ ಖಾತೆಯನ್ನು ನ್ಯಾಯಾಲಯದ ಅನುಮತಿಯ ಮೇರೆಗೆ ತನಿಖಾ ತಂಡ ನಿಲುಗಡೆಗೊಳಿಸಿತ್ತು. ಕಕ್ಷಿದಾರರು ಹಾಗೂ ವಕೀಲರ ನಡುವೆ ಹಣದ ವ್ಯವಹಾರ ನಡೆದಿರುವುದರಿಂದ ತನಿಖಾ ತಂಡ ವಕೀಲರ ಖಾತೆಯನ್ನು ಮುಟ್ಟುಗೋಲು ಹಾಕಿತ್ತು ಹಾಗೂ ವಿವರವಾದ ತನಿಖೆಗಾಗಿ ಖಾತೆಯನ್ನು ನಿಲುಗಡೆಗೊಳಿಸಿತ್ತು ಎಂಬುದು ತಿಳಿದು ಬಂದಿದೆ.
ನ್ಯಾಯಾಲಯದ ಮೊರೆ ಹೋದ ವಕೀಲರು
ಈ ಸಂದರ್ಭದಲ್ಲಿ ಖಾತೆಯನ್ನು ಪುನರಾರಂಭಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಕಾಂಚನ್ ತಾನು ಕಕ್ಷಿದಾರರಿಂದ ಪಡೆದುಕೊಂಡಿರುವುದು ಬರೀ ಫೀಸು ಮಾತ್ರ ಎಂಬುದನ್ನು ಸಾಕ್ಷ್ಯಾಧಾರಗಳಿಂದ ಖಾತ್ರಿಪಡಿಸಿದ್ದು, ನ್ಯಾಯಪೀಠ ಅವರ ಅರ್ಜಿಯನ್ನು ಪುರಸ್ಕರಿಸಿ ತನಿಖಾ ತಂಡಕ್ಕೆ ಖಾತೆ ಅನ್‌ಫ್ರೀಜ್ ಮಾಡುವಂತೆ ಸೂಚನೆ ನೀಡಲು ತಿಳಿಸಿದೆ ಎಂಬುದು ವರದಿಯಾಗಿದೆ.
ವಂಚಕ ಕಕ್ಷಿದಾರರಿಂದ ಪಡೆದುಕೊಂಡಿದ್ದು ಫೀಸು ಮಾತ್ರ
ಕಕ್ಷಿದಾರರ ಪರವಾಗಿ ವಾದಿಸಿದ್ದ ಕಾಂಚನ್ ವಕೀಲರ ಶುಲ್ಕವಾಗಿ ರೂ 3 ಲಕ್ಷವನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದು, ತನಗೂ ವಂಚಕನಿಗೂ ಹಣದ ವ್ಯವಹಾರದಲ್ಲಿ ಬೇರಾವ ರೀತಿಯ ವ್ಯವಹಾರಗಳು ನಡೆದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕಾಂಚನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೂಡ ಇದೇ ಅಂಶಗಳನ್ನು ಉಲ್ಲೇಖಿಸಿದ್ದು, ಖಾತೆಯನ್ನು ಪುನರಾರಂಭಿಸಿಕೊಡುವಂತೆ ನ್ಯಾಯಾಲಯವನ್ನು ಕೋರಿದ್ದರು.
ಖಾತೆಯನ್ನು ಪುನರ್ ಆರಂಭಿಸುವಂತೆ ಬ್ಯಾಂಕ್‌ಗೆ ಸೂಚನೆ ನೀಡಿದ ನ್ಯಾಯಾಲಯ
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹಾಜರಿದ್ದ ಏಕಸದಸ್ಯ ಪೀಠವು ಕಾಂಚನ್ ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲನೆ ನಡೆಸಿದ್ದು ವಕೀಲರು ಸಲ್ಲಿಸಿರುವ ಸಾಕ್ಷ್ಯಾಧಾರಗಳು ಕಕ್ಷಿದಾರರಿಂದ ಆಕೆ ಪಡೆದಿರುವ ಹಣ ಬರಿಯ ಶುಲ್ಕ ಮಾತ್ರ ಎಂಬುದನ್ನು ವಿಷದೀಕರಿಸಿದೆ ಹಾಗೂ ವಕೀಲರು ಕಕ್ಷಿದಾರರಿಂದ ಬೇರಾವುದಾದರೂ ರೀತಿಯಲ್ಲಿ ಹಣದ ವ್ಯವಹಾರ ಮಾಡಿದ್ದಾರೆಂಬ ಸಾಕ್ಷ್ಯಾಧಾರಗಳು ಇಲ್ಲದೇ ಇರುವ ಹಿನ್ನಲೆಯಲ್ಲಿ ತನಿಖಾ ಅಧಿಕಾರಿಗೆ ಖಾತೆಯನ್ನು ಡಿಫ್ರೀಜ್ ಮಾಡುವಂತೆ ಬ್ಯಾಂಕ್‌ಗೆ ಸೂಚನೆ ನೀಡಲು ಆದೇಶಿಸಲಾಗಿದ್ದು, ಮುಂದಿನ ಒಂದು ವಾರದೊಳಗೆ ತಡೆಹಿಡಿದಿದ್ದ ಖಾತೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
IPC ಮತ್ತು ಸೆಕ್ಷನ್‌ಗಳು 66(C) ಮತ್ತು 66(D) ಮಾಹಿತಿ ತಂತ್ರಜ್ಞಾನ ಕಾಯಿದೆ, 2008 ರ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಆರೋಪಿಯಾಗಿರುವ ಕಕ್ಷಿದಾರನ ಖಾತೆಯ ನಡುವಿನ ಕೆಲವು ವಹಿವಾಟುಗಳ ಕಾರಣದಿಂದ ತಮ್ಮ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿ ಶ್ರೀನಿವಾಸನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಕ್ಷಿದಾರನೊಂದಿಗೆ ಶ್ರೀನಿವಾಸನ್ ವಿಚಾರಣೆಯನ್ನು ನಡೆಸಿದ್ದ ತನಿಖಾ ತಂಡ ವಿಚಾರಣೆಯ ಸಲುವಾಗಿ ವಕೀಲರ ಖಾತೆಯನ್ನು ಸ್ಥಗಿತಗೊಳಿಸಿತ್ತು.
ನ್ಯಾಯಾಲಯ ನೇಮಿಸಿದ ಸರಕಾರಿ ವಕೀಲರು ತಿಳಿಸಿದ್ದೇನು?
ಆರೋಪಿಯಿಂದ ಅರ್ಜಿದಾರರ ಖಾತೆಗೆ ಬಂದಿರುವ ರೂ.3.00 ಲಕ್ಷಗಳ ಮೊತ್ತವು ವೃತ್ತಿಪರ ಶುಲ್ಕವಾಗಿದೆ ಮತ್ತು ಅದನ್ನು ಲೆಕ್ಕ ಹಾಕಲಾಗಿದೆ ಎಂದು ಸಾಬೀತುಪಡಿಸಲು ದಾಖಲೆಗಳ ದಾಖಲೆಗಳನ್ನು ಸಲ್ಲಿಸಿದ ಅರ್ಜಿದಾರರ ಪರವಾಗಿ ಕಾನೂನು ಸಲಹೆಗಾರರು ಈ ಸಮಯದಲ್ಲಿ ಹಾಜರಿದ್ದರು.
ತನಿಖೆಗೆ ಸಂಬಂಧಿಸಿದಂತೆ ಕೆಲವೊಂದು ಸಾಕ್ಷ್ಯಾಧಾರಗಳು ಹಾಗೂ ಸೂಚನೆಗಳನ್ನು ಪಡೆಯಲು ಅಂತೆಯೇ ಅರ್ಜಿದಾರರು ನ್ಯಾಯಸಮ್ಮತವಾಗಿ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಲು ಹಾಗೂ ಕಕ್ಷಿದಾರರು ಮತ್ತು ವಕೀಲರೊಂದಿಗೆ ಇನ್ನಿತರ ವ್ಯವಹಾರಗಳು ನಡೆದಿವೆಯೇ ಎಂಬುದನ್ನು ತಿಳಿದುಕೊಳ್ಳಲು ಸರಕಾರಿ ವಕೀಲರಿಗೆ ನ್ಯಾಯಾಲಯ ಸೂಚನೆ ನೀಡಿತ್ತು.
ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಿಗಳನ್ನು ಒದಗಿಸಿದ ಸರಕಾರಿ ವಕೀಲರು ಅರ್ಜಿದಾರರು ತಿಳಿಸಿದ ರೂ. 3.00 ಲಕ್ಷಗಳನ್ನು ಹೊರತುಪಡಿಸಿ, ಖಾತೆಯನ್ನು ಸ್ಥಗಿತಗೊಳಿಸುವ ವಿಷಯದಲ್ಲಿ ಅರ್ಜಿದಾರರು ಹಾಗೂ ಆರೋಪಿಯೊಂದಿಗೆ ಬೇರಾವುದೇ ವ್ಯವಹಾರಗಳು ನಡೆದಿಲ್ಲ ಎಂಬುದನ್ನು ಖಾತ್ರಿಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ