ಪ್ರಜ್ವಲ್ ರೇವಣ್ಣ ಸಂಕಷ್ಟ ಮುಂದುವರಿಕೆ: ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಹೈಕೋರ್ಟ್ ನೋಟೀಸ್ ಪ್ರಕಟ

ಚುನಾವಣಾ ಆಯೋಗಕ್ಕೆ ತಪ್ಪು ದಾಖಲೆ ಸಲ್ಲಿಸಿದ ಆರೋಪವನ್ನು ಪ್ರಜ್ವಲ್ ರೇವಣ್ಣ ಎದುರಿಸುತ್ತಿದ್ದಾರೆ. ಅವರ ಸಂಸದ ಸ್ಥಾನವನ್ನು ಅಸಿಂಧುಗೊಳಿಸುವಂತೆ ಎ. ಮಂಜು ಮತ್ತು ದೇವರಾಜೇಗೌಡರು ಹೈಕೋರ್ಟ್​ನಲ್ಲಿ ಪೆಟಿಶನ್ ಹಾಕಿದ್ದಾರೆ.

news18-kannada
Updated:September 11, 2019, 12:47 PM IST
ಪ್ರಜ್ವಲ್ ರೇವಣ್ಣ ಸಂಕಷ್ಟ ಮುಂದುವರಿಕೆ: ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಹೈಕೋರ್ಟ್ ನೋಟೀಸ್ ಪ್ರಕಟ
ಪ್ರಜ್ವಲ್​ ರೇವಣ್ಣ
  • Share this:
ಹಾಸನ(ಸೆ. 11): ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಹೈ ಕೋರ್ಟ್ ನೀಡಿದ್ದ ನೋಟೀಸ್​ಗಳ ಪ್ರತಿಯನ್ನು ಇವತ್ತಿನ ಸ್ಥಳೀಯ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆ ನೀಡಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣಗೆ ಪ್ರಕರಣದಲ್ಲಿ ಉತ್ತರ ನೀಡುವಂತೆ ಕೋರ್ಟ್ ನೀಡಿದ್ದ ನೋಟಿಸ್ ಇದಾಗಿದೆ. ಹಾಸನದ ಸ್ಥಳೀಯ ಪತ್ರಿಕೆ ಜನತಾ ಮಾಧ್ಯಮದಲ್ಲಿ ಈ ನೋಟೀಸ್​ಗಳನ್ನ ಮುದ್ರಿಸಲಾಗಿದೆ.

ಇದೇ ಸೆ. 30ರಂದು ಪ್ರಜ್ವಲ್ ರೇವಣ್ಣ ಅವರು ಕೋರ್ಟ್​ಗೆ ಉತ್ತರ ಸಲ್ಲಿಸಬೇಕು. ಆ ದಿನ ಅವರು ಖುದ್ದಾಗಿ ಹಾಜರಾಗಬೇಕು, ಅಥವಾ ವಕೀಲರನ್ನಾದರೂ ಕಳುಹಿಸಬೇಕು ಎಂದು ಹೈಕೋರ್ಟ್ ನೋಟೀಸ್ ನೀಡಿದೆ. ಚುನಾವಣಾ ಆಯೋಗಕ್ಕೆ ಪ್ರಜ್ವಲ್ ರೇವಣ್ಣ ನೀಡಿದ್ದ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ವಿಳಾಸಕ್ಕೆ ಮೂರು ಬಾರಿ ನೋಟೀಸ್​ಗಳನ್ನ ತಲುಪಿಸಲಾಗಿತ್ತು. ಆದರೆ, ಅದು ಸ್ವೀಕಾರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದೂರುದಾರರು ನೋಟೀಸ್ ಪ್ರತಿಯನ್ನು ಪತ್ರಿಕೆಯಲ್ಲಿ ಮುದ್ರಿಸಲು ಅವಕಾಶ ಮಾಡಿಕೊಡುವಂತೆ ಹೈಕೋರ್ಟ್​ಗೆ ಮನವಿ ಮಾಡಿತ್ತು. ಇದಕ್ಕೆ ಕೋರ್ಟ್ ಕೂಡ ಸಮ್ಮತಿಸಿ, ಸೆ. 23ರೊಳಗೆ ಯಾವುದಾದರೂ ಸ್ಥಳೀಯ ಪತ್ರಿಕೆಯಲ್ಲಿ ನೋಟೀಸ್ ಪ್ರಕಟಿಸುವಂತೆ ಸೂಚಿಸಿತ್ತು.

ಇದನ್ನೂ ಓದಿ: ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ; ಮುನ್ನೆಚ್ಚರಿಕಾ ಕ್ರಮವಾಗಿ ಖಾಕಿ ಕಣ್ಗಾವಲು

ಈಗ ಸೆ. 30ರಂದು ಪ್ರಜ್ವಲ್ ರೇವಣ್ಣ ಅವರು ತಮ್ಮ ವಿರುದ್ಧ ಕೇಳಿಬಂದ ದೂರಿಗೆ ಕೋರ್ಟ್​ನಲ್ಲಿ ಉತ್ತರಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ, ಅವರು ಆ ದಿನ ಕೋರ್ಟ್​​ಗೆ ಹಾಜರಾಗದೇ ಹೋದಲ್ಲಿ ಏಕಪಕ್ಷೀಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ದೇವರಾಜೇಗೌಡ ಹಾಗೂ ಮಾಜಿ ಸಚಿವ ಎ. ಮಂಜು ಅವರಿಬ್ಬರೂ ಕೂಡ ಪ್ರತ್ಯೇಕವಾಗಿ ಚುನಾವಣಾ ಆಯೋಗಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದರು.

(ವರದಿ: ಡಿಎಂಜಿ ಹಳ್ಳಿ ಅಶೋಕ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ