ಕೋರ್ಟ್​ನಲ್ಲಿ ಸುಳ್ಳು ಮನವಿ ಸಲ್ಲಿಸಿದ ಮೇಲ್ಮವಿದಾರನಿಗೆ 1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ!

ಹಕ್ಕುದಾರ ತನ್ನ ಸಮಯ ಮತ್ತು ಶ್ರಮ ಹಾಳುಮಾಡಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದಿತು. ಜೊತೆಗೆ ಅವರಿಗೆ ರೂ 1,00,000 ದಂಡ ವಿಧಿಸಿತು.

ಕರ್ನಾಟಕ ಹೈಕೋರ್ಟ್ (ಚಿತ್ರ ಕೃಪೆ- ಗೂಗಲ್)

ಕರ್ನಾಟಕ ಹೈಕೋರ್ಟ್ (ಚಿತ್ರ ಕೃಪೆ- ಗೂಗಲ್)

 • Share this:
  ಬೆಂಗಳೂರು: ನ್ಯಾಯಾಲಯಗಳಲ್ಲಿ ಕೇಳಿಬರುವ ಸುಳ್ಳುಸಾಕ್ಷ್ಯ, ವಂಚನೆ ಹಾಗೂ ದಾಖಲೆ ತಿರುಚುವಿಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

  "ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಬರುತ್ತಿರುವುದನ್ನು ನೋಡಿ ನಮಗೆ ನೋವಾಗಿದೆ; ಸುಳ್ಳುಸಾಕ್ಷ್ಯ, ವಂಚನೆ ಹಾಗೂ ದಾಖಲೆ ತಿರುಚುವಿಕೆಯಂತಹ ಕೆಟ್ಟದ್ದನ್ನು ತೊಲಗಿಸಲು ಏನಾದರೂ ಮಾಡಬೇಕು; ಅಪ್ರಾಮಾಣಿಕ ರೀತಿಯಲ್ಲಿ ದಾವೆ ಹೂಡುವವರ ಕೇಸ್ ಪೇಪರ್‌ಗಳನ್ನು ನ್ಯಾಯಾಲಯದ ಕಿಟಕಿ ಮೂಲಕ ಹೊರಗೆ ಎಸೆಯುವುದಷ್ಟೇ ಕಠೋರ ಕ್ರಮವಾಗದು; ಇನ್ನೂ ತೀವ್ರವಾದುದನ್ನು ಏನಾದರೂ ರೂಪಿಸಬೇಕಿದ್ದು ಇದರಿಂದ ಆ ಸಂದೇಶ ಅಪ್ರಾಮಾಣಿಕ ವರ್ಗಕ್ಕೆ ಸರಿಯಾಗಿ ತಟ್ಟುತ್ತದೆ" ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಪೀಠ ತಿಳಿಸಿತು.

  ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶಿಸಿದ್ದ ಪರಿಹಾರದಲ್ಲಿ ಹೆಚ್ಚಳ ಮಾಡುವಂತೆ ಕೋರಿ ಹಕ್ಕುದಾರರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

  ಹೃದಯ ಸಂಬಂಧಿ ಕಾಯಿಲೆ ಇದ್ದ ಹಕ್ಕುದಾರ 2014ರ ಆಗಸ್ಟ್‌ನಲ್ಲಿ ಅಪಘಾತಕ್ಕೆ ಡಾಗಿದ್ದರು. ನಂತರ ಅವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅವರಿಗೆ ಆದ ಗಾಯಗಳ ಕುರಿತ ಪ್ರಮಾಣಪತ್ರದಲ್ಲಿ “ಗಾಯಗಳು ಸರಳವಾದವು” ಎಂದು ವಿವರಿಸಲಾಗಿತ್ತು. ಬಳಿಕ ಹಕ್ಕುದಾರ ಬೆಂಗಳೂರಿನ ನಾರಾಯಣ ಹೃದಯ ವಿಜ್ಞಾನ ಸಂಸ್ಥೆಯಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

  ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದ ವೇಳೆ ತಮ್ಮ ಎದೆ, ತಲೆ, ಹಣೆ, ಮೂಗು, ಮುಖ, ಹೊಟ್ಟೆ, ಕೈ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಇದೆಲ್ಲಾ ಆಗಿದ್ದು ಅಪಘಾತದಿಂದ ಎಂದು ಹಕ್ಕುದಾರ ಅಫಿಡವಿಟ್‌ ಸಲ್ಲಿಸಿದ್ದರು. ಅದಕ್ಕಾಗಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಪರಿಹಾರ ಒದಗಿಸಿತ್ತು. ಆದರೆ ಹೆಚ್ಚಿನ ಪರಿಹಾರ ಒದಗಿಸುವಂತೆ ಕೋರಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಹಕ್ಕುದಾರರ ವಾದದಲ್ಲಿ ಹುರುಳಿಲ್ಲ ಎಂದು ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

  ಪರಿಹಾರ ಅರ್ಜಿಯಲ್ಲಾಗಲೀ ಅಥವಾ ಅವರ ಅಫಿಡವಿಟ್‌ನಲ್ಲಾಗಲೀ ತಮಗೆ ಈ ಮೊದಲೇ ಹೃದ್ರೋಗ ಇದ್ದುದರ ಬಗ್ಗೆ ಉಲ್ಲೇಖಿಸಿಲ್ಲ. ಅವರ ಎದೆಗೆ, ಹೃದಯದಂತಹ ಪ್ರಮುಖ ಅಂಗಕ್ಕೆ ಯಾವುದೇ ಗಾಯವಾಗಿಲ್ಲ. ಹಾಗಾಗಿದ್ದರೆ ಗಾಯದ ಪ್ರಮಾಣಪತ್ರದಲ್ಲಿ ಅದರ ಉಲ್ಲೇಖ ಇರುತ್ತಿತ್ತು. ಅಲ್ಲದೆ ಸರ್ಕಾರದ ರೈತ ಕಲ್ಯಾಣ ಯೋಜನೆಯಾದ ಯಶಸ್ವಿನಿ ಸಹಕಾರ ಆರೋಗ್ಯ ರಕ್ಷಣೆಯಡಿ ಪಡೆದ ದೊಡ್ಡಮೊತ್ತದ ಮರುಪಾವತಿಯನ್ನು ಪರಿಹಾರ ಅರ್ಜಿ ಮತ್ತು ಅಫಿಡವಿಟ್‌ನಲ್ಲಿ ಅವರು ಉಲ್ಲೇಖಿಸಿಲ್ಲ ಎಂದು ಪೀಠ ಗಮನಿಸಿತು.

  ಹಕ್ಕುದಾರ ತನ್ನ ಸಮಯ ಮತ್ತು ಶ್ರಮ ಹಾಳುಮಾಡಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದಿತು. ಜೊತೆಗೆ ಅವರಿಗೆ ರೂ 1,00,000 ದಂಡ ವಿಧಿಸಿತು.

  ಇದನ್ನು ಓದಿ: Delta Plus| ಕೊರೋನಾ ಒಂದು ಡೋಸ್ ಲಸಿಕೆ ಪಡೆದವರು ಡೆಲ್ಟಾ ಪ್ಲಸ್ ವೈರಸ್​ನಿಂದ ಸುರಕ್ಷಿತ; ಐಸಿಎಂಆರ್

  “ಇದಕ್ಕೂ ಹಳೆಯ ಪ್ರಕರಣಗಳನ್ನು ಬದಿಗಿಟ್ಟು 656 ಪುಟಗಳಷ್ಟಿದ್ದ ಮೂಲ ವಿಚಾರಣಾ ನ್ಯಾಯಾಲಯದ ದಾಖಲೆಗಳ ಪ್ರತಿಯೊಂದು ಪುಟವನ್ನೂ ತಿರುವುತ್ತಾ ನಾವು ಅಮೂಲ್ಯವಾದ ಒಂದು ಗಂಟೆಗೂ ಹೆಚ್ಚು ಸಮಯವನ್ನು ವ್ಯರ್ಥ ಮಾಡಿದ್ದೇವೆ; ದೋಷಯುಕ್ತ ಪ್ರಕರಣದಿಂದಾಗಿ ಸಾರ್ವಜನಿಕ ಸಮಯ ಮತ್ತು ಹಣದ ದೊಡ್ಡ ಪ್ರಮಾಣದಲ್ಲಿ ವ್ಯರ್ಥವಾಗಿದೆ; ಇದು ನಡೆಯಬೇಕಾದಂತಹ ಸಂತೋಷದ ಸಂಗತಿ ಅಲ್ಲ; ರೂ 1,00,000 ದಂಡದೊಂದಿಗೆ ಮನವಿಯನ್ನು ವಜಾಗೊಳಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ” ಎಂಬುದಾಗಿ ನ್ಯಾಯಾಲಯ ತಿಳಿಸಿತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: