HOME » NEWS » State » HIGH COURT DIRECTS TO START A CAMP FOR FIFTEEN ELEPHANTS RSK SESR

Elephant Camp: ಕೊಡಗಿನಲ್ಲಿ ಜಾಗದ ಕೊರತೆಯಿಂದ ಮತ್ತೊಂದು ಸಾಕಾನೆ ಶಿಬಿರ ಆರಂಭಕ್ಕೆ ಅಡ್ಡಿ

ಹೈಕೋರ್ಟ್ ಸೂಚನೆ ನೀಡಿದ್ದರೂ ಜಾಗದ ಕೊರತೆಯಿಂದಾಗಿ ಇಂದಿಗೂ ಸಾಕಾನೆ ಶಿಬಿರ ನಿರ್ಮಾಣ ಸಾಧ್ಯವಾಗಿಲ್ಲ.

news18-kannada
Updated:March 23, 2021, 9:58 PM IST
Elephant Camp: ಕೊಡಗಿನಲ್ಲಿ ಜಾಗದ ಕೊರತೆಯಿಂದ ಮತ್ತೊಂದು ಸಾಕಾನೆ ಶಿಬಿರ ಆರಂಭಕ್ಕೆ ಅಡ್ಡಿ
ಸಾಂದರ್ಭಿಕ ಚಿತ್ರ
  • Share this:
ಕೊಡಗು (ಮಾ. 23) : ರಾಜ್ಯದ ವಿವಿಧೆಡೆ ಸಾಕಾನೆ ಶಿಬಿರಗಳಿದ್ದು, ಅವುಗಳಲ್ಲಿ ಒಂದು ಸಾಕಾನೆ ಶಿಬಿರದಲ್ಲಿ 15 ಆನೆಗಳಿಗಿಂತ ಹೆಚ್ಚು ಸಾಕಾನೆಗಳಿದ್ದರೆ ಮತ್ತೊಂದು ಹೊಸ ಶಿಬಿರವನ್ನು ಆರಂಭಿಸುವಂತೆ ರಾಜ್ಯ ಹೈಕೋರ್ಟ್ ಸೂಚಿಸಿದೆ. ಕೊಡಗಿನ ಕುಶಾಲನಗರ ವಲಯದ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರಸ್ತುತ 31 ಸಾಕಾನೆಗಳಿವೆ. ಹೀಗಾಗಿ ಕೂಡಲೇ ಮತ್ತೊಂದು ಶಿಬಿರವನ್ನು ಆರಂಭಿಸುವಂತೆ ಸಾಕಾನೆ ಶಿಬಿರಗಳ ಸ್ಥಿತಿಗತಿ ಅರಿಯಲು ಹೈಕೋರ್ಟ್ ನೇಮಿಸಿದ್ದ ಸಮಿತಿ 2020 ಅಕ್ಟೋಬರ್ ನಲ್ಲೇ ವರದಿ ನೀಡಿದೆ. ಆದರೆ, ಹೈಕೋರ್ಟ್ ಸೂಚನೆ ನೀಡಿದ್ದರೂ ಜಾಗದ ಕೊರತೆಯಿಂದಾಗಿ ಇಂದಿಗೂ ಸಾಕಾನೆ ಶಿಬಿರ ನಿರ್ಮಾಣ ಸಾಧ್ಯವಾಗಿಲ್ಲ. ಸದ್ಯ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ 40 ಎಕರೆ ಜಾಗವನ್ನು ಸಾಕಾನೆ ಶಿಬಿರ ನಿರ್ಮಾಣಕ್ಕೆ ಕೊಡುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಸದ್ಯ ಈ ಜಾಗ ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿದ್ದು, ಸಂಪೂರ್ಣ ಖಾಲಿ ಇದೆ. ಅದನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಸಾಕಾನೆ ಶಿಬಿರಗಳಲ್ಲಿ 15 ಕ್ಕಿಂತ ಹೆಚ್ಚು ಸಾಕಾನೆಗಳಿದ್ದರೆ, ಮಾವುತರು ಮತ್ತು ಕವಾಡಿಗಳ ಮೇಲೆ ದಾಳಿ ಮಾಡುವ ಸಾಧ್ಯಗಳಿರುತ್ತವೆ ಎಂದು ಹೈಕೋರ್ಟ್ ನೇಮಿಸಿದ್ದ ಅಧ್ಯಯನ ಸಮಿತಿ ಹೇಳಿದೆ. ಅದು ಸತ್ಯವೂ ಹೌದು ಇದುವರೆಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರತೀ ವರ್ಷ ಮಾವುತರು ಮತ್ತು ಕವಾಡಿಗರ ಮೇಲೆ ಸಾಕಾನೆಗಳು ದಾಳಿ ಮಾಡಿರುವ ಹಲವು ಘಟನೆಗಳಿವೆ. ಅದರಲ್ಲೂ ಶಿಬಿರದಲ್ಲಿ ಕೇವಲ ಗಂಡಾನೆಗಳಿದ್ದರೆ, ಅವುಗಳಿಗೆ ಮಸ್ತ್ ಬಂದಾಗ ಅಪಾಯ ಜಾಸ್ತಿ ಇರುತ್ತದೆ. ಅಷ್ಟೇ ಅಲ್ಲ ಶಿಬಿರದ ಸುತ್ತಮುತ್ತ ಅರಣ್ಯ ನಾಶವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಂದು ಶಿಬಿರದಲ್ಲಿ 15 ಆನೆಗಳನ್ನು ಮಾತ್ರವೇ ಸಾಕಬೇಕು ಎಂಬ ನಿಯಮವಿದ್ದರೂ, ಶಿಬಿರಗಳ ಕೊರತೆಯಿಂದಾಗಿ ಒಂದು ಶಿಬಿರದಲ್ಲಿ ಎರಡು ಪಟ್ಟು ಜಾಸ್ತಿ ಸಾಕಾನೆಗಳನ್ನು ಪೋಷಣೆ ಮಾಡಲಾಗುತ್ತಿದೆ. ಆದ್ದರಿಂದಾಗಿಯೇ ರಾಜ್ಯ ಉಚ್ಚ ನ್ಯಾಯಾಲವು ಅಗತ್ಯವಿರುವೆಡೆ ಮತ್ತೊಂದು ಸಾಕಾನೆ ಶಿಬಿರ ಆರಂಭಿಸುವಂತೆ 2020 ರಲ್ಲೇ ಸೂಚಿದೆ. ಆದರೆ ಇದುವರೆಗೆ ಹೊಸ ಸಾಕಾನೆ ಶಿಬಿರ ಆರಂಭಿಸಲು ಸಾಧ್ಯವಾಗಿಲ್ಲ.


ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಈಗಾಗಲೇ ವೃಕ್ಷೋದ್ಯಾನ ನಿರ್ಮಾಣವಾಗುತ್ತಿದ್ದು, ಅದರ ಹಿಂಭಾಗದಲ್ಲೇ ಸಾಕಾನೆ ಶಿಬಿರಕ್ಕೆ ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಾಗವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿದಲ್ಲಿ ಇಲಾಖೆ ಶಿಬಿರ ನಿರ್ಮಾಣಕ್ಕೆ ಮುಂದಾಗಲಿದೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್ ಅವರ ಅಭಿಪ್ರಾಯ.

ಒಂದು ವೇಳೆ ಸಾಕಾನೆ ಶಿಬಿರ ಆದಲ್ಲಿ ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಹೊಸ ತಾಣ ಸೇರ್ಪಡೆಯಾಗಲಿದೆ. ವಿಪರ್ಯಾಸವೆಂದರೆ ಅರಣ್ಯ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ವೃಕ್ಷೋದ್ಯಾನ ಅನುದಾನದ ಕೊರತೆಯಿಂದಾಗಿ ನಾಲ್ಕು ವರ್ಷಗಳಾದರೂ ನೆನೆಗುದಿಗೆ ಬಿದ್ದಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಹಾರಂಗಿ ಉದ್ಯಾನವನದ ಪಕ್ಕದಲ್ಲೇ ವೃಕ್ಷೋದ್ಯಾನ ಮತ್ತು ಸಾಕಾನೆ ಶಿಬಿರವೂ ಆಗುವುದರಿಂದ ಜಿಲ್ಲೆಯಲ್ಲಿ ಅತ್ಯುತ್ತಮದವಾದ ಪ್ರವಾಸಿತಾಣವೂ ಆಗಲಿದೆ ಎನ್ನೋದು ಸ್ಥಳೀಯರಾದ ಕೆ ಜಿ ಮನು ಅವರ ಅಭಿಪ್ರಾಯ.
Published by: Seema R
First published: March 23, 2021, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories