ಜಿಂದಾಲ್​ ಕಂಪೆನಿಗೆ ಜಮೀನು: ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆಯೇ? ಸರ್ಕಾರಕ್ಕೆ ಪ್ರಶ್ನಿಸಿದ ಹೈಕೋರ್ಟ್​

ಏಪ್ರಿಲ್‌ 26ರ ಸಂಪುಟ ಸಭೆಯಲ್ಲಿ ಜೆಎಸ್‌ಡಬ್ಲ್ಯು ಲಿಮಿಟೆಡ್‌ಗೆ ಕ್ರಮವಾಗಿ 2000.58 ಎಕರೆ ಮತ್ತು 1666.73 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅದಾಗ್ಯೂ, ಮುಂದೆ ನಡೆದ ಸಭೆಗಳಲ್ಲಿ ನಿರ್ಧಾರವನ್ನು ಖಚಿತಪಡಿಸಿರಲಿಲ್ಲ ಎಂದೂ ಪತ್ರದಲ್ಲಿ ನಮೂದಿಸಲಾಗಿತ್ತು.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:  ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಉಕ್ಕಿನ ಕಾರ್ಖಾನೆ ಜೆಎಸ್‌ಡಬ್ಲ್ಯು ಲಿಮಿಟೆಡ್‌ಗೆ 3,667 ಎಕರೆ ಭೂಮಿ ವರ್ಗಾವಣೆ/ ಮಾರಾಟದ ವಿಚಾರದಲ್ಲಿ ವಾಸ್ತವಾಂಶವನ್ನು ಬಹಿರಂಗಪಡಿಸುವಂತೆ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೇ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಲಯ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರಿ ಆದೇಶ ಹೊರಡಿಸುವುದು ಎತ್ತಿನ ಮುಂದೆ ಚಕ್ಕಡಿ ಹೂಡಿದ ಹಾಗೆ ಎಂದು ವ್ಯಂಗ್ಯವಾಡಿದೆ.

  ಕಾಂಗ್ರೆಸ್​ ಮತ್ತು ಜೆಡಿಎಸ್​ ಸರ್ಕಾರವಿದ್ದಾಗ ಮುನ್ನೆಲೆಗೆ ಬಂದ ಈ ಈ ಭೂಮಿ ಪರಭಾರೆ ವಿಚಾರ ಸಾಕಷ್ಟು ಗದ್ದಲವನ್ನೇ ಉಂಟು ಮಾಡಿತ್ತು. ಅಲ್ಲದೇ ಈ ಸಂಗತಿ ಸರ್ಕಾರ ಬೀಳುವುದಕ್ಕೂ ಕಾರಣವಯಿತು ಎಂದು ಒಂದಷ್ಟು ಮೂಲಗಳು ಅನುಮಾನ ಮೂಡಿಸಿದ್ದವು. ಆದರೆ ಕುಮಾರಸ್ವಾಮಿ ಸರ್ಕಾರವು ಈ ಭೂಮಿಯನ್ನು ಜೆಎಸ್​ಡಬ್ಲ್ಯು ಕಂಪೆನಿಗೆ ನೀಡದೆ ಹಿಂದೆ ಸರಿದಿತ್ತು. ನಂತರ ಬಂದ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಮತ್ತೆ ಈ ಭೂಮಿಯನ್ನು ನೀಡಲು ಮುಂದಾಗಿದ್ದು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.


  ಸಾಮಾಜಿಕ ಕಾರ್ಯಕರ್ತ ಕೆ ಎ ಪೌಲ್‌ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ಸಂಪುಟ ಸಭೆಯ ಒಪ್ಪಿಗೆ ಪಡೆಯದೇ ಮೇ 6ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.


  ಸಂಪುಟದ ಹಲವು ಸಚಿವರ ವಿರೋಧದ ಹೊರತಾಗಿಯೂ ಅತ್ಯಂತ ಕಡಿಮೆ ದರಕ್ಕೆ ಬಳ್ಳಾರಿಯ ತೋರಣಗಲ್ಲಿನಲ್ಲಿ ಇರುವ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಮಂಡಿಸಿತ್ತು ಎಂದು ಅರ್ಜಿದಾರರು ವಾದಿಸಿದ್ದರು. ಈ ಸಂಬಂಧ ವಿಚಾರಣೆಯ ವೇಳೆ ಪೀಠವು ಸಂಪುಟದ ಒಪ್ಪಿಗೆ ಇಲ್ಲದೆ ಹೇಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಪ್ರಶ್ನಿಸಿತು.


  “ಮೇ 6ರ ಸರ್ಕಾರಿ ಆದೇಶದ ಜೊತೆಗೆ ಜೂನ್‌ 15ರ ಮೆಮೊ ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಂಪುಟದ ಒಪ್ಪಿಗೆ ಇಲ್ಲದೇ ಅವುಗಳನ್ನು ಜಾರಿ ಮಾಡುವುದಿಲ್ಲವೇ ಎಂಬುದರ ಕುರಿತು ನಿರ್ದಿಷ್ಟವಾಗಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು. ಸಂಪುಟದ ಒಪ್ಪಿಗೆ ಇಲ್ಲದೇ ಸರ್ಕಾರಿ ಆಸ್ತಿಯ ಮಾರಾಟ/ ವರ್ಗಾವಣೆ ಆದೇಶ ಹೊರಡಿಸಬಹುದೇ ಎಂಬುದರ ಕುರಿತೂ ಹೆಚ್ಚುವರಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು” ಎಂದು ಪೀಠ ಹೇಳಿದೆ.  ಕಳೆದ ವಿಚಾರಣೆಯ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಜೂನ್‌ 14 ರಂದು ಬರೆದಿರುವ ಪತ್ರದ ಜೊತೆಗೆ ಅನುಪಾಲನಾ ಮೊಮೆವನ್ನು ದಾಖಲೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಏಪ್ರಿಲ್‌ 26ರ ಸಂಪುಟ ಸಭೆಯಲ್ಲಿ ಜೆಎಸ್‌ಡಬ್ಲ್ಯು ಲಿಮಿಟೆಡ್‌ಗೆ ಕ್ರಮವಾಗಿ 2000.58 ಎಕರೆ ಮತ್ತು 1666.73 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅದಾಗ್ಯೂ, ಮುಂದೆ ನಡೆದ ಸಭೆಗಳಲ್ಲಿ ನಿರ್ಧಾರವನ್ನು ಖಚಿತಪಡಿಸಿರಲಿಲ್ಲ ಎಂದೂ ಪತ್ರದಲ್ಲಿ ನಮೂದಿಸಲಾಗಿತ್ತು.

  ಇದನ್ನೂ ಓದಿ: ಜನರ ನಡವಳಿಕೆ ಬಗ್ಗೆ ಆತಂಕವಿದೆ, ಸದ್ಯಕ್ಕೆ ರಾಜ್ಯದಲ್ಲಿ ಮೂರನೇ ಅಲೆಯ ಭಯವಿಲ್ಲ; ಆರೋಗ್ಯ ಸಚಿವ ಸುಧಾಕರ್​


  ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ. ಕೆ ಇ ರಾಧಾಕೃಷ್ಣ ಅವರನ್ನು ಪಿಐಎಲ್‌ನಲ್ಲಿ ಸಹ ಅರ್ಜಿದಾರರನ್ನಾಗಿ ಸೇರಿಸಲು ನ್ಯಾಯಾಲಯವು ಅನುಮತಿಸಿದ್ದು, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: