ಬೆಂಗಳೂರು (ಜೂನ್ 16); ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿತ್ತು. ಬಿಜೆಪಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಹೈಕಮಾಂಡ್ ನಾಯಕರ ಇರಿಸು ಮುರಿಸಿಗೂ ಕಾರಣವಾಗಿತ್ತು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಅರುಣ್ ಸಿಂಗ್ ಅವರನ್ನು ರಾಜ್ಯಕ್ಕೆ ಕಳಿಸಲಾಗಿತ್ತು. ಹೀಗಾಗಿ ಸಿಎಂ ಯಡಿಯೂರಪ್ಪ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಎಲ್ಲಾ ಶಾಸಕರ ಮತ್ತು ಸಚಿವರುಗಳನ್ನು ಭೇಟಿ ಮಾಡಿ ಖುದ್ದು ಮಾತನಾಡಿರುವ ಅರುಣ್ ಸಿಂಗ್, "ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಯಡಿಯೂರಪ್ಪ ಅವರ ಮೇಲೆ ಹೈಕಮಾಂಡ್ಗೆ ವಿಶ್ವಾಸ ಇದೆ. ಮುಂದಿನ ದಿನಗಳಲ್ಲೂ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅರುಣ್ ಸಿಂಗ್, " ಸರ್ಕಾರ, ಶಾಸಕರು, ಸಚಿವರು ಮತ್ತು ಸಿಎಂ ಯಡಿಯೂರಪ್ಪ ಹಗಲು ರಾತ್ರಿ ದುಡಿದಿದ್ದಾರೆ. ನಮಗೆ ಎಲ್ಲಾ ಶಾಸಕರು, ಸಂಸದರು ಒಂದೇ. ನಾಯಕತ್ವ ಬದಲಾವಣೆ ಬಗ್ಗೆ ಅವರು ಮಾತನಾಡುವುದು ಸಹಜ. ಆದರೆ, ಹೈಕಮಾಂಡ್ ಪ್ರತಿ ಬಾರಿಯೂ ಹೇಳಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ" ಎಂದು ತಿಳಿಸಿದ್ದಾರೆ.
ಎಲ್ಲಾ ಬಿಜೆಪಿ ನಾಯಕರಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ರವಾನಿಸಲು ಹಾಗೂ ಭಿನ್ನಮತ ಶಮನ ಮಾಡಲು ಅರುಣ್ ಸಿಂಗ್ ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ. ಈ ಸಭೆಯಲ್ಲಿ ಭಿನ್ನಮತ ನಾಯಕರೂ ಸೇರಿದಂತೆ ಎಲ್ಲರೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾಗಬೇಕು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯಬೇಕು ಎಂದು ಅಪಸ್ವರ ಎದ್ದವರ ಪೈಕಿ ಯೋಗಿಶ್ವರ್ ಸಹ ಒಬ್ಬರು. ಆದರೆ, ಅರುಣ್ ಸಿಂಗ್ ರಾಜ್ಯ ಭೇಟಿ ಹಿನ್ನಲೆಯಲ್ಲಿ ಸಿ.ಪಿ.ಯೋಗೇಶ್ವರ್ ರಹಸ್ಯ ಕಾರ್ಯಾಚರಣೆಗೆ ಮುಂದಾಗಿದ್ದಾರಾ? ಎಂಬ ಸಂಶಯ ಇದೀಗ ಮೂಡಿದೆ.
ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಯೋಗೇಶ್ವರ್ ನಿನ್ನೆಯೇ ಹೈದ್ರಾಬಾದ್ ಗೆ ತೆರಳಿದ್ದು, ಇಂದು ರಾಜ್ಯಕ್ಕೆ ವಾಪಾಸ್ ಆಗಿದ್ದಾರೆ. ಅಸಲಿಗೆ ಸಿಎಂ ಯಡಿಯೂರಪ್ಪ ಪಾಳೆಯದ ಒತ್ತಡಕ್ಕೆ ಈಡಾಗದಿರಲು ಅವರು ಹೈದ್ರಾಬಾದ್ಗೆ ತೆರಳಿದ್ದರು ಎನ್ನಲಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ