ಕೊನೆಗೂ ಗೆದ್ದ ಜಾರಕಿಹೊಳಿ ಸಹೋದರರ ಹಠ​; ಹೆಬ್ಬಾಳ್ಕರ್​ಗೆ ಸುಮ್ಮನಿರುವಂತೆ ಹೈಕಮಾಂಡ್​ ಖಡಕ್​ ಸೂಚನೆ

news18
Updated:September 6, 2018, 9:35 PM IST
ಕೊನೆಗೂ ಗೆದ್ದ ಜಾರಕಿಹೊಳಿ ಸಹೋದರರ ಹಠ​; ಹೆಬ್ಬಾಳ್ಕರ್​ಗೆ ಸುಮ್ಮನಿರುವಂತೆ ಹೈಕಮಾಂಡ್​ ಖಡಕ್​ ಸೂಚನೆ
  • Advertorial
  • Last Updated: September 6, 2018, 9:35 PM IST
  • Share this:
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.6): ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್​ ವಿಷಯಕ್ಕೆ ಈಗ ಹೈ ಕಮಾಂಡ್​ ಪ್ರವೇಶಿಸಿದ್ದು, ಮೈತ್ರಿ ಸರ್ಕಾರದ ಹಿತದೃಷ್ಟಿಯಿಂದ ಸುಮ್ಮನಿರುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಖಡಕ್​ ಸೂಚನೆ ನೀಡಿದೆ.

ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಶುರವಾಗಿರುವ ಬೆಳಗಾವಿ ಕೈ ನಾಯಕರ ಜಗಳ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮೈತ್ರಿ ಸರ್ಕಾರದ ಬುಡವನ್ನೇ ಅಲುಗಾಡಿಸುತ್ತಿದೆ. ಈ ದೃಷ್ಟಿಯಿಂದ ಈ ವಿಷಯವನ್ನು ಸ್ವ ಪ್ರತಿಷ್ಟೆಯಾಗಿ ತೆಗೆದುಕೊಳ್ಳದೇ ಸರ್ಕಾರದ ಹಿತವನ್ನು ಕಾಪಾಡುವುದು ಮುಖ್ಯವಾಗಿದೆ. ನಿಮ್ಮ ಜಗಳದಿಂದಾಗಿ ಮೈತ್ರಿ ಸರ್ಕಾರಕ್ಕೆ ಧಕ್ಕೆ ತರಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ ಎಚ್ಚರಿಕೆ ನೀಡಿದ್ದಾರೆ.

ನಾಳೆ ಪಿಎಲ್​ಡಿ  ಚುನಾವಣೆ ನಡೆಯಲಿದ್ದು, ಯಾವುದೇ ತೊಂದರೆಯಾಗದಂತೆ ಚುನಾವಣೆ ನಡೆಯಬೇಕು. ಇದಕ್ಕೆ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಮುಂದಾಗಬಾರದು ಎಂದು ಕೂಡ ಹೆಬ್ಬಾಳ್ಕರ್​ಗೆ ಸೂಚನೆ ನೀಡಲಾಗಿದೆ. ಈ ಮೂಲಕ ಈ ಕಿತ್ತಾಟದಲ್ಲಿ ಪಟ್ಟು ಬಿಡದ ಜಾರಕಿಹೊಳಿ ಸಹೋದರರಿಗೆ ಜಯಸಿಕ್ಕಂತೆ ಆಗಿದೆ.

ನಾಳೆ ನಡೆಯಲಿರುವ ಚುನಾವಣೆಯಲ್ಲಿ ಯಾವುದೇ ಅನಾಹುತಕ್ಕೆ ಕಾರಣವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಹೈ ಕಮಾಂಡ್​ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಬೆಳಗಾವಿಗೆ ತೆರಳುವಂತೆ ಸೂಚನೆ ನೀಡಿದೆ.

 

ಪಿಎಲ್​ಡಿ ಬ್ಯಾಂಕ್​ ಚುನಾವಣೆ ಸೇರಿದಂತೆ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ಸೇರಿದಂತೆ ನನ್ನ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಅನಗತ್ಯವಾಗಿ ಮೂಗು ತೂರಿಸಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಶಾಸಕಿ ಹೆಬ್ಬಾಳ್ಕರ್​ ಕೈ ನಾಯಕರ ಮುಂದೆ ದೂರು ನೀಡಿದ್ದರು.ಕಳೆದ ವಾರ ನಡೆದ ರಾಜ್ಯ ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್​ ಇವರ ಕಿತ್ತಾಟ ಬಗೆಹರಿಸಲು ಮುಂದಾಗಿದ್ದರು. ಅದು ಸಾಧ್ಯವಾಗಿರಲಿಲ್ಲ.

ಹೆಬ್ಬಾಳ್ಕರ್​ ಬೆನ್ನಿಗೆ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್​ ನಿಂತಾಗ ವಿವಾದ ಮತ್ತಷ್ಟು ತಾರಕಕ್ಕೆ ಏರಿತು.  "ಬೆಳಗಾವಿ ವಿಷಯಕ್ಕೆ ಯಾರಾದರೂ ತಲೆ ಹಾಕಿದರೆ, ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಹೊರಹೋಗಬೇಕಾಗುತ್ತದೆ. ಜೊತೆಗೆ 12 ಮಂದಿ ಶಾಸಕರನ್ನು ಕರೆದುಕೊಂಡು ಹೋಗುತ್ತೇನೆ" ಎಂದು ರಮೇಶ್​ ಜಾರಕಿಹೊಳಿ ಎಚ್ಚರಿಕೆ ನೀಡಿದ್ದರು.

ಮೈತ್ರಿ ಸರ್ಕಾರ ಉರುಳಿಸಿ, ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಕಾಂಗ್ರೆಸ್​ನ ಆಂತರಿಕ ಭಿನ್ನಮತದ ಲಾಭ ಪಡೆಯಲು ಯತ್ನಿಸುತ್ತಿದೆ. ತೆರೆ ಮರೆಯಲ್ಲೇ ಜಾರಕಿಹೊಳಿ ಸಹೋದರರು ಮತ್ತು ಇತರ 12 ಶಾಸಕರನ್ನು ಸೆಳೆದುಕೊಳ್ಳಲು ಯತ್ನಿಸುತ್ತಿದೆ. ಅದಕ್ಕಾಗಿ  ಜಾರಕಿ ಹೊಳಿಗೆ ಡಿಸಿಎಂ ಆಫರ್ ಹಾಗೂ 10 ಕೋಟಿ ನೀಡಲು​ ಕೂಡ ಬಿಜೆಪಿ ಮುಂದಾಗಿದೆ ಎಂಬ ಮಾತು ಕೂಡ ಕೇಳಿ ಬಂದಿತ್ತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಕಾಂಗ್ರೆಸ್​ ಹೈ ಕಮಾಂಡ್​ ಈ ವಿಷಯಕ್ಕೆ ಈಗ ಮಧ್ಯ ಪ್ರವೇಶಿಸಿದ್ದು ಮೈತ್ರಿ ಸರ್ಕಾರದ ಉಳಿವಿಗೆ ಮುಂದಾಗಿದೆ.

 

 
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ