news18-kannada Updated:January 7, 2021, 3:06 PM IST
ಆರ್ಟಿಒ ಕಚೇರಿ
ಕಾರವಾರ (ಜ. 7): ಸರ್ಕಾರದ ವಿವಿಧ ಇಲಾಖೆಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಪರಿಣಾಮ ಹೆಸ್ಕಾಂ ಭಾರೀ ನಷ್ಟ ಅನುಭವಿಸುವಂತೆ ಆಗಿದೆ. ಈಗಾಗಲೇ ಬಾಕಿ ಪಾವತಿಸುವಂತೆ ನೋಟೀಸ್ ನೀಡಲಾಗಿದೆಯಾದರೂ, ಇಲಾಖೆಗಳು ಪಾವತಿಗೆ ಮುಂದಾಗಿಲ್ಲ. ಇದರಿಂದ ಹೆಸ್ಕಾ ಭಾರೀ ನಷ್ಟ ಅನುಭವಿಸುವಂತೆ ಆಗಿದೆ. ಈಗ ಬಾಕಿ ಪಾವತಿಗೆ ಮುಂದಾಗಿರುವ ಹೆಸ್ಕಾಂ ಸರ್ಕಾರಿ ಇಲಾಖೆಗಳಿಗೆ ಬಿಸಿಮುಟ್ಟಿಸಲು ಮುಂದಾಗಿದೆ. ಇದೇ ಕಾರಣಕ್ಕೆ ಬಿಲ್ ಪಾವತಿಸದಿದ್ದಲ್ಲಿ ಸರ್ಕಾರಿ ಇಲಾಖೆಗಳ ಪವರ್ ಕಟ್ ಮಾಡುವ ಮೂಲಕ ಶಾಕ್ ನೀಡಲು ಮುಂದಾಗಿದೆ. ಆದರೆ, ಹೆಸ್ಕಾಂನ ಈ ನಡೆಗೆ ಸಾರ್ವಜನಿಕರು ಮಾತ್ರ ಪರದಾಡುವಂತೆ ಆಗಿದೆ. ಇಲಾಖೆಗಳ ಬಾಕಿ ಪಾವತಿಯಲ್ಲಿ ಸಾವರ್ಜನಿಕರು ಹೈರಾಣಾಗಿದ್ದಾರೆ.
ಬಾಕಿ ಉಳಿಸಿಕೊಂಡಿದ್ದ ವಿವಿಧ ಸರಕಾರಿ ಇಲಾಖೆಗಳಿಗೆ ಬಿಲ್ ಪಾವತಿಸುವಂತೆ ಸೂಚಿಸಿತ್ತು. ಆದರೆ, ಕಳೆದ ಮೂರು ನಾಲ್ಕು ತಿಂಗಳಿಂದ ಇಲಾಖೆಗಳಿಂದ ಯಾವುದೇ ಬಾಕಿ ಪಾವತಿಯಾಗಿಲ್ಲ. ಈ ಹಿನ್ನಲೆ ಜಿಲ್ಲೆಯ ಕಾರವಾರ ನಗರದ ಆರ್ ಟಿಓ ಕಚೇರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದಾಗಿ ಕಳೆದ ಒಂದು ವಾರದಿಂದ ಆರ್ ಟಿಓ ಕಚೇರಿಯಲ್ಲಿ ಕರೆಂಟ್ ಇಲ್ಲದೆ ಸಿಬ್ಬಂದಿಗಳ ಜೊತೆಗೆ ಸಾರ್ವಜನಿಕರು ಪರದಾಡುವಂತೆ ಆಗಿದೆ. ಆರ್ ಟಿ ಓ ಕಚೇರಿಯಲ್ಲಿ ಜನರೇಟರ್ ವ್ಯವಸ್ಥೆ ಇದ್ದುದಾಗಿಯೂ ಅದು ಕೆಲಗಂಟೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರಿಗೆ ಭಾರೀ ಅಡಚಣೆಯಾಗುತ್ತಿದ್ದು ಹಳ್ಳಿಗಾಡು ಪ್ರದೇಶದಿಂದ ಆರ್ಟಿಒ ಕಚೇರಿಗೆ ಬರುವ ಜನ ಕಾದೂ ಕಾದೂ ಸುಸ್ತಾಗುವಂತಾಗಿದೆ.
ಇದನ್ನು ಓದಿ: ಮುರುಡೇಶ್ವರದಲ್ಲಿಲ್ಲ ವಾಹನ ನಿಲುಗಡೆಗೆ ಜಾಗ: ಕಡಲತೀರದಲ್ಲೆ ಬೇಕಾಬಿಟ್ಟಿ ಪಾರ್ಕಿಂಗ್
ವಿವಿಧ ಇಲಾಖೆಗಳಿಂದ ಹೆಸ್ಕಾಂಗೆ ಕೋಟಿಗಟ್ಟಲೆ ಹಣ ಬಾಕಿಯಿದೆ. ಇದರಿಂದ ಕಾರವಾರ, ಅಂಕೋಲಾ ವಿದ್ಯುತ್ ವಿಭಾಗವೂ ಹೊರತಾಗಿಲ್ಲ. ಬಹುಗ್ರಾಮ ನೀರು ಸರಬರಾಜು ಇಲಾಖೆಯಿಂದ 1.59 ಕೋಟಿ ರೂ. ರಾಜ್ಯ ಸರಕಾರದ ವಿವಿಧ ಇಲಾಖೆಗಳಿಂದ 54 ಲಕ್ಷ ರೂ. ಹಾಗೂ ಕೇಂದ್ರ ಸರಕಾರದಡಿ ಬರುವ ಬಿಎಸ್ಎನ್ಎಲ್ನಿಂದ 47 ಲಕ್ಷ ರೂ ಹಾಗೂ ಇತರ ಇಲಾಖೆಗಳು ಸೇರಿ 1.02 ಕೋಟಿ ರೂ. ಪಾವತಿಯಾಗುವುದು ಬಾಕಿಯಿದೆ. ಹೆಸ್ಕಾಂ ಅಧಿಕಾರಿಗಳು ಹೇಳುವಂತೆ ಕಳೆದ ಮಾರ್ಚ್ ತಿಂಗಳಿಂದ 7.50 ಕೋಟಿ ಕಲೆಕ್ಷನ್ ಕಡಿಮೆಯಾಗಿದೆಯಂತೆ. ಕೊರೋನಾ ಕಾರಣದಿಂದ ಗ್ರಾಹಕರು ಸರಿಯಾಗಿ ಹಣ ತುಂಬದಿರುವುದುರಿಂದ ಸುಮಾರು 2.50 ಕೋಟಿ ರೂ ಸಂಗ್ರಹಣೆ ಕೊರತೆಯಾಗಿದ್ದು, ಹೆಸ್ಕಾಂ ನಷ್ಟ ಅನುಭವಿಸುವಂತಾಗಿದೆ. ಈ ಹಿನ್ನಲೆ ಈ ನಿರ್ದಾಕ್ಷ್ಯಿಣ ಕ್ರಮಕ್ಕೆ ಮುಂದಾಗಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ವಿದ್ಯಾರ್ಥಿಗಳಿಗೆ ತೊಂದರೆ ನೀಡಬಾರದೆಂಬ ನಿಟ್ಟಿನಲ್ಲಿ ಇನ್ನಷ್ಟು ಸಮಯವಕಾಶ ನೀಡುತ್ತಿದ್ದೇವೆ ಎನ್ನುತ್ತಾರೆ.. ಆದರೆ, ಹಣ ಪಾವತಿ ಮಾಡದ ಇಲಾಖೆಗಳ ವಿದ್ಯುತ್ ಸಂಪರ್ಕ ಕಟ್ ಮಾಡುವುದು ಅನಿವಾರ್ಯ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.
ವಿವಿಧ ಕಾರಣಗಳಿಂದ ಹೆಸ್ಕಾಂಗೆ ಕೋಟಿಗಟ್ಟಲೆ ಬಿಲ್ ಬಾಕಿಯಿರಿಸಿರುವ ಸರಕಾರಿ ಇಲಾಖೆಗಳಿಗೆ ಹೆಸ್ಕಾಂ ಶಾಕ್ ನೀಡಲು ಮುಂದಾಗಿರುವುದು ಕ್ರಮ ಸರಿಯಾಗಿದೆ. ಆದರೆ, ಸರ್ಕಾರಿ ಕಚೇರಿಗಳ ಬೇಜಾವಬ್ದಾರಿತನಕಕ್ಕೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದುದು ಮಾತ್ರ ದುರದೃಷ್ಟಕರ.
Published by:
Seema R
First published:
January 7, 2021, 3:02 PM IST