B S Yediyurappa: ಬಿಎಸ್​ವೈ ನಂತರ ಯಾರಾಗಲಿದ್ದಾರೆ ರಾಜ್ಯದ ಸಿಎಂ? ಇಲ್ಲಿದೆ ಸಂಭಾವ್ಯರ ಪಟ್ಟಿ

B S Yediyurappa: ಯಡಿಯೂರಪ್ಪ ಅವರ ಬಣವು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಮತ್ತು ಸಿ.ಟಿ.ರವಿ ಅವರುಗಳೇ ನಾಯಕತ್ವದ ಬದಲಾವಣೆಯನ್ನು ಬಯಸಿದ್ದಾರೆ ಎಂದು ಹೇಳುತ್ತಿರುವುದಾಗಿ ವರದಿಯಾಗಿದೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

 • Share this:
  ಜುಲೈ 25ಕ್ಕೆ ಬಿಎಸ್ ಯಡಿಯೂರಪ್ಪ ಅವರ ಕರ್ನಾಟಕ ಮುಖ್ಯಮಂತ್ರಿ ಸ್ಥಾನ ಕೊನೆಯಾಗಬಹುದೇ?  ಬಿಎಸ್​ವೈ ಅವರನ್ನು ಕುರ್ಚಿಯಿಂದ ಕೆಳಗೆ ಇಳಿಸುವ ಕುರಿತು ಬಿಜೆಪಿ ಹೈಕಮಾಂಡ್​ ಭಾನುವಾರ ರಾತ್ರಿಯೊಳಗೆ ಸಂದೇಶ ನೀಡಬಹುದು ಎನ್ನುವ ತೀವ್ರ ಚರ್ಚೆಗಳು ನಡೆಯುತ್ತಿವೆ.  ದೆಹಲಿಯ ಸಂದೇಶಕ್ಕಾಗಿ ಅನೇಕರು ಕಾಯುತ್ತಿರುವಾಗ, ಹೈಕಮಾಂಡ್​ ಹೇಳಿದಂತೆ ಕೇಳಲು ಯಡಿಯೂರಪ್ಪ ಅವರು ನಿರ್ಧರಿಸಿದಂತೆ ಕಾಣುತ್ತಿದೆ. ನಾಯಕತ್ವದ ಬದಲಾವಣೆಯ ಸಾಧ್ಯತೆಯನ್ನು ಅನೇಕರು ನಿರಾಕರಿಸಿದ್ದಾರೆ. ಯಡಿಯೂರಪ್ಪ ಅವರನ್ನು ಬದಲಿಸುವ ಸೂಚನೆ ಸಿಗುತ್ತಿದ್ದಂತೆ ಒಂದಷ್ಟು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಮುನ್ನೆಲೆಗೆ ಬಂದಿವೆ.

  ಬಿಜೆಪಿ ಹೈಕಮಾಂಡ್​ 2023ರಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವರದಿಯಾಗಿದೆ. 78 ವರ್ಷದ ಲಿಂಗಾಯತ ಸಮುದಾಯದ ಬಲಶಾಲಿ ನಾಯಕ ಬಿಎಸ್​ವೈ ಅವರನ್ನು ಪಟ್ಟದಿಂದ ಇಳಿಸುವುದು ಸುಲಭದ ಕೆಲಸವಲ್ಲ. ಆದ ಕಾರಣ ಲೆಕ್ಕಾಚಾರ ಹಾಕಿ ಈ ಸಂಭಾವ್ಯ ಪಟ್ಟಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ಮುರುಗೇಶ್​ ಆರ್​ ನಿರಾಣಿ

  ಮುಂದಿನ ಮುಖ್ಯಮಂತ್ರಿಯಾಗಲಿರುವ ರೇಸ್​ನಲ್ಲಿ ಮೊದಲು ಕೇಳಿ ಬರುತ್ತಿರುವ ಹೆಸರು ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್​ ಆರ್ ನಿರಾಣಿ ಅವರದ್ದು ಎನ್ನುವ ಊಹಾಪೋಹ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಯಡಿಯೂರಪ್ಪ ಅವರನ್ನು ಬದಲಿಸಲು ನಾನು ಲಾಬಿ ಮಾಡುತ್ತಿಲ್ಲ ಎಂದು ಅವರು ನಿರಾಕರಿಸಿದ್ದಾರೆ. ಸುಮಾರು ಹದಿನೈದು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿ ತಮ್ಮ ಭೇಟಿ ‘ಯಶಸ್ವಿ’ ಎಂದು ನಿರಾಣಿ ಹೇಳಿದ್ದರು. ಅಲ್ಲದೇ ಯಡಿಯೂರಪ್ಪ ಅವರಿಗೆ ತಮ್ಮ ಬೆಂಬಲ ಎಂದು ಪುನರುಚ್ಚರಿಸಿದ್ದರು. ಇದಲ್ಲದೆ, ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದು ಸಾಕಷ್ಟು ಸುದ್ದಿ ಮಾಡಿತ್ತು. ಈ ಗಾಳಿಸುದ್ದಿಯನ್ನು ಮತ್ತೆ ಸಚಿವರು ಕಡಿಮೆ ಮಾಡಲು ಪ್ರಯತ್ನಿಸಿದರಾದರೂ ಅದು ಅಷ್ಟೊಂದು ಡ್ಯಾಮೇಜ್​ ಕಂಟ್ರೋಲ್​ ಮಾಡಲಿಲ್ಲ. ಮೂರು ಬಾರಿ ಬಿಜೆಪಿ ಶಾಸಕರಾಗಿರುವ ನಿರಾಣಿ, ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವ ಎಂಆರ್​ಎನ್​ ಗ್ರೂಪ್ ಮಾಲೀಕತ್ವದ ಕೈಗಾರಿಕೋದ್ಯಮಿ.

  ಬಸವರಾಜ ಬೊಮ್ಮಾಯಿ

  ಯಡಿಯೂರಪ್ಪ ಅವರ ಬಳಿ ಸಿಎಂ ಹುದ್ದೆಗೆ ತಮ್ಮ ಉತ್ತರಾಧಿಕಾರಿ ಯಾರಾಗಬೇಕು ಎಂದು ಹೈಕಮಾಂಡ್​ ಸೂಚಿಸುವಂತೆ ಕೇಳಿದರೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ (61) ಅವರ ಹೆಸರನ್ನು ಬಿಎಸ್​ವೈ ಹೇಳಲಿದ್ದಾರೆ ಎಂಬುದಾಗಿ ವರದಿಯಾಗಿತ್ತು. ಆದರೆ, ಬೊಮ್ಮಾಯಿ ಅವರು ಈ ಎಲ್ಲಾ ಊಹಾಪೋಹಗಳನ್ನು ನಿರಾಕರಿಸಿದರು ಮತ್ತುಇದು ಅಧಿಕೃತವಲ್ಲದ ಸುದ್ದಿ ಎಂದು ಹೇಳಿದ್ದಾರೆ. "ನಾನು ಯಾವುದೇ ಗಾಳಿ ಮಾತುಗಳಿಗೆ ಉತ್ತರಿಸಲು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ. ಮೇ ತಿಂಗಳಲ್ಲಿ, ಬೊಮ್ಮಾಯಿ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ನಾಯಕತ್ವದ ಬದಲಾವಣೆಯ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರು ಎಂಬುದಾಗಿ ವರದಿಯಾಗಿತ್ತು. ಕೆಲವು ಸುದ್ದಿಯನ್ನು ತಳ್ಳಿ ಹಾಕಿದ್ದ ಬೊಮ್ಮಾಯಿ ಅವರು ಇದೆಲ್ಲಾ ಸುಳ್ಳು ಎಂದಿದ್ದರು.  ನಾನು ಗೃಹ ಸಚಿವರನ್ನು ಭೇಟಿಯಾಗಿದ್ದು ರಾಜ್ಯದ ಕೊರೋನಾ ಪರಿಸ್ಥಿತಿಗೆ ಸಂಬಂಧಿಸಿದಂತೆ ಎಂದು ಅವರು ಸ್ಪಷ್ಟಪಡಿಸಿದ್ದರು.

  ಬಸನಗೌಡ ಪಾಟೀಲ ಯತ್ನಾಳ್​

  ಬಸನಗೌಡ ಪಾಟೀಲ ಯತ್ನಾಳ್​ ಅವರು ಬಲವಾದ ಆರ್​ಎಸ್​ಎಸ್​ ಬೇರುಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹೊಂದಿದ್ದಾರೆ ಮತ್ತು ಕೇಂದ್ರ ಸಚಿವರಾಗಿಯೂ ಕೆಲಸ ನಿರ್ವಹಿಸಿದ ಅನುಭವ ಯತ್ನಾಳ್​ಗೆ ಕೈ ಹಿಡಿಯಲಿದೆ ಎಂದು ನಂಬಲಾಗಿದೆ. ವಾಸ್ತವವಾಗಿ, ಅವರು ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯ ನಾಯಕ ಅಲ್ಲದೇ ಈ ವರ್ಷದ ಆರಂಭದಲ್ಲಿ ಪಂಚಮಸಾಲಿ ಲಿಂಗಾಯತರನ್ನು ಹಿಂದುಳಿದ ಜಾತಿ ಗುಂಪಿಗೆ ಸೇರಿಸಬೇಕು ಎನ್ನುವ ಬೃಹತ್​ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಯತ್ನಾಳ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿದ್ದಾರೆ ಎಂಬುದು ವದಂತಿ.

  ಅರವಿಂದ ಬೆಲ್ಲದ್​

  ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರ ಬದಲಾವಣೆಗೆ ತಂತ್ರ ರೂಪಿಸುತ್ತಿರುವವರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಎಂದರೆ ಶಾಸಕ ಅರವಿಂದ ಬೆಲ್ಲದ್​ ಅವರದ್ದು. ಇವರನ್ನು ಸಹ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ ಎಂದು ಈ ವೇಳೆ ನೋಡಲಾಗುತ್ತಿದೆ.  ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಈ ಶಾಸಕ ತಮ್ಮ ಫೋನ್ ಅನ್ನು ಟ್ಯಾಪ್ ಮಾಡಲಾಗುತ್ತಿದೆ ಮತ್ತು ಸಿಎಂ ಅವರನ್ನು ಇಳಿಸುವ ಯತ್ನದಲ್ಲಿ ನಾನು ಇದ್ದೇನೆ ಎಂದು ಪಿತೂರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಯಡಿಯೂರಪ್ಪ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊಂದಿರುವ ಶಾಸಕರ ಪರವಾಗಿ ಬೆಲ್ಲದ್​ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದರು. ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ ಅವರೊಂದಿಗೆ ದೆಹಲಿಗೆ ಭೇಟಿ ನೀಡಿದ್ದ ಕಾರಣ, ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವ ಬಿಜೆಪಿಯೊಳಗಿನ ಪ್ರಯತ್ನಗಳ ಬಗ್ಗೆ ಈ ಘಟನೆ ಸಾಕಷ್ಟು ಪುಷ್ಟಿ ಕೊಟ್ಟಿತ್ತು.

  ಪ್ರಹ್ಲಾದ್​ ಜೋಶಿ

  ಕೇಂದ್ರ ಸಚಿವ ಪ್ರಲ್ಲಾದ್​ ಜೋಶಿ (58), 2004 ರಿಂದ ಸಂಸತ್ತಿನಲ್ಲಿ ಧಾರವಾಡವನ್ನು ಪ್ರತಿನಿಧಿಸುತ್ತಿರುವ ಹಿರಿಯ ಬಿಜೆಪಿ ರಾಜಕಾರಣಿ. ಯಡಿಯೂರಪ್ಪ ಅವರನ್ನು ಬದಲಾಯಿಸಲಾಗುವುದು ಎಂಬುದರ ಬಗ್ಗೆ ಬಂದ ವರದಿಗಳಿಗೆ ಪ್ರತಿಕ್ರಿಯಿಸಿದ ಜೋಶಿ, “ಇದರ ಬಗ್ಗೆ ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. ಇದು ಮಾಧ್ಯಮಗಳು ಸೃಷ್ಟಿ, ಮಾಧ್ಯಮಗಳು ಮಾತ್ರ ಈ ವಿಚಾರವನ್ನು ಚರ್ಚಿಸುತ್ತಿವೆ. ಯಾರೂ ನನ್ನೊಂದಿಗೆ ಮಾತನಾಡದ ಕಾರಣ, ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. " ಎಂದಿದ್ದರು. ಆದರೆ ಪ್ರಧಾನಿ ಮೋದಿ ಹಾಗೂ ಅನೇಕ ಬಿಜೆಪಿ ನಾಯಕರಿಗೆ ಅತ್ಯಂತ ಆಪ್ತವಾಗಿರುವ ಜೋಶಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೊತ್ತಿಗೆ ಜೊತೆಗಿರುತ್ತಾರೆ, ಆದ ಕಾರಣ ಇವರನ್ನು ಸಹ ಮುಖ್ಯಮಂತ್ರಿ ಮಾಡಬಹುದು ಎಂದು ಊಹಿಸಲಾಗಿದೆ. ಆದರೆ ಕೇವಲ 2 ವರ್ಷಕ್ಕೆ ಮುಖ್ಯಮಂತ್ರಿಯಾಗುವ ಆಸೆ ಇವರಿಗೆ ಇಲ್ಲ ಎಂದು ಮೂಲಗಳು ಹೇಳಿವೆ.

  ಬಿ.ಎಲ್.ಸಂತೋಷ್

  ಆರ್​ಎಸ್​ಎಸ್​ನ ಹಿರಿಯ ಕಾರ್ಯಕರ್ತ, ನಾಯಕ ಹೀಗೆ ಅನೇಕ ರೀತಿಯಲ್ಲಿ ಗುರುತಿಸಿಕೊಂಡಿರುವ ಬಿ.ಎಲ್.ಸಂತೋಷ್ ಬಿಜೆಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರು. ಬಿಜೆಪಿಯೊಂದಿಗಿನ ಅವರ ಒಡನಾಟ 1993ರಿಂದ ಪ್ರಾರಂಭವಾಯಿತು.  ಆರ್‌ಎಸ್‌ಎಸ್ ಪ್ರಚಾರಕ್​ ಆಗಿ ಕೆಲಸ ಆರಂಭಿಸಿದ ಸಂತೋಷ್​, 2006 ರಲ್ಲಿ ಕರ್ನಾಟಕ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿವಹಿಸಿಕೊಂಡರು. ಈ ಮೊದಲು ಬಿಎಸ್​ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ ಎಂದು ವರದಿ ಬಂದಾಗ ಈ ಕೆಲಸದ ಹಿಂದೆ ಕೇಳಿಬಂದ ಹೆಸರು ಬಿ.ಎಲ್​.ಸಂತೋಷ್​​ ಅವರದ್ದು ಅದರೆ ಈ ಎಲ್ಲಾ ಆರೋಪಗಳನ್ನು ಅವರು ನಿರಾಕರಿಸಿದ್ದರು.

  ಸಿಟಿ ರವಿ

  ನಾಲ್ಕು ಬಾರಿ ಚಿಕ್ಕಮಗಳೂರು  ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸಿ.ಟಿ.ರವಿ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರು. 54 ವರ್ಷದ ಈ ನಾಯಕ 2020 ರ ಸೆಪ್ಟೆಂಬರ್ 26 ರಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೊದಲು ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದರು.

  2019ರಲ್ಲಿ ನಡೆದ ಸಚಿವ ಸಂಪುಟವಿಸ್ತರಣೆಯ ಸಮಯದಲ್ಲಿ ಸಿ.ಟಿ.ರವಿ ಅಕ್ಷರಶಃ ಯಡಿಯೂರಪ್ಪ ಅವರ ವಿರುದ್ದ ಕೆಂಡಾ ಮಂಡಲವಾಗಿದ್ದರು. ವಕ್ಕಲಿಗ ನಾಯಕ ರವಿ ಅವರು ಭಿನ್ನಾಭಿಪ್ರಾಯಗಳ ಕುರಿತು ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು. ಅಶ್ವತ್ ನಾರಾಯಣ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಿದ್ದರಿಂದ ಇವರ ಸ್ಥಾನ ಅವರಿಗಿಂತ ಕೆಳಗೆ ಹೋಯಿತು ಎಂದು ಭಾವಿಸಲಾಗಿತ್ತು. “ನಾನು ಭಿನ್ನಮತೀಯನೂ ಅಲ್ಲ, ಬಂಡಾಯಗಾರನೂ ಅಲ್ಲ. ನನ್ನ ನಿಷ್ಠೆ ಬಿಜೆಪಿಗೆ ಮಾತ್ರ. ಆದರೆ ನಾನು ನನ್ನ ತತ್ವಕ್ಕೆ ನಿಷ್ಠನಾಗಿರುವ ಹೆಮ್ಮೆಯ ವ್ಯಕ್ತಿ. ನನ್ನ ಹೆಮ್ಮೆ ನೋಯಿಸಿದರೆ, ನನ್ನಲ್ಲಿರುವ ಬಂಡಾಯಗಾರ ಮುಂಚೂಣಿಗೆ ಬರುತ್ತಾನೆ. ಇದಕ್ಕೆ ನಾನೇನು ಮಾಡಲು ಸಾಧ್ಯ? ನಾನು ಜನರ ಆಶೀರ್ವಾದದಿಂದ ಬೆಳೆದ ಹೋರಾಟಗಾರ ”ಎಂದು ರವಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

  ಯಡಿಯೂರಪ್ಪ ಅವರ ಬಣವು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಮತ್ತು ಸಿ.ಟಿ.ರವಿ ಅವರುಗಳೇ ನಾಯಕತ್ವದ ಬದಲಾವಣೆಯನ್ನು ಬಯಸಿದ್ದಾರೆ ಎಂದು ಹೇಳುತ್ತಿರುವುದಾಗಿ ವರದಿಯಾಗಿದೆ.

  ಇದನ್ನೂ ಓದಿ: ಬೆಣ್ಣೆಹಳ್ಳ: ಚಾಲಕನ ದುಸ್ಸಾಹಸಕ್ಕೆ ಹಳ್ಳದಲ್ಲಿ ಪಲ್ಟಿಯಾದ ಲಾರಿ; ಕೊಚ್ಚಿಹೋದ ಶ್ವಾನಗಳು..!

  ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಸಿ.ಎನ್.ಅಶ್ವತ್ ನಾರಾಯಣ್, ಲಕ್ಷ್ಮಣ್ ಸವದಿ ಮತ್ತು ಗೋವಿಂದ್ ಕಾರಜೋಳ, ಮತ್ತು ಕರ್ನಾಟಕ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರುಗಳು ಸಹ ಮುನ್ನೆಲೆಯಲ್ಲಿ ಇವೆ ಎಂದು ಹೇಳಲಾಗುತ್ತಿದೆ.

  ವರದಿ- ರಮೇಶ್ ಹಂಡ್ರಂಗಿ  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: