ಬಾದಾಮಿ: ಹಳ್ಳಿ ಯುವತಿ ಪೊಲೀಸ್​ ಅಧಿಕಾರಿಯಾದ ರೋಚಕ ಕಥೆ

ಬಾದಾಮಿ ತಾಲೂಕಿನ ಹಿರೇನಸಬಿ ಗ್ರಾಮದ ಪ್ರತಿಭಾವಂತ ಯುವತಿ ಮಹಾಲಕ್ಷ್ಮೀ ಕೋರನ್ನವರ ತೋರಿಸಿಕೊಟ್ಟಿದ್ದಾರೆ. ಪ್ರಸಕ್ತ ಪಿಎಸ್ಐ ನೇಮಕಾತಿ ಪ್ರಕಟಗೊಂಡಿದ್ದು, ಬಾದಾಮಿ ತಾಲೂಕಿನಲ್ಲೇ ಇಬ್ಬರು ಪಿಎಸ್ಐ ಹುದ್ದೆಗೆ ನೇಮಕಗೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

news18-kannada
Updated:September 16, 2020, 4:04 PM IST
ಬಾದಾಮಿ: ಹಳ್ಳಿ ಯುವತಿ ಪೊಲೀಸ್​ ಅಧಿಕಾರಿಯಾದ ರೋಚಕ ಕಥೆ
ಪಿಎಸ್​​ಐ ಹುದ್ದೆಗೆ ಆಯ್ಕೆಯಾದ ಮಹಾಲಕ್ಷ್ಮೀ
  • Share this:
ಬಾಗಲಕೋಟೆ(ಸೆ.16): ಛಲ ಇದ್ದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ಸಿದ್ದರಾಮಯ್ಯ ಕ್ಷೇತ್ರದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಿರೇನಸಬಿ ಗ್ರಾಮದ ಪ್ರತಿಭಾವಂತ ಯುವತಿ ಮಹಾಲಕ್ಷ್ಮೀ ಕೋರನ್ನವರ ತೋರಿಸಿಕೊಟ್ಟಿದ್ದಾರೆ. ಪ್ರಸಕ್ತ ಪಿಎಸ್ಐ ನೇಮಕಾತಿ ಪ್ರಕಟಗೊಂಡಿದ್ದು, ಬಾದಾಮಿ ತಾಲೂಕಿನಲ್ಲೇ ಇಬ್ಬರು ಪಿಎಸ್ಐ ಹುದ್ದೆಗೆ ನೇಮಕಗೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಮಹಾಲಕ್ಷ್ಮಿ ಕೋರನ್ನವರ  ಪಿಎಸ್​​ಐ ಪರೀಕ್ಷೆಯಲ್ಲಿ 48ನೇ ರ‍್ಯಾಂಕ್‌ ಪಡೆದಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಬಾದಾಮಿ ತಾಲೂಕಿನ ಹಿರೇನಸಬಿ ಗ್ರಾಮದ ಕ್ಯಾತಪ್ಪ ಕೋರನ್ನವರ ಮತ್ತು ಕಮಲಾಕ್ಷಿ ದಂಪತಿಗಳು. ಇವರಿಗೆ ಮಹಾಲಕ್ಷ್ಮೀ, ಸುರೇಖಾ, ಕುಬೇರ, ಮಂಜುನಾಥ 4 ಜನ ಮಕ್ಕಳು. ತಂದೆ ಸದ್ಯ ಬೇಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು. ತಾಯಿ ಗೃಹಿಣಿ. ಇವರ ಮೊದಲ ಮಗಳಾದ ಮಹಾಲಕ್ಷ್ಮೀ ಈ ಸಾಧನೆ ಮಾಡಿದ್ದಾಳೆ. ಈಕೆ ಸಾಧನೆಗೆ ಇಡೀ ಊರೇ ಮೆಚ್ಚುಗೆ ವ್ಯಕ್ತಪಡಿಸಿದೆ. ತನ್ನ ಹಲವು ದಿನಗಳ ಕನಸನ್ನು ಮೊದಲ ಪ್ರಯತ್ನದಲ್ಲೇ ಸಾಧಿಸಿದ್ಧಾರೆ ಮಹಾಲಕ್ಷ್ಮೀ.


ಮೊದಲ ಮಗಳಾದ ಮಹಾಲಕ್ಷ್ಮೀ ಪ್ರಾಥಮಿಕ ಶಿಕ್ಷಣವನ್ನು ಹಿರೇಮುಚ್ಚಳಗುಡ್ಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ನಂದಗಡದ ಸಂಗೋಳ್ಳಿ ರಾಯಣ್ಣ ವಸತಿ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಎಸ್​​ಎಂಡಿ ಕಾಲೇಜ ಧಾರವಾಡದಲ್ಲಿ, ಬಿಎಸ್​​ಸಿ(ಅಗ್ರಿ) ಮತ್ತು ಎಂಎಸ್​​ಸಿ(ಅಗ್ರಿ) ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಪ್ರಾಥಮಿಕ ಶಿಕ್ಷಣ ಕಲಿಯುತ್ತಿರುವಾಗಲೇ ಪ್ರಬಂಧ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಪ್ರತಿನಿಧಿಸಿದ್ದಾರೆ.

ಎಂಎಸ್​​ಸಿ(ಅಗ್ರಿ) ಸ್ನಾತಕೋತ್ತರ ಪದವಿ ಪಡೆದು ತಾನು ಪಿಎಸ್​​ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂದು ಛಲ ತೊಟ್ಟು ಸತತ ಒಂದು ವರ್ಷದಿಂದ ಪ್ರತಿ ದಿನ 7 ರಿಂದ 8 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಸಹಿತ ಕಲಾ ವಿಭಾಗದ ಇತಿಹಾಸ, ಸಂವಿಧಾನದ ಪುಸ್ತಕಗಳನ್ನು ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಸಾಧನೆ ಮಾಡಿದ್ದಾರೆ. ಈಗ ಕೆಎಎಸ್ ಪರೀಕ್ಷೆ ಬರೆದಿರುವ ಮಹಾಲಕ್ಷ್ಮೀ ಕೆಎಎಸ್ ಅಧಿಕಾರಿಯಾಗುವ  ತವಕದಲ್ಲಿದ್ದಾರೆ. ಸಾಧನೆ ಮಾಡುವ ಮನಸ್ಸು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಹಾಲಕ್ಷ್ಮೀ ಉದಾಹರಣೆಯಾಗಿದ್ದಾರೆ. ಇಂದಿನ ಯುವತಿಯರಿಗೆ ಮಾದರಿಯಾಗಿದ್ದಾರೆ. ಭವಿಷ್ಯದಲ್ಲಿ ಉತ್ತಮ ಸಮಾಜ ಸೇವೆ ಮಾಡಲಿ ಎಂಬುದೇ ಎಲ್ಲರ ಆಶಯ.

ಮಹಿಳೆಯರೂ ಸಹ ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಮಹಿಳಾ ಎಸ್​​ಪಿ ರೂಪಾ, ವರ್ದಿಯಾ ಕಟಿಯಾರ ಸೇರಿದಂತೆ ಅನೇಕ ಮಹಿಳೆಯರು ಎಸ್ಪಿ, ಡಿವೈಎಸ್ಪಿ ಆಗಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಪಿಎಸ್​​ಐ ಹುದ್ದೆ ಆಯ್ಕೆ ಮಾಡಿಕೊಂಡಿದ್ದೇನೆ. ಸಾಧನೆ ಸುಲಭವಾಗಿ ಒಲಿಯುವುದಿಲ್ಲ. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು. ನಾನು ಎಂಎಸ್​​ಸಿ(ಅಗ್ರಿ) ಓದಿದರೂ ಆಡಳಿತಾತತ್ಮಕ ಹುದ್ದೆ ಸೇರಬೇಕು ಎನ್ನುವ ಆಸೆ ಇತ್ತು. ಹಾಗಾಗಿ ಪಿಎಸ್​​ಐ ಪರೀಕ್ಷೆ ಬರೆದೆ. ಸಾರ್ವಜನಿಕ ಸೇವೆಯಾಗಿರವುದರಿಂದ ಪ್ರಮಾಣಿಕವಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇನ್ನು ಮುಂದೆ ಅಧ್ಯಯನ ನಿರಂತರವಾಗಿ ಮುಂದುವರೆಸಿ ಕೆಎಎಸ್​ ಆಗುವ ಆಸೆ ಇದೆ ಎನ್ನುತ್ತಾರೆ ಸಾಧಕಿ ಮಹಾಲಕ್ಷ್ಮೀ ಕೋರನ್ನವರ.

ನಮ್ಮ ಮಗಳು ಮಹಾಲಕ್ಷ್ಮೀ ಪ್ರಾಥಮಿಕ ಶಿಕ್ಷಣದಿಂದಲೂ ಪ್ರತಿಭಾವಂತಳಿದ್ದಳು. ಅವರನ್ನು ಯಾವುದಾದರೂ ಉನ್ನತ ಹುದ್ದೆಗೆ ಸೇರಿಸಬೇಕು ಎಂಬ ಆಸೆ ಇತ್ತು. ಈಗ ನನಸಾಗಿದೆ ಎಂದು ತಂದೆ ಕ್ಯಾತಪ್ಪ ಕೋರನ್ನವರ ತಮ್ಮ ಸಂತಸವನ್ನು ಹಂಚಿಕೊಂಡರು.
ಬಾದಾಮಿ ತಾಲೂಕಿನಲ್ಲಿ ಹಿರೇನಸಬಿ ಗ್ರಾಮದ ಯುವತಿ ಮಹಾಲಕ್ಷ್ಮೀ ಕೋರನ್ನವರ ಹಾಗೂ ನೀಲಗುಂದ ಗ್ರಾಮದ ಹೊಳಬಸಪ್ಪ ಹೋಳಿ ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದು, ಬಾದಾಮಿ ತಾಲೂಕು ಹಾಗೂ ಬಾಗಲಕೋಟೆ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ಯುವಕ,ಯುವತಿಯರಿಗೆ ಪ್ರೇರಣೆಯಾಗಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಹಾಲಕ್ಷ್ಮೀ ಕೋರನ್ನವರ ಸಾಧಕಿಗೆ ಬಾದಾಮಿ ಪಟ್ಟಣ ಸೇರಿದಂತೆ ಸಂಘ-ಸಂಸ್ಥೆಗಳು ಮನೆಗೆ ತೆರಳಿ ಶಾಲು ಹೊದಿಸಿ ಸನ್ಮಾನಿಸಿ ಹಾರೈಸಿದ್ದಾರೆ. ಯುವಮುಖಂಡ ಮಹೇಶ ಹೊಸಗೌಡ್ರ, ಬಾದಾಮಿ ಸಾಯಿ ಸೇವಾ ಸಮಿತಿ ವತಿಯಿಂದ ಮಹಾಲಕ್ಷ್ಮೀ ಕೋರನ್ನವರ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಸಿಬ್ಬಂದಿ ಎಡವಟ್ಟು; ಫಲಾನುಭವಿಗೆ ಸಿಗುತ್ತಿಲ್ಲ ಅಂಗವಿಕಲ ವೇತನದ ದುಡ್ಡು

ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದೀಚೆಗೆ ಆಡಳಿತಾತ್ಮಕ ಹುದ್ದೆಗೆ ಹೆಚ್ಚಿನ ಯುವಕ,ಯುವತಿಯರು ನೇಮಕವಾಗುತ್ತಿದ್ದು,ಜಿಲ್ಲೆಯ ಕೀರ್ತಿ ಹೆಚ್ಚುತ್ತಿದೆ. ಇನ್ನುಷ್ಟು ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಲಿ, ಜೊತೆಗೆ ಜಿಲ್ಲಾಡಳಿತ,ಸಂಘ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷೆ  ತಯಾರಿ ನಡೆಸುವ ಪ್ರತಿಭಾವಂತ ಪರೀಕ್ಷಾರ್ಥಿಗಳಿಗೆ ಅಧ್ಯಯನ ಕೇಂದ್ರ ತೆರೆದು ಸಹಾಯ ಹಸ್ತ ಚಾಚಬೇಕಿದೆ.
Published by: Ganesh Nachikethu
First published: September 16, 2020, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading