ಬೆಂಗಳೂರು(ಏ.01): ಬಹುನಿರೀಕ್ಷೆಯ ಕರ್ನಾಟಕ ವಿಧಾನಸಭಾ ಚುನಾವಣೆ 2023 (Karnataka Assembly Elections) ದಿನಾಂಕ ಪ್ರಕಟಗೊಂಡಿದ್ದು, ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ 10ರಂದು ಮತದಾನ (Voting) ನಡೆಯಲಿದೆ. ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ ಕೇಂದ್ರ ಚುನಾವಣಾಧಿಕಾರಿಗಳು ಮತ್ತೊಂದು ಹೊಸ ವಿನೂತನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಒಟ್ಟು 5.21 ಕೋಟಿ ಮತದಾರರು ಮತದಾನದ ಅರ್ಹತೆ ಹೊಂದಿದ್ದಾರೆ. ಅದರಲ್ಲಿ 80 ವರ್ಷ ಮೇಲ್ಪಟ್ಟ 12,15,763 ಮತದಾರರು ಇದ್ದಾರೆ. 100 ವರ್ಷ ಮೇಲ್ಪಟ್ಟವರು 16,976 ಮಂದಿ ಇದ್ದಾರೆ. ಅದೇ ರೀತಿ ವಿಕಲಚೇತನರ ಸಂಖ್ಯೆ ರಾಜ್ಯದಲ್ಲಿ 5.55 ಲಕ್ಷದಷ್ಟಿದೆ. ಅವರೆಲ್ಲರೂ ಈ ಬಾರಿ ತಮ್ಮ ಮನೆಗಳಿಂದಲೇ ಮತದಾನ ಮಾಡಬಹುದಾಗಿದೆ ಎಂದು ಚುನಾವಣಾ ಆಯೋಗವು ಪ್ರಕಟಿಸಿದೆ.
ಇದನ್ನೂ ಓದಿ: JDS ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ನಿರ್ಮಾಪಕ ಮಂಜುಗೆ ಬಿಗ್ ಶಾಕ್!
ಮತದಾನ ನಮ್ಮ ಸಾಂವಿಧಾನಿಕ ಹಕ್ಕು. ಅದನ್ನು ಚಲಾಯಿಸುವ ಮೂಲಕ ಅರ್ಹರನ್ನು ಆಯ್ಕೆ ಮಾಡಬೇಕಿದೆ. ಈ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು. ಈ ಮಹತ್ತರ ಕಾರಣದಿಂದಲೇ ಮತಗಟ್ಟೆಗಳಿಗೆ ಬರಲು ಆಗದ ದಿವ್ಯಾಂಗರು, ಕಾಯಿಲೆಗಳಿಂದ ಹಾಸಿಗೆ ಹಿಡಿದವರು ಮತ್ತು 80 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು/ವೃದ್ಧರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಅದಕ್ಕಾಗಿ ವಿಶೇಷ ಸೌಲಭ್ಯ ನೀಡಲಾಗುವುದು ಎಂದು ರಾಜೀವ್ ಕುಮಾರ್ ವಿವರಿಸಿದರು.
‘ಉದ್ದೇಶಪೂರ್ವಕವಾಗಿ’ ಬುಧವಾರದಂದು ಚುನಾವಣೆ
ಹಿಂದಿನ ವರ್ಷಗಳಿಂದ ನಾವು ಲೆಕ್ಕ ಹಾಕಿದರೆ, ಜನರು ಮತದಾನದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ, ವಿಶೇಷವಾಗಿ ನಗರದ ಜನರು. ಕೆಲಸ ಮಾಡಲು ಹೋಗುವ ಜನರು ಕಚೇರಿಯಲ್ಲಿನ ಒತ್ತಡ ಅಥವಾ ಅವರ ಕೆಲಸದ ಕಿರಿಕಿರಿಯ ಕಾರಣದಿಂದ ಯಾವಾಗಲೂ ರಜಾದಿನಗಳನ್ನು ಎದುರು ನೋಡುತ್ತಿರುತ್ತಾರೆ.
ಜನರಿಗೆ ಶನಿವಾರ, ಭಾನುವಾರ ಮತ್ತು ಸೋಮವಾರದಂತಹ ನಿರಂತರ ರಜಾದಿನಗಳಿದ್ದರೆ(ಲಿಂಕಿಂಗ್ ರಜೆ ದಿನಗಳು) ಸಿಕ್ಕರೆ ತುಂಬ ಸಂತೋಷವಾಗುತ್ತದೆ. ಆ ಸಮಯದಲ್ಲಿ ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಾರೆ. ಚುನಾವಣೆ ಅಥವಾ ಯಾವುದೇ ಹಬ್ಬ ಬಂದರೂ ಅವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ರಜೆಯಷ್ಟೇ ಮುಖ್ಯ. ಇದೇ ಕಾರಣದಿಂದ ಚುನಾವಣಾ ಆಯೋಗವು ಬುಧವಾರ ಚುನಾವಣೆಯನ್ನು ನಡೆಸಲು ನಿರ್ಧರಿಸಿದೆ ಎಂದು ಚುನಾವಣಾ ಆಯೋಗ ವಿವರಿಸಿದೆ. ಜನರ ತಲೆಯಲ್ಲಿ ಮತದಾನದ ಹೊರತಾಗಿ ಬೇರೆ ಯಾವುದೇ ಯೋಜನೆ ಬರಬಾರದೆಂದು ಈ ನಿರ್ಧಾರ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Election: ಏಪ್ರಿಲ್ 6ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ? ಕಮಲ ಕಲಿಗಳ ಮ್ಯಾರಥಾನ್ ಮೀಟಿಂಗ್
ಬೆಂಗಳೂರಿನಲ್ಲಿನ ಸಿಇಸಿ, ಬಿಬಿಎಂಪಿ (ದಕ್ಷಿಣ), ಬಿಬಿಎಮ್‌ಪಿ (ಉತ್ತರ), ಬಿಬಿಎಮ್‌ಪಿ (ಕೇಂದ್ರ) ಮತ್ತು ಬೆಂಗಳೂರು ನಗರ ಪ್ರದೇಶಗಳಲ್ಲಿ ಮತದಾನದ ಬಗ್ಗೆ ತೀವ್ರ ನಿರಾಸಕ್ತಿ ಕಂಡು ಬಂದಿದೆ. ಈ ಹಿಂದೆ ಈ ನಗರದಲ್ಲಿ ಕಡಿಮೆ ಮತದಾನ ದಾಖಲಾಗಿತ್ತು.
ಈ ನಾಲ್ಕು ಜಿಲ್ಲೆಗಳಲ್ಲಿ 88% ಮತದಾನ ಕೇಂದ್ರಗಳು ನಗರ ಪ್ರದೇಶಗಳಲ್ಲಿವೆ. 2018 ರಲ್ಲಿ ಕರ್ನಾಟಕದ ಮತದಾನದ ಪ್ರಮಾಣ 72% ಕ್ಕೆ ಹೋಲಿಸಿದರೆ, ಈ ನಾಲ್ಕು ಜಿಲ್ಲೆಗಳಲ್ಲಿ 57% ಅಥವಾ ಕಡಿಮೆ ಮತದಾನವಾಗಿದೆ ಎಂದು ಸಿಇಸಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಮನೆಯಿಂದ ಮತದಾನ
ಮನೆಯಿಂದ ಮತಹಾಕುವವರಿಗೆ ಚುನಾವಣಾ ಆಯೋಗದ ವೆಬ್‌ಸೈಟ್, ವೋಟರ್ ಹೆಲ್ಪ್‌ಲೈನ್ ಇಲ್ಲವೇ ಸಕ್ಷಮ್ ಆ್ಯಪ್‌ನಲ್ಲಿ ನೋಂದಣಿ ಕಡ್ಡಾಯ. ಸ್ಥಳೀಯ ಬೂತ್ ಮಟ್ಟದ ಚುನಾವಣಾಧಿಕಾರಿಗಳ ಕಚೇರಿಗಳಲ್ಲೂ ನೋಂದಣಿ ಮಾಡಬಹುದು.
ಕಳೆದ ವರ್ಷ ಚುನಾವಣೆ ನಡೆದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ನಗರ ನಿರಾಸಕ್ತಿ ಪ್ರವೃತ್ತಿ ಕಂಡುಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಚುನಾವಣಾ ಆಯೋಗವು ಶಾಲೆಗಳು ಮತ್ತು ವಿವಿಧ ಸಂಸ್ಥೆಗಳಿಗೆ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಂಡಿದೆ.
ಎಲ್ಲರೂ ಮತದಾನ ಮಾಡಬೇಕು. ನಿಮ್ಮ ಮತ ಅತ್ಯಮೂಲ್ಯ. ನಿಮ್ಮದೇ ನಾಯಕರನ್ನು ಆಯ್ಕೆ ಮಾಡಿ ಎಂದು ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ