Karnataka Rains: ಉಕ್ಕಿ ಹರಿದ ಪಯಸ್ವಿನಿ ನದಿ, ಕೆರಯಂತಾದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ, ಈ ಭಾಗದ ಶಾಲೆಗಳಿಗೆ ರಜೆ

ನಸುಕಿನ ಜಾವದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿದೆ. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದ್ದು, ಹಬ್ಬಕ್ಕೆ ಊರಿಗೆ ತೆರಳುತ್ತಿದ್ದವರು ನಡುರಸ್ತೆಯಲ್ಲಿಯೇ ಸಿಲುಕಿದ್ದಾರೆ.

ಮಳೆ

ಮಳೆ

  • Share this:
ರಾಜ್ಯದಲ್ಲಿ ಮಳೆ (Karnataka Rains) ಮುಂದುವರಿದಿದೆ. ರಾಮನಗರ, ಮಂಡ್ಯ, ಚಾಮರಾಜನಗರ, ಕೊಪ್ಪಳ, ಮಂಗಳೂರು, ಕೊಡಗು ಭಾಗದಲ್ಲಿ ತಡರಾತ್ರಿಯಿಂದಲೇ ಮಳೆಯಾಗುತ್ತಿದೆ. ಅಲ್ಪವಿರಾಮದ ಬಳಿಕ ಅಬ್ಬರಿಸುತ್ತಿರುವ ವರುಣ (Heavy Rainfall) ಸೃಷ್ಟಿಸುತ್ತಿರುವ ಅವಾಂತರಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿಯೂ ಮಳೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಯಾವುದೇ ಕ್ಷಣದಲ್ಲಿ ಜಲಾಶಯಗಳಿಂದ (Dams) ಹೊರ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಜನರು ನದಿ (Rivers) ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಕೊಡಗು (Kodagu Rainfall) ಭಾಗದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಕೊಯನಾಡಿನ ಪಯಸ್ವಿನಿ ನದಿ (Payasvini River) ತಟದ ಹಲವು ಮನೆಗಳು ಜಲಾವೃತಗೊಂಡಿವೆ. ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿಗಳು ಸಿಲುಕಿದ ಪರಿಣಾಮ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ.

ನಾಲ್ಕೈದು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಒಂದು ಮನೆ ಸಂಪೂರ್ಣ ನಾಶವಾಗಿದೆ. ಮೂರನೆಯ ಬಾರಿಗೆ ಕೊಯನಾಡಿನಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಏಕಾಏಕಿ ಪಯಸ್ವಿನಿ ನದಿಯಲ್ಲಿ ಪ್ರವಾಹ ಸೃಷ್ಟಿ ಆಗಿರೋದರಿಂದ ಸಂತ್ರಸ್ತ ಕುಟುಂಬಗಳನ್ನು ತಡರಾತ್ರಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ

ಮತ್ತೊಂದೆಡೆ ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಭಗಂಡೇಶ್ವರ ದೇವಾಲಯದ ಆವರಣದವರೆಗೆ ನೀರು ಪ್ರವೇಶಿಸಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಭಾಗಮಂಡಲ ಮಡಿಕೇರಿ ರಸ್ತೆಯ ಮೇಲೆಯೂ ನೀರು ಹರಿಯುತ್ತಿದೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚಾರ ವ್ಯತ್ಯಯ

ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 10ನೇ ಮೈಲ್ ಬಳಿ ಬರೆ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಈ ಕುಸಿತವಾಗಿದ್ದು, ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಚನ್ನಪಟ್ಟಣದಲ್ಲಿ ಮುಂದುವರಿದ ಮಳೆ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿಯೂ ಮಳೆ ಮುಂದುವರಿದಿದೆ. ನಗರದ ಶೇರು ಹೋಟೆಲ್ ಸರ್ಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಜಲಾವೃತ ರಸ್ತೆಯಲ್ಲಿಯೇ ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ. ಮಳೆಯಿಂದಾಗಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ನಸುಕಿನ ಜಾವದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿದೆ. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದ್ದು, ಹಬ್ಬಕ್ಕೆ ಊರಿಗೆ ತೆರಳುತ್ತಿದ್ದವರು ನಡುರಸ್ತೆಯಲ್ಲಿಯೇ ಸಿಲುಕಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿರುವವರು ತಮ್ಮ ಪ್ರಯಾಣ ಮುಂದೂಡುವುದು ಒಳ್ಳೆಯದು,

ನಗರ ಭಾಗದಲ್ಲಿಯೂ ಮಳೆ ಆಗ್ತಿದ್ದು, ದ್ವಿಚಕ್ರ ವಾಹನ ಸವಾರರು ವರುಣನಿಂದ ರಕ್ಷಣೆ ಪಡೆಯಲು ತಂಗುದಾಣ, ಮಳಿಗೆಗಳ ಶೆಲ್ಟರ್ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ

ಚಾಮರಾಜನಗರ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆ ಇಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

Heavy rainfall ramanagara Mandya mysuru national highway submerged mrq
ಹೆದ್ದರಿ ಸಂಚಾರ ಬಂದ್


ರಾಮನಗರ, ಚನ್ನಪಟ್ಟಣ, ಕನಕಪುರದ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಡಿಡಿಪಿಐ ಗಂಗಣ್ಣ ಸ್ವಾಮಿ ಆದೇಶ ಹೊರಡಿಸಿದ್ದಾರೆ. ಇತ್ತ ಖಾಸಗಿ ಶಾಲೆಗಳು ಸಹ ಮಕ್ಕಳಿಗೆ ರಜೆ ನೀಡಿವೆ.

ಹಳ್ಳಕ್ಕೆ ಬಿದ್ದು ಬಾಲಕ ಸಾವು

ಸೈಕಲ್ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕರ ಪೈಕಿ ಓರ್ವ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ನಡೆದಿದೆ. ನಂದೀಶ್ ಹರಿಜನ  (13) ಮೃತ ಬಾಲಕ.  ಮೃತ ನಂದೀಶ್ ಏಳನೇ ತರಗತಿಯಲ್ಲಿ ಓದುತ್ತಿದ್ದನು. ಸೈಕಲ್​ನಲ್ಲಿದ್ದ ತಮ್ಮ ಮಲ್ಲಿಕಾರ್ಜುನ್ ಈಜಿ ದಡ ಸೇರಿದ್ದಾನೆ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಅಣ್ಣ ತಮ್ಮ ಜೊತೆಯಾಗಿ ಆಟ ಆಡಲು ಹಳ್ಳಕ್ಕೆ ಹೋಗಿದ್ದರು. ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿತ್ತು. ನೀರಿನ ರಭಸಕ್ಕೆ ನಂದೀಶ್ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Mahmadrafik K
First published: