• Home
  • »
  • News
  • »
  • state
  • »
  • Chikkamagaluru Rains: ನೀರಿನಲ್ಲಿ ಕೊಚ್ಚಿ ಹೋದ ಕಾರ್; ಚಿಕ್ಕಮಗಳೂರಿನಲ್ಲಿ ರಣ ಮಳೆಗೆ ನಾಲ್ವರು ಬಲಿ

Chikkamagaluru Rains: ನೀರಿನಲ್ಲಿ ಕೊಚ್ಚಿ ಹೋದ ಕಾರ್; ಚಿಕ್ಕಮಗಳೂರಿನಲ್ಲಿ ರಣ ಮಳೆಗೆ ನಾಲ್ವರು ಬಲಿ

ಜಲವ್ಯೂಹದಲ್ಲಿ ಕಾರ್

ಜಲವ್ಯೂಹದಲ್ಲಿ ಕಾರ್

ಭಾರೀ ಮಳೆಗೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದು ಓರ್ವ ಬಾಲಕಿ ನಾಪತ್ತೆಯಾಗಿದ್ದಾಳೆ. 6 ಜಾನುವಾರುಗಳು ಮೃತ ಪಟ್ಟಿವೆ. 1494 ವಿದ್ಯುತ್ ಕಂಬ, 45 ಸೇತುವೆ, 536 ಪೂರ್ಣಮನೆ, 350 ಮನೆಗಳಿಗೆ ಅಲ್ಪಪ್ರಮಾಣ ದ ಹಾನಿಯಾಗಿದೆ.

  • Share this:

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಶ್ಲೇಷ ಮಳೆ (Chikkamagaluru Rain) ಅಬ್ಬರಿಸುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಮಟ್ಟ (River Overflow) ಏರಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಜನರು ರೋಸಿ ಹೋಗಿದ್ದಾರೆ. ಇಂದು ಮೂಡಿಗೆರೆ (Mudigere) ಮತ್ತು ಕಳಸ (Kalasa) ತಾಲೂಕಿನ ಭಾಗದ 1 ರಿಂದ 10ನೇ ತರಗತಿ ಶಾಲೆಗಳಿಗೆ ರಜೆ (School Hooliday) ನೀಡಲಾಗಿದೆ. ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ರು. ಈ ಹಿನ್ನೆಲೆ ರಜೆ ಘೋಷಿಸಿ ಬಿಇಒ ಆದೇಶಿಸಿದ್ದಾರೆ. ಸೋಮವಾರ ರಾತ್ರಿ ಸುರಿದ ಮಳೆಗೆ ಅನೇಕ ಅವಘಡಗಳು ಸಂಭವಿಸಿದ್ದು, ಮಂಗಳ ವಾರ ಬೆಳಗ್ಗೆ ಮಧ್ಯಾಹ್ನದವರೆಗೂ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿದ್ದು, ಸಂಜೆ ವೇಳೆಗೆ ಬಿರುಸು ಪಡೆದುಕೊಂಡಿದೆ. ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು, ಅನೇಕ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಕಣ್ಣಾಮುಚ್ಚಾಲೇ ಆಡುತ್ತಿದೆ.


ಹಬ್ಬಕ್ಕೆ ನೆಂಟರಮನೆಗೆ ಹೋಗುತ್ತಿದ್ದ ವ್ಯಕ್ತಿಯ ಸಾವು


ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅದರಲ್ಲೂ ಮಲೆನಾಡು ಭಾಗದಲ್ಲಿ ನಿರಂತರ ಮಳೆಗೆ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇತ್ತೀಚೆಗೆ ಕಾಫಿತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಮೇಲೆ ಮರಬಿದ್ದು ಮೃತಪಟ್ಟಿದ್ದಳು.


ಶಾಲೆಯಿಂದ ಮನೆಗೆ ತೆರಳುತ್ತಿದ್ದ 1ನೇ ತರಗತಿ ವಿದ್ಯಾರ್ಥಿನಿ ಸುಪ್ರೀತ ಹಳ್ಳದಲ್ಲಿ ಕೊಚ್ಚಿಹೋಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಈ ಘಟನೆ ಮಾಸುವ ಮುನ್ನವೇ ಶ್ರಾವಣ ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಾರು ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.


Heavy Rainfall in chikkamagaluru District Four Death vctv mrq
ಚಿಕ್ಕಮಗಳೂರು ಮಳೆ


ಇದನ್ನೂ ಓದಿ:  Krishna River: ಜಲಾಶಯದಿಂದ 1 ಲಕ್ಷ ಕ್ಯೂಸೆಕ್​ಗೂ ಆಧಿಕ ನೀರು ಬಿಡುಗಡೆ; ನದಿ ತೀರದಲ್ಲಿಯೇ ಜನರ ಹುಚ್ಚಾಟ


ಮನೆ ಮೇಲೆ ಮರ ಬಿದ್ದು ಇಬ್ಬರು ಸಾವು


ಮನೆ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ನಡೆದಿದೆ. ಚಂದ್ರಮ್ಮ, ಸರಿತಾ ಮೃತ ದುರ್ದೈವಿಗಳು. ಸರಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಂದ್ರಮ್ಮ ಮೃತರಾಗಿದ್ದಾರೆ. ಸರಿತಾರವರ ಇಬ್ಬರು ಮಕ್ಕಳು ಸುನೀಲ್, ದೀಕ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ನರಸಿಂಹರಾಜಪುರ ತಾಲ್ಲೂಕು ಅರಿಶಿನಗೆರೆಯ ಪ್ರಸನ್ನ ಎಂಬುವರು ಶ್ರಾವಣ ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರ್ ದಾಟಿಸಲು ಮುಂದಾಗಿದ್ದು, ಈ ವೇಳೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರ್ ಕೊಚ್ಚಿ ಹೋಗಿದ್ದು, ಕಾರಿನಲ್ಲಿದ್ದ ಪ್ರಸನ್ನ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನರಸಿಂಹರಾಜಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Heavy Rainfall in chikkamagaluru District Four Death vctv mrq
ಚಿಕ್ಕಮಗಳೂರು ಮಳೆ


ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದವರು ಪವಾಡ ಸದೃಶ್ಯ ಪಾರು


ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರೊಂದು ಕೊಚ್ಚಿಹೋಗಿ ಕಾರಿನಲ್ಲಿದ್ದವರು ಪವಾಡ ಸದೃಶ್ಯ ಪಾರಾಗಿದ್ದಾರೆ. ಕಡೂರು ತಾಲ್ಲೂಕು ಸಖರಾಯಪಟ್ಟಣ ಪಿಳ್ಳೇನಹಳ್ಳಿ ಸಮೀಪದ ಮಸಣದಹಳ್ಳ ತುಂಬಿ ಹರಿಯುತ್ತಿದ್ದು ಹಳ್ಳದಲ್ಲಿ ಕಾರು ಚಲಾಯಿಸಿ ಚೆಲ್ಲಾಟವಾಡಲು ಹೋಗಿ ಪೇಚೆಗೆ ಸಿಲುಕಿಕೊಂಡಿದ್ದರು. ಸ್ಥಳೀಯರ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾರೆ.


ಕೇತುಮಾರನಹಳ್ಳಿ ಗಿರೀಶ್ ಎಂಬವರಿಗೆ ಸೇರಿದ ಕಾರು ಪಿಳ್ಳೇನಹಳ್ಳಿ ಮಸಣದಹಳ್ಳದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಸಿನಿಮಾ ಮಾದರಿಯಲ್ಲಿ ಕಾರಿನ ಗಾಜುಗಳನ್ನು ಒಡೆದು ಹಗ್ಗಕಟ್ಟಿ ಜೆಸಿಬಿ ಮೂಲಕ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Heavy Rainfall in chikkamagaluru District Four Death vctv mrq
ಚಿಕ್ಕಮಗಳೂರು ಮಳೆ


ಭಾರೀ ಮಳೆಗೆ ಗುಡ್ಡ ಕುಸಿತ


ಮಳೆ ಅಬ್ಬರಕ್ಕೆ ಕೊಪ್ಪ, ಶೃಂಗೇರಿ ರಾಜ್ಯ ಹೆದ್ದಾರಿ ಉಳುಮೆ ಬಳಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಕುಸಿಯುವ ಭೀತಿ ಎದುರಾಗಿದ್ದು, ಪ್ರಯಾಣಿಕರ ಮುಂಜಾಗೃತ ಕ್ರಮವಾಗಿ ಬಿರುಕು ಬಿಟ್ಟ ರಸ್ತೆಗೆ ಕೆಂಪುಪಟ್ಟಿಯನ್ನು ಕಟ್ಟಿ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.


ಇದನ್ನೂ ಓದಿ:  Kodagu: ಕರ್ತೋಜಿ ಬೆಟ್ಟದಲ್ಲಿ ಬಿರುಕು; ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗುವ ಆತಂಕ


ಚಿಕ್ಕಮಗಳೂರು ತಾಲ್ಲೂಕು ತಂಬಳ್ಳಿಪುರ ಗ್ರಾಮದಲ್ಲಿ ಗುಡ್ಡ ಜರಿದು ಅಣ್ಣಪ್ಪಶೆಟ್ಟಿ ಎಂಬವರಿಗೆ ಸೇರಿದ ಕಾಫಿತೋಟ ನಾಶವಾಗಿದೆ. ಗುಡ್ಡ ಜರಿದ ಪರಿಣಾಮ ಒಂದು ಎಕರೆ ಕಾಫಿತೋಟ ಸಂಪೂರ್ಣ ನಾಶವಾಗಿದ್ದು, ತೋಟದಲ್ಲಿ ಹಳ್ಳಕೊಳ್ಳಗಳು ಸೃಷ್ಟಿಯಾಗಿವೆ. ಕಾಫಿತೋಟ ಮಣ್ಣು ಪಾಲಾಗಿದ್ದು ತೋಟದ ಮಾಲೀಕ ಕಂಗಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿ ಭೇಟಿನೀಡಿ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.


Heavy Rainfall in chikkamagaluru District Four Death vctv mrq
ಚಿಕ್ಕಮಗಳೂರು ಮಳೆ


ನದಿಪಾತ್ರದ ಜನರಲ್ಲಿ ಆತಂಕ


ಮಲೆನಾಡು ಭಾಗದಲ್ಲಿ ಹರಿಯುವ ನದಿಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜನರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಮನೆಯೊಳಗೆ ಪ್ರವಾಹದ ನೀರು ಯಾವಾಗ ಬರುತ್ತೋ ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಬಾಳೆಹೊನ್ನೂರು ಭದ್ರಾನದಿ ಸೇತುವೆ ಪಕ್ಕದಲ್ಲಿ 5ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಇಲ್ಲಿನ ನಿವಾಸಿಗಳು ಮೊರೆ ಇಟ್ಟಿದ್ದಾರೆ. ನದಿಪಾತ್ರದ ಜಮೀನುಗಳಿಗೆ ನೀರು ನುಗಿದ್ದು ಅಡಿಕೆ, ಕಾಫಿತೋಟಗಳು ಜಲಾವೃತಗೊಂಡಿವೆ. ಮಳೆ ಕಡಿಮೆಯಾಗುವಂತೆ ಜನರು ದೇವರ ಮೋರೆ ಹೋಗಿದ್ದಾರೆ.


ಕಾಂಗ್ರೆಸ್ ಕಿಸಾನ್ ಸೆಲ್ ಮುಖಂಡರಿಂದ ಋಷ್ಯಶೃಂಗೇಶ್ವರನಿಗೆ ವಿಶೇಷ ಪೂಜೆ


ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿವೃಷ್ಟಿ ನಿವಾರಣೆಗೆ ಮಳೆ ದೇವರೆಂದು ಖ್ಯಾತಿ ಪಡೆದಿರುವ ಋಷ್ಯಶೃಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರಿಗೆ ಪತ್ರ ಬರೆದಿದ್ದು ಅದರಂತೆ ಸಚಿನ್ ಮೀಗಾ ಅವರು ಅತಿವೃಷ್ಟಿ ಕಡಿಮೆಯಾಗುವಂತೆ ಋಷ್ಯಶೃಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.


Heavy Rainfall in chikkamagaluru District Four Death vctv mrq
ಚಿಕ್ಕಮಗಳೂರು ಮಳೆ


ಕಾಫಿ, ಮೆಣಸು ಅಡಕೆ ಸೇರಿದಂತೆ 3219.2 ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆಗಳಿಗೆ ಹಾನಿಯಾಗಿದೆ. ಭಾರೀ ಮಳೆಗೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದು ಓರ್ವ ಬಾಲಕಿ ನಾಪತ್ತೆಯಾಗಿದ್ದಾಳೆ. 6 ಜಾನುವಾರುಗಳು ಮೃತ ಪಟ್ಟಿವೆ. 1494 ವಿದ್ಯುತ್ ಕಂಬ, 45 ಸೇತುವೆ, 536 ಪೂರ್ಣಮನೆ, 350 ಮನೆಗಳಿಗೆ ಅಲ್ಪಪ್ರಮಾಣ ದ ಹಾನಿಯಾಗಿದೆ. 595 ಶಾಲಾ ಕೊಠಡಿ, 195 ಅಂಗನವಾಡಿ ಕೊಠಡಿ, 1615ಕಿ.ಮೀ. ರಸ್ತೆಗೆ ಹಾನಿಯಾಗಿದೆ. 170 ಕೋಟಿ ಬೆಳೆನಷ್ಟ ಉಂಟಾಗಿದೆ.

Published by:Mahmadrafik K
First published: