ಕೊಡಗು: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ (Kodagu Rain) ದೊಡ್ಡ ಅವಘಡಗಳೇ ಸಂಭವಿಸುತ್ತಿವೆ. ಚೆಂಬು ಗ್ರಾಮ ಪಂಚಾಯಿತಿ (Chembu Gram Panchayt) ವ್ಯಾಪ್ತಿಯ ದಬ್ಬಡ್ಕ ಮತ್ತು ಅರೆಕಲ್ಲು ಭಾಗದಲ್ಲಿ ಜಲಸ್ಫೋಟವಾಗಿದ್ದು, ಜನರು ಆತಂಕದಲ್ಲಿದ್ದಾರೆ. ಬುಧವಾರ ಬೆಳಗ್ಗೆ 8.30 ರವರೆಗೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 128 ಮಿ.ಮೀ. ಮಳೆಯಾಗಿದೆ. ದಬ್ಬಡ್ಕದಲ್ಲಿ ಮಂಗಳವಾರ ತಡರಾತ್ರಿ ಹನ್ನೆರಡು ಗಂಟೆ ವೇಳೆಗೆ ಜಲಸ್ಫೋಟವಾಗಿದೆ. ದಬ್ಬಡ್ಕದ ರಾಜೇಶ್ವರಿ ಎಂಬುವರ ರಬ್ಬರ್ ತೋಟದಲ್ಲಿ ಭಾರೀ ಜಲಸ್ಫೋಟವಾಗಿದ್ದು, ಅರ್ಧ ಎಕರೆಯಷ್ಟು ಭೂಮಿ ಕುಸಿದು (Landslide) ಕೆಸರಾಗಿ ಹರಿದು ಹೋಗಿದೆ. ಅಷ್ಟು ಪ್ರದೇಶದಲ್ಲಿದ್ದ 150 ಅಡಿಕೆ, 40 ರಬ್ಬರ್ ಮತ್ತು 150 ಕ್ಕೂ ಹೆಚ್ಚು ಕಾಫಿ ಗಿಡಗಳು ಕೊಚ್ಚಿ ಹೋಗಿವೆ.
ಜಲಸ್ಫೋಟಕ್ಕೂ ಮುನ್ನ ಭಾರೀ ಶಬ್ಧ ಕೇಳಿಸಿದೆ. ಹೀಗಾಗಿ ಸ್ಫೋಟ ಜಾಗದ ಪಕ್ಕದಲ್ಲಿಯೇ ಬಾಲಕೃಷ್ಣ ಎಂಬವರ ಮನೆ ಇದೆ. ಶಬ್ಧ ಕೇಳಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ನದಿಯಂತೆ ನೀರು ತಮ್ಮ ಮನೆಯತ್ತ ನುಗ್ಗಿದೆ. ತಕ್ಷಣವೇ ಬಾಲಕೃಷ್ಣ ಅವರ ಪತ್ನಿ ರೇವತಿ ಮತ್ತು ಮಗಳು ತಕ್ಷಣವೇ ಅಲ್ಲಿಂದ ತಮ್ಮ ಮನೆ ಹಿಂಭಾಗಲ್ಲಿರುವ ಬೆಟ್ಟ ಪ್ರದೇಶ ಕಡೆಗೆ ಓಡಿ ಪ್ರಾಣ ಉಳಿಸಿಕೊಂಡಿದ್ದೇವೆ ಎಂದು ರೇವತಿ ಆತಂಕ ವ್ಯಕ್ತಪಡಿಸಿದ್ದಾರೆ.
ಜಲಸ್ಫೋಟದೊಂದಿಗೆ ಭೂಕುಸಿತ
ಒಟ್ಟಿನಲ್ಲಿ ಅಲ್ಲಿ ದೊಡ್ಡ ಅನಾಹುತವಾಗಿದೆ ಎಂದು ತಮ್ಮ ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋಗಿ ಮಲಗಿದ್ದಾರೆ. ಬೆಳಗ್ಗೆ ಮನೆ ಬಳಿಗೆ ಬಂದು ನೋಡುವಷ್ಟರಲ್ಲಿ ಭಾರೀ ಜಲಸ್ಫೋಟದೊಂದಿಗೆ ಭೂಕುಸಿತವಾಗಿದೆ.
ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿ ಮುಂದುವರಿದ ಮಳೆ, ಈ ಭಾಗದ ಶಾಲೆಗಳಿಗೆ ರಜೆ
ಭೂಕುಸಿತವಾಗಿದ್ದರಿಂದ ಬಾಲಕೃಷ್ಣ ಅವರ ಮನೆಯ ಮುಂಭಾಗದಲ್ಲಿದ್ದ ಕೊಟ್ಟಿಗೆ ಸಂಪೂರ್ಣ ಉರುಳಿ ಬಿದ್ದಿದೆ. ನೀರು ರಭಸವಾಗಿ ನುಗ್ಗಿದ್ದು ಮನೆಯ ಎಲ್ಲಾ ವಸ್ತುಗಳು ಸಂಪೂರ್ಣ ಹಾಳಾಗಿವೆ. ಮನೆಯಲ್ಲಿದ್ದ ಹಲವು ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಆತಂಕದಲ್ಲಿ ಜನರು
ವಿಷಯ ತಿಳಿದು ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಮಹೇಶ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಜಲಸ್ಫೋಟವಾಗಿವೆ. ಇದು ಜನರನ್ನು ಆತಂಕಕ್ಕೆ ದೂಡಿದೆ.
ಮತ್ತೊಂದೆಡೆ ಅರೆಕಲ್ಲು ಗ್ರಾಮದ ಎರುಬೆಟ್ಟದಲ್ಲಿ ಭಾರೀ ಜಲಸ್ಫೋಟವಾಗಿದೆ. ಬೆಟ್ಟದ ತುತ್ತ ತುದಿಯಲ್ಲಿ ಭಾರೀ ಸ್ಫೋಟವಾಗಿರುವುದು ಜನರು ಅಚ್ಚರಿಗೊಳ್ಳುವಂತೆ ಮಾಡಿದೆ. ಇದ್ದಕ್ಕಿದ್ದಂತೆ ಅಷ್ಟೊಂದು ಪ್ರಮಾಣದಲ್ಲಿ ಜಲಸ್ಫೋಟವಾಗಿರುವುದು ಜನರು ಭಯಗೊಳ್ಳುವಂತೆ ಮಾಡಿದೆ. ಆದರೆ ಪಕ್ಕದಲ್ಲಿ ಯಾವುದೇ ಮನೆಗಳು ಇರಲಿಲ್ಲವಾದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಸ್ಥಳಕ್ಕೆ ಕೆ.ಜಿ.ಬೋಪಯ್ಯ ಭೇಟಿ
ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾವು ಯಾವಾಗಲೂ ಇಂತಹ ಅನಾಹುತವನ್ನು ಕೇಳಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಇಷ್ಟು ಎತ್ತರವಾದ ಬೆಟ್ಟದ ತುದಿಯಿಂದ ಇಷ್ಟೊಂದು ನೀರು ಸ್ಫೋಟವಾಗಿ ಬರುವುದಕ್ಕೆ ಹೇಗೆ ಸಾಧ್ಯ. ಇದಕ್ಕೆ ಕಾರಣ ಏನು ಎನ್ನುವುದನ್ನು ಸಂಬಂಧಿಸಿದ ಭೂವಿಜ್ಞಾನಿಗಳು ಕೂಡಲೇ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚೆಂಬು, ದಬ್ಬಡ್ಕ ಮತ್ತು ಪೆರಾಜೆ ಸೇರಿದಂತೆ ಹಲವೆಡೆ ಜೂನ್ ತಿಂಗಳ ಅಂತ್ಯದಲ್ಲಿ ಹಲವು ಬಾರಿ ಭೂಕಂಪನವಾಗಿತ್ತು. ಈಗ ಇದೇ ಸ್ಥಳಗಳಲ್ಲಿ ಜಲಸ್ಫೋಟ ಆಗುತಿರುವುದಕ್ಕೆ ಜನರ ತೀವ್ರ ಆತಂಕಗೊಂಡಿದ್ದಾರೆ.
ಈಗಾಗಲೇ ಭೂಕಂಪನಗಳ ಸ್ಥಳಕ್ಕೆ ಹೈದರಾಬಾದ್ ನಿಂದ ಬಂದಿದ್ದ ವಿಜ್ಞಾನಿಗಳ ತಂಡ ಭೂಕಂಪನದಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿತು. ಆದರೆ ಸ್ಥಳೀಯರು 2018 ರಲ್ಲೂ ಇದೇ ರೀತಿಯ ಭೂಕಂಪನವಾಗಿತ್ತು. ಅದಾದ ಬಳಿಕ ಒಂದು ತಿಂಗಳ ಅವಧಿಯಲ್ಲಿ ಭಾರಿ ಮಳೆ ಸುರಿದು ಭೂಕುಸಿತ, ಜಲಸ್ಫೋಟಗಳು ಸಂಭವಿಸಿದ್ದವು.
ಎರಡು ಅಡಿ ಆಳಕ್ಕೆ ಕುಸಿದ ಹೆದ್ದಾರಿ
ಇದೀಗ ಮತ್ತೆ ಇದೇ ರೀತಿ ಆಗುತ್ತಿರುವುದು ಆತಂಕ ತಂದಿದೆ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕೊಡಗಿನ ಕೊಯಿನಾಡು ಮತ್ತು ದೇವರಕೊಲ್ಲಿ ನಡುವೆ ಹೆದ್ದಾರಿ ಎರಡು ಅಡಿ ಆಳಕ್ಕೆ ಕುಸಿದಿದೆ. ಇದರಿಂದ ಮಡಿಕೇರಿ ಮಂಗಳೂರು ಸಂಪರ್ಕ ಬಂದ್ ಆಗುವ ಆತಂಕ ಎದುರಾಗಿದೆ. ಆದರೆ ಜಿಲ್ಲಾಡಳಿತ ಪಕ್ಕದಲ್ಲಿಯೇ ಪರ್ಯಾಯ ರಸ್ತೆ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ