ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣ (Kodagu Heavy Rains) ಆರ್ಭಟಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಲಕಾವೇರಿ (Talacauvery), ಬ್ರಹ್ಮಗಿರಿ ಬೆಟ್ಟದ (Brahmagiri Hill) ತಪ್ಪಲಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿ (Cauvery River) ಕ್ಷಣ ಕ್ಷಣಕ್ಕೂ ಮುನಿಸಿಕೊಳ್ಳುತ್ತಿದ್ದಾಳೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ (Somavarapete) ತಾಲ್ಲೂಕಿನ ಮಾಲಂಬಿಯ ಕೂಡುರಸ್ತೆ ಎಂಬಲ್ಲಿ ಲಕ್ಷ್ಮಮ್ಮ, ಮುತ್ತಣ್ಣ ಎಂಬುವರ ಮನೆ ಕುಸಿದು ಬಿದ್ದಿದೆ. ಮತ್ತೊಂದೆಡೆ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದನಮಕ್ಕಿ ಗ್ರಾಮದಲ್ಲಿ ಲಕ್ಷ್ಮಣ ಎಂಬುವರ ಮನೆ ಭಾರೀ ಮಳೆಗೆ ಧರೆಗೆ ಉರುಳಿದಿದೆ.
ಎರಡು ಮನೆಗಳು ಬಹುತೇಕ ಕುಸಿದು ಬಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ಮೂರ್ನಾಡು ರಸ್ತೆ ಬೊಳಿಬಾಣೆಯಲ್ಲಿ ರಸ್ತೆ ಮೇಲೆ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದ್ದು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಗ್ರಾಮಗಳ ಸಂಪರ್ಕ ಕಡಿತ
ನಾಪೋಕ್ಲು ಮತ್ತು ಮೂರ್ನಾಡು ನಡುವಿನ ಸಂಪರ್ಕ ಕಡಿತವಾಗಿದೆ. ಇದರಿಂದಾಗಿ ಮೂರ್ನಾಡು, ಹೊದವಾಡ, ಕೊಟ್ಟಮುಡಿ ಸೇರಿದಂತೆ ವಿವಿಧ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದೆ. ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಯಾವುದೇ ವಾಹನಗಳು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನರು ಹತ್ತಾರು ಕಿಲೋ ಮೀಟರ್ ಸುತ್ತಿಬಳಸಿ ಗ್ರಾಮಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಾಪೋಕ್ಲು ಸಮೀಪದ ಚೆರಿಯಪರಂಬಿನಲ್ಲಿ ಕಾವೇರಿ ನದಿ ತನ್ನ ರುದ್ರ ಪ್ರತಾಪ ತೋರುತ್ತಿದ್ದು, ಚರಿಯಪರಂಬು ಮತ್ತು ಕಲ್ಲುಮೊಟ್ಟೆಗಳ ನಡುವಿನ ರಸ್ತೆ ಮೇಲೆ ನಾಲ್ಕು ಅಡಿಯಷ್ಟು ಕಾವೇರಿ ನದಿಯ ಪ್ರವಾಹದ ನೀರು ಹರಿಯುತ್ತಿದೆ. ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ: Karnataka Weather Report: ಇಂದು ರಾಜ್ಯದ ಕರಾವಳಿ ಭಾಗಕ್ಕೆ ರೆಡ್ ಅಲರ್ಟ್ ; ಮುಂದಿನ ನಾಲ್ಕು ದಿನ ಮಳೆ ಅಬ್ಬರ
ನಾಲ್ಕು ಕಿಲೋ ಮೀಟರ್ ಬಳಸಿ ಬರಬೇಕು
ಕಲ್ಲುಮೊಟ್ಟೆಯ ಒಂದು ಭಾಗದಲ್ಲಿ ಕಾವೇರಿ ನದಿ ಹರಿಯುತ್ತಿದ್ದರೆ, ಮತ್ತೊಂದು ಭಾಗದಲ್ಲಿ ಕಾವೇರಿ ನದಿಯ ಪ್ರವಾಹದ ನೀರು ಗ್ರಾಮವನ್ನು ಆವರಿಸಿದೆ. ಹೀಗಾಗಿ ಗ್ರಾಮ ಪರ್ಯಾಯ ದ್ವೀಪದ ಸ್ಥಿತಿ ಎದುರಿಸುತ್ತಿದ್ದು, ಜನರು ನಾಪೋಕ್ಲು ಗ್ರಾಮದ ಗೌಡ ಸಮಾಜದ ರಸ್ತೆ ಮೂಲಕ ನಾಲ್ಕು ಕಿಲೋ ಮೀಟರ್ ಬಳಸಿ ಓಡಾಡಬೇಕಾಗಿದೆ.
ಕಾವೇರಿ ಪ್ರವಾಹದ ನೀರು ರಸ್ತೆಯ ಎರಡು ಬದಿಗಳಲ್ಲಿ ನಿಂತಿದ್ದು, ವಾಹನಗಳು ಓಡಾಡಿದಂತೆಲ್ಲಾ ರಸ್ತೆ ಕಾವೇರಿ ಪ್ರವಾಹದ ನೀರಿಗೆ ಕುಸಿದು ಬೀಳುತ್ತಿದೆ. ಇದರಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ರಸ್ತೆ ಕುಸಿಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಕೂಡಲೇ ಮರಳು ಚೀಲಗಳನ್ನು ಅಳವಡಿ ರಸ್ತೆ ಹೆಚ್ಚಿನ ಪ್ರಮಾಣದಲ್ಲಿ ಕುಸಿಯದಂತೆ ಎಚ್ಚರವಹಿಸುವಂತೆ ಸೂಚಿಸಿದ್ದಾರೆ.
ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ
ರಸ್ತೆ ಕುಸಿಯುತ್ತಿರುವ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯಿಂದ ಮರಳು ಚೀಲ ಅಳವಡಿಸಲಾಗಿದೆ. ಮಳೆ ಹೀಗೆಯೇ ತೀವ್ರಗೊಂಡಲ್ಲಿ ರಸ್ತೆ ಸಂಪೂರ್ಣ ಕುಸಿದು ಕಾವೇರಿ ನದಿಯ ಪ್ರವಾಹದ ನೀರಿನ ಪಾಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Hindi Imposition: ಕನ್ನಡದ ವೆಬ್ಸೈಟ್ನಲ್ಲೂ ಹಿಂದಿ ಪ್ರೇಮ, ಸರ್ಕಾರದಿಂದ ಯಡವಟ್
ರಸ್ತೆಯ ಒಂದು ಭಾಗ ಕುಸಿದಿದ್ದು, ಮತ್ತೊಂದು ಭಾಗವೂ ಕುಸಿಯುವ ಆತಂಕ ಇರುವುದರಿಂದ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ನಿಷೇಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ