ಕೊಡಗು: ಕೊಡಗು (Kodagu) ಜಿಲ್ಲೆಯಲ್ಲಿ ಜೂನ್ 23 ರಿಂದ ನಿರಂತರವಾಗಿ ಭೂಕಂಪನ (Earthquake) ಆಗಿದ್ದು ಗೊತ್ತೇ ಇದೆ. ಆದರೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ (Rainfall) ಕೊಡುಗೆ ಜಿಲ್ಲೆಯ ಹಲವೆಡೆ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಲು (Land Slide) ಆರಂಭವಾಗಿದೆ. ಇದು ಜಿಲ್ಲೆಯ ಜನರು ತೀವ್ರ ಆತಂಕಗೊಳ್ಳುವಂತೆ ಮಾಡಿದೆ. ಜೂನ್ 23 ರಿಂದ ಇದುವರೆಗೆ ಅಂದರೆ ಒಂಭತ್ತು ದಿನಗಳ ಅಂತರದಲ್ಲೇ ಬರೋಬ್ಬರಿ 6 ಬಾರಿ ಭೂಕಂಪನವಾಗಿತ್ತು. ಅದರಲ್ಲೂ ಜೂನ್ 28 ರಂದು ಸಂಭವಿಸಿದ್ದ ಭೂಕಂಪನಕ್ಕೆ ಚೆಂಬು, ಕರಿಕೆ, ಗೂನಡ್ಕ, ಭಾಗಮಂಡಲ ಸೇರಿದಂತೆ ಮಡಿಕೇರಿಯಲ್ಲೂ ಮನೆಗಳ ಗೋಡೆಗಳಲ್ಲಿ ಬಿರುಕು ಮೂಡಿತ್ತು. ಇದೀಗ ಮೂರು ದಿನಗಳಿಂದ ಮಳೆ ಚುರುಕುಗೊಂಡಿದ್ದು, ಭೂಕಂಪನವಾಗಿದ್ದ ಚೆಂಬು ಗ್ರಾಮ, ಭಾಗಮಂಡಲ ರಸ್ತೆ ಮತ್ತು ಮಂಗಳೂರು ಮಡಿಕೇರಿ ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಮಡಿಕೇರಿ ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮದೆನಾಡು ಬಳಿ ಭೂಕುಸಿತವಾಗಿದೆ.
ಭೂಕುಸಿತವಾದ ಪರಿಣಾಮ ಚರಂಡಿ ಸಂಪೂರ್ಣ ಬಂದ್ ಆಗಿ ರಸ್ತೆಯ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಜೊತೆಗೆ ದಟ್ಟ ಮಂಜು ಕವಿದಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಭೂಕುಸಿತವಾಗಿದ್ದ ಮಣ್ಣನ್ನು ತೆರವುಗೊಳಿಸಿ ವಾಹನಗಳ ಸುಗಮ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಭಾಗಮಂಡಲ ರಸ್ತೆಯಲ್ಲಿ ಭೂಕುಸಿತ
ಭೂಕಂಪನದ ಕೇಂದ್ರ ಬಿಂದುವಾಗಿರುವ ಚೆಂಬು ಗ್ರಾಮದಲ್ಲಿ ಗಿರಿಧರ್ ಎಂಬುವರ ಮನೆಯ ಮೇಲೆ ಗುಡ್ಡ ಕುಸಿದಿದೆ. ಗುಡ್ಡ ಕುಸಿದಿರುವ ಭಾಗದಲ್ಲಿ ಭೂಮಿಯೊಳಗಿನಿಂದ ನೀರು ಬರುತ್ತಿದ್ದು ಮತ್ತಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಜೂನ್ 25 ರಂದು ಭೂಕಂಪನವಾಗಿದ್ದ ಮಡಿಕೇರಿ ತಾಲ್ಲೂಕಿನ ಕರಿಕೆಯಲ್ಲೂ ಭಾಗಮಂಡಲ ರಸ್ತೆಯಲ್ಲಿ ಭೂಕುಸಿತವಾಗಿದೆ.
ಮಳೆ ಈಗಷ್ಟೇ ಆರಂಭವಾಗಿದ್ದು, ಇನ್ನೂ ಎರಡು ತಿಂಗಳ ಕಾಲ ಕೊಡಗಿನಲ್ಲಿ ಭಾರೀ ಮಳೆ ಸುರಿಯಲಿದೆ. ಮೂರು ದಿನಗಳಲ್ಲಿ ಸುರಿದಿರುವ ಮಳೆಗೆ ಕೊಡಗಿನಲ್ಲಿ ಅಲ್ಲಲ್ಲಿ ಭೂಕುಸಿತವಾಗಿರುವುದಕ್ಕೆ ನಿಜಕ್ಕೂ ಮಳೆಯೇ ಕಾರಣವಾಯಿತಾ? ಇಲ್ಲ ಭೂಕಂಪನದ ಪ್ರಭಾವದಿಂದ ಜಿಲ್ಲೆಯಲ್ಲಿ ಭೂಕುಸಿತವಾಗುತ್ತಿದೆಯಾ ಎನ್ನುವ ಗಂಭೀರ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: Earthquake: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕಂಪನ; ಅವೈಜ್ಞಾನಿಕ ಗುಡ್ಡ ಕೊರೆತಕ್ಕೆ ಬೀಳುತ್ತಾ ಬ್ರೇಕ್?
ಅಧಿಕಾರಿಗಳ ಜೊತೆ ಉಸ್ತುವಾರಿ ಸಚಿವರ ಸಭೆ
ಕೊಡಗಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡಗಳು ಅಥವಾ ರಸ್ತೆ ಬದಿಯ ಬರೆಗಳು ಕುಸಿಯುವುದು ಸಾಮಾನ್ಯ ಸಂಗತಿ. ಆದರೆ ಕೇವಲ ಮೂರೇ ದಿನಗಳ ಮಳೆಗೆ ಕುಸಿಯುತ್ತಿರುವುದು ನಿಜಕ್ಕೂ ಮಳೆಯ ಕಾರಣಕ್ಕೇ ಕುಸಿಯುತ್ತಿದೆಯಾ ಎನ್ನುವ ದಟ್ಟ ಅನುಮಾನ ಕಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೊಡಗಿನಲ್ಲಿ ಭೂಕಂಪನವಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಜೊತೆಗೆ ವಿಜ್ಞಾನಿಗಳ ತಂಡ ಕೂಡ ಭೇಟಿ ನೀಡಿ ಭೂಕಂಪನವಾಗಿರುವ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಯಾವುದೇ ತೊಂದರೆ ಇಲ್ಲ ಎನ್ನುವ ಅಭಯ ನೀಡಿದ್ದಾರೆ. ಒಂದು ವೇಳೆ ಯಾವುದೇ ತೊಂದರೆ ಆಗುವ ಸಾಧ್ಯತೆ ಇದ್ದರೆ, ತಕ್ಷಣವೇ ಕಾರ್ಯಪ್ರವೃತ್ತವಾಗಿ ಜನರನ್ನು ರಕ್ಷಿಸಲು ಸಿದ್ಧತೆ ನಡೆಸಿದ್ದೇವೆ ಎಂದಿದ್ದಾರೆ.
ಆದರೆ ಜನರಿಗೆ ಮಾತ್ರ ಜಿಲ್ಲಾಡಳಿತ, ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಮಾತಿನಲ್ಲಿ ಯಾವುದೇ ನಂಬಿಕೆ ಇಲ್ಲ. ಕೇವಲ ನೀವು ಏನೂ ತೊಂದರೆ ಇಲ್ಲ ಎಂದು ಹೇಳಿದರೆ ಸಾಲದು. ಒಂದು ವೇಳೆ ಏನಾದರೂ ಅನಾಹುತಗಳು ಸಂಭವಿಸುವ ಮುನ್ಸೂಚನೆಗಳಿದ್ದರೆ ಅದನ್ನು ಜನರಿಗೆ ತಿಳಿಸಿ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಿ. 2018 ರಲ್ಲೂ ಇದೇ ರೀತಿ ಭೂಕಂಪನವಾಗಿ ಬಳಿಕ ಮೊದಮೊದಲು ಸಣ್ಣ ಪ್ರಮಾಣದಲ್ಲಿಯೇ ಭೂಕುಸಿತವಾಗಲು ಆರಂಭವಾಗಿತ್ತು. ನಂತರ ಜಿಲ್ಲೆಯಲ್ಲಿ ಭಾರೀ ಭೂಕುಸಿತವಾಗಿತ್ತು ಎಂದು ಸ್ಥಳೀಯರಾದ ಸೂರಜ್ ಅವರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: Rain Update: ರಾಜ್ಯದ ಹಲವೆಡೆ ಮುಂಗಾರಿನ ಅಬ್ಬರ; 4 ದಿನ ಹಲವೆಡೆ ಭಾರೀ ಮಳೆ, ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ಒಂಭತ್ತು ದಿನಗಳಲ್ಲಿ 6 ಬಾರ ಭೂಕಂಪನವಾಗುವುದರ ಜೊತೆಗೆ ಇದೀಗ ಕಳೆದ ಮೂರು ದಿಗಳ ಮಳೆಗೆ ಭೂಕುಸಿತವಾಗುತ್ತಿರುವುಕ್ಕೆ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು ಇನ್ನೂ ಕಾದಿದೆಯೋ ನೋಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ