ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಭಾಗಗಳಲ್ಲಿ ಮಳೆ (Kodagu Rains) ಅಪ್ರಮಾಣ ಸ್ವಲ್ಪ ಕಡಿಮೆಯಾದರೂ ಸೋಮವಾರಪೇಟೆ (Somavarapete) ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಬುಧವಾರದವರೆಗೂ ಧಾರಾಕಾರ ಮಳೆ ಮುಂದುವರಿದಿತ್ತು. ಜೂನ್ ತಿಂಗಳಿನಿಂದಲೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯಾದ್ಯಂತ ಬಾರಿ ಪ್ರಮಾಣದಲ್ಲಿ ಅಬ್ಬರಿಸುತ್ತಿರುವ ಮಳೆ (Heavy Rain) ಇನ್ನೂ ತಗ್ಗಿಲ್ಲ. ಪರಿಣಾಮ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪಳ್ಳಿ ಗ್ರಾಮದಲ್ಲಿ ಭಾರಿ ಭೂ ಕುಸಿತ (Landslide) ಸಂಭವಿಸಿದ್ದು, ಅಲ್ಲಿನ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಆ ಆತಂಕದಿಂದಲೇ ಕೃಷಿಕ ಎಚ್.ಎ. ಸೋಮಯ್ಯ ಎಂಬವರ ಮನೆಯ ಸಮೀಪದಲ್ಲೇ ಭೂಮಿ ಕುಸಿಯುತ್ತಿದ್ದು, ಆತಂಕಗೊಂಡು ಏನಾದರೂ ಸಮಸ್ಯೆ ಎದುರಾಗಬಹುದೆಂದು ದಂಪತಿ ಮನೆಯನ್ನು ತೊರೆದಿದ್ದಾರೆ.
ಪಕ್ಕದಲ್ಲೇ ಎಚ್.ಆರ್. ರವಿಕುಮಾರ್ ಮತ್ತು ಎಚ್.ಎನ್. ಈರಪ್ಪ ಎಂಬವವರ ಮನೆಗಳಿದ್ದು ಆ ಎರಡು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪಿಡಿಒ ಮಂಜುಳ ಸೂಚಿಸಿದ್ದಾರೆ. ಭೂಕುಸಿತದ ಸ್ಥಳಕ್ಕೆ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹರಪಳ್ಳಿ ಗ್ರಾಮದಲ್ಲಿ 120 ಇಂಚು ಮಳೆ
ಹರಪಳ್ಳಿ ಗ್ರಾಮದಲ್ಲಿ ಈಗಾಗಲೇ ಇಲ್ಲಿಯವರೆಗೆ 120 ಇಂಚು ಮಳೆಯಾಗಿದ್ದು, ಮಂಗಳವಾರ ಒಂದೇ ದಿನ 9 ಇಂಚಿನಷ್ಟು ಮಳೆ ಸುರಿದಿತ್ತು. ಹೀಗಾಗಿ ಹರಪಳ್ಳಿಯಲ್ಲಿ ಜಲಸ್ಫೋಟವಾಗಿದ್ದು, ಮಂಗಳವಾರ ಮಧ್ಯಾಹ್ನದಿಂದ ಆ ಸ್ಥಳದಲ್ಲಿ ನಿರಂತರವಾಗಿ ಭೂ ಕುಸಿತ ಪ್ರಾರಂಭವಾಗಿದೆ ಎಂದು ಸ್ಥಳೀಯರಾದ ಸೋಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: Idgah Maidana: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ; ಮುಸ್ಲಿಮರ ಜೊತೆ ಪೊಲೀಸರ ಶಾಂತಿ ಸಭೆ
ಮನೆ ಗೋಡೆ ಕುಸಿದು ಹಾನಿ
ಭಾರೀ ಮಳೆಗೆ ಸೋಮವಾಪೇಟೆ ಪಟ್ಟಣದ ಮಂಗಳಮ್ಮ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ಶಿವರಾಜು ಎಂಬವರ ಮನೆಯ ಒಂದು ಗೋಡೆ ಕುಸಿದು ಬಿದ್ದಿದ್ದು ಹಾನಿಯಾಗಿದೆ.
ಇನ್ನು ಸೋಮವಾರಪೇಟೆ, ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಮಾದಾಪುರದ ಬಳಿ ಭೂಕುಸಿತವಾಗುತ್ತಿದೆ. 2018 ರಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೂ ತಡೆಗೋಡೆ ಮೇಲ್ಭಾಗದಿಂದಲೂ ಭೂಕುಸಿತ ಆಗುತ್ತಿದ್ದು, ರಸ್ತೆಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ಬೀಳುತ್ತಿದು ವಾಹನಗಳ ಓಡಾಟಕ್ಕೆ ಸಮಸ್ಯೆ ಎದುರಾಗುತ್ತಿದೆ. ಆದರೆ ಅದನ್ನು ತೆರವು ಮಾಡಲಾಗುತ್ತಿದೆ. ಮತ್ತೊಂದೆಡೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರದಿಂದ ಮಳೆಯ ಪ್ರಮಾಣ ಸ್ವಲ್ಪ ತಗ್ಗಿದೆ.
ಕಳೆದ ಎರಡು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಮಡಿಕೇರಿ ನಗರದ ಹೊರ ವಲಯದಲ್ಲಿರುವ ಸ್ಟೋನ್ ಹಿಲ್‍ನಲ್ಲಿ ಭಾರೀ ಭೂಕುಸಿತವಾಗಿದೆ. ಅದೃಷ್ಟವಷಾತ್ ಅಕ್ಕಪಕ್ಕ ಅಥವಾ ಕೆಳಭಾಗದಲ್ಲಿ ಯಾವುದೇ ಜನವಸತಿ ಪ್ರದೇಶಗಳು ಇಲ್ಲದೇ ಇರುವುದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಬೆಟ್ಟತ್ತೂರು ಗ್ರಾಮದಲ್ಲಿಯೂ ಮನೆ ಹಾನಿ
ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಚೆರಿಯಮನೆ ಆನಂದ್ ಅವರ ಮನೆ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ಸಮಸ್ಯೆಗಳನ್ನು ಎದುರಾಗಿದ್ದು ಜನರು ಆತಂಕಪಡುವಂತೆ ಆಗಿದೆ. ಆದರೆ ಮಂಗಳವಾರದಿಂದ ಮಳೆ ಪ್ರಮಾಣ ಸ್ವಲ್ಪ ಕಡಿಮೆ ಆಗಿರುವುದು ಜನರಿಗೆ ಸ್ವಲ್ಪ ಸಮಾಧಾನ ತಂದಿದೆ.
ಇದನ್ನೂ ಓದಿ: Politics: ಬೆಟ್ಟಿಂಗ್, ಮೋಸ, ಕಣ್ಣೀರು, ನಾಚಿಕೆ ಪುರಾಣ: ಎಚ್ಡಿಕೆ-ಅಶ್ವಥ್ ನಾರಾಯಣ ಸಮರ!
ಬೆಳಗಾವಿಯಲ್ಲಿ ಅಪಾರ ಪ್ರಮಾಣದ ಹಾನಿ
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವರುಣ ಅಬ್ಬರ ಜೋರಾಗಿದೆ. ತೀವ್ರ ಮಳೆಯಿಂದ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ