ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ಮಳೆಯ ಅಬ್ಬರ (Heavy Rain) ಹೆಚ್ಚಾಗಿದ್ದು, ಭಾರೀ ಮಳೆಯಿಂದಾಗಿ ಜಿಲ್ಲೆಯ ಜನ ಮಳೆಯಿಂದಾಗಿ ತತ್ತರಿಸುವಂತಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ (Netravati) ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಹಾಗೂ ಇವುಗಳ ಉಪ ನದಿಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.
ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ
ದಕ್ಪಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟ ಮಾತ್ರವಲ್ಲದೆ, ಸ್ನಾನಘಟ್ಟದ ಬಳಿಯಿರುವ ದೇವರಕಟ್ಟೆಯೂ ಭಾಗಶಃ ಮುಳುಗಡೆಯಾಗಿದ್ದು, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ತೊಂದರೆಯಾಗಿದೆ.
ತೀರ್ಥಸ್ನಾನ ಪರ್ಯಾಯ ವ್ಯವಸ್ಥೆ
ಭಕ್ತಾಧಿಗಳು ಪ್ರವಾಹದ ನೀರಿನಲ್ಲೇ ತೀರ್ಥಸ್ನಾನವನ್ನು ನೆರವೇರಿಸುತ್ತಿದ್ದು, ದೇವಸ್ಥಾನದ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸ್ನಾನಘಟ್ಟದಲ್ಲಿ ರಾತ್ರಿ-ಹಗಲು ಇಬ್ಬರು ಜನರಿರುವ ರಕ್ಷಕ ದಳವನ್ನು ನಿಯೋಜಿಸಲಾಗಿದೆ. ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ನೆರವಾಗುವ ನಿಟ್ಟಿನಲ್ಲಿ ಕುಮಾರಧಾರಾ ನದಿ ತೀರದಲ್ಲಿ ಹಗ್ಗವನ್ನು ಅಳವಡಿಸಿ, ಹಗ್ಗದ ಸಹಾಯದ ಮೂಲಕ ತೀರ್ಥಸ್ನಾನ ನೆರವೇರಿಸಲು ಅನುವು ಮಾಡಿಕೊಡಲಾಗಿದೆ.
ಇದನ್ನೂ ಓದಿ: Sea Erosion: ಕಾಪು ಕಡಲತೀರದಲ್ಲಿ ಭಾರೀ ಕಡಲ್ಕೊರೆತ; ದಡಕ್ಕೆ ಅಪ್ಪಳಿಸುತ್ತಿರುವ ರಣಭೀಕರ ಅಲೆಗಳು
ಕಿರು ಸೇತುವೆಗಳ ಮುಳುಗಡೆ
ಸ್ನಾನಘಟ್ಟ ಮಾತ್ರವಲ್ಲದೆ ದೇವಸ್ಥಾನದ ಪಕ್ಕದಲ್ಲೇ ಹರಿಯುವ ತರ್ಪಣ ತೀರ್ಥ ಹೊಳೆಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಹೊಳೆ ನೀರು ಆಸುಪಾಸಿನ ಕೃಷಿ ತೋಟಗಳಿಗೆ ನುಗ್ಗಲಾರಂಭಿಸಿದೆ. ಪುತ್ತೂರು- ಬೆಟ್ಟಂಪಾಡಿ ಸಂಪರ್ಕ ಕಲ್ಪಿಸುವ ರಸ್ತೆಯ ಚೇಳ್ಯಡ್ಕ ಬಳಿಯ ಸೇತುವೆ ಭಾರೀ ಮಳೆಯಿಂದಾಗಿ ಮುಳುಗಡೆಗೊಂಡಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೆಳ್ತಂಗಡಿ ತಾಲೂಕಿನಲ್ಲಿ ಆಗುತ್ತಿದ್ದು, ತಾಲೂಕಿನ ಹಲವು ಕಡೆಗಳಿಗೆ ಸಂಪರ್ಕ ಕಲ್ಪಿಸುವ ಹಲವು ಕಿರು ಸೇತುವೆಗಳು ಮಳೆಯಿಂದಾಗಿ ಮುಳುಗಡೆಯಾಗಿವೆ.
ನದಿಗಳಲ್ಲಿ ನೀರಿನ ಹರಿವು ಹೆಚ್ಚಳ
ನೇತ್ರಾವತಿ ನದಿಯ ಉಪ ನದಿಯಾದ ಚಾರ್ಮಾಡಿಯ ಮೃತ್ಯುಂಜಯ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಈ ನದಿ ಮತ್ತೊಮ್ಮೆ ಭಾರೀ ಅನಾಹುತ ಸೃಷ್ಠಿಸಲಿದೆಯೋ ಎನ್ನುವ ಆತಂಕದಲ್ಲಿ ಹೊಳೆ ತೀರದ ಜನರಿದ್ದಾರೆ. ಮುಂಡಾಜೆ ಗ್ರಾಮದ ಕೊಪ್ಪದಗುಂಡಿ ಕಿರು ಸೇತುವೆ ಸಂಪೂರ್ಣ ಮುಳುಗಡೆಗೊಂಡಿದ್ದು, ಮುಂಡಾಜೆ - ಪರ್ಲಾನಿ ಸಂಪರ್ಕಿಸುವ ರಸ್ತೆಯ ಮೇಲೂ ನೇತ್ರಾವತಿ ನದಿ ನೀರು ಹರಿಯಲಾರಂಭಿಸಿದೆ.
ಭಾರೀ ಮಳೆ, ಹಲವೆಡೆ ಶಾಲಾ ಕಾಲೇಜಿಗೆ ರಜೆ
ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ ಪ್ರಾಥಮಿಕ ಹಾಗು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಿದ್ದು, ಮಳೆಯಿಂದಾಗಿ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆಯಾಗುತ್ತದೆ ಎಂದು ಮನಗಂಡರೆ, ಆಯಾಯ ತಾಲೂಕಿನ ಶಾಲೆಗಳು ರಜೆಯನ್ನು ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿ ಡಾ.ಕೆ. ವಿ. ರಾಜೇಂದ್ರ ಜಿಲ್ಲೆಯ ಎಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ.
ಇದನ್ನೂ ಓದಿ: Karnataka Rains: ರಾಜ್ಯದಲ್ಲಿ ಮುಂದುವರಿದ ಮಳೆ, ಹೆಬ್ಬಾಳೆ ಸೇತುವೆ ಮುಳುಗಡೆ, ಈ ಭಾಗದ ಶಾಲೆಗಳಿಗೆ ರಜೆ
ಮಂಗಳೂರು ಹೊರವಲಯದ ಉಚ್ಚಿಲ, ಬೆಟ್ಟಂಪಾಡಿ ಕಡಲ ಕಿನಾರೆಯಲ್ಲಿ ಸಮುದ್ರ ಕೊರತ ಹೆಚ್ಚಾಗಿದ್ದು, ಕೆನಾರೆಯ ಜನ ಜೀವ ಭಯದಲ್ಲಿ ಬದುಕುವ ಸ್ಥಿತಿಯನ್ನು ನಿರ್ಮಿಸಿದೆ. ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ