Heavy Rain: ಕೊಡಗಿನಲ್ಲಿ ಭಾರೀ ಮಳೆ! ಮನೆಗಳಿಗೆ ನೀರು, 15 ಡಿಗ್ರಿಗೆ ಇಳಿದ ತಾಪಮಾನ

ಬಿಟ್ಟು ಬಿಡದೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಜನರನ್ನು ಹೈರಾಣಾಗಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ (Rain) ಜಿಲ್ಲೆಯ ಅಲ್ಲಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಮಂಗಳವಾರ ರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದೆ.

ಕೊಡಗು ಮಳೆ ಅವಾಂತರ

ಕೊಡಗು ಮಳೆ ಅವಾಂತರ

  • Share this:
ಕೊಡಗು(ಮೇ.19): ಎರಡು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಬುಧವಾರ ಜಿಲ್ಲೆಯಲ್ಲಿ ತೀವ್ರಗೊಂಡಿದೆ. ಬಿಟ್ಟು ಬಿಡದೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಜನರನ್ನು ಹೈರಾಣಾಗಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ (Rain) ಜಿಲ್ಲೆಯ ಅಲ್ಲಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಮಂಗಳವಾರ ರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಕುಶಾಲನಗರ (Kushalnagar) ತಾಲ್ಲೂಕಿನ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಕಾಲುವೆ ಮತ್ತು ರಸ್ತೆಯ ನೀರು (Road Water) ಕೆಲವು ಅಂಗಡಿಗಳು, ಸಾಮಿಲ್ ಮತ್ತು ಕೆಲವು ಮನೆಗಳಿಗೆ ನೀರು ನುಗ್ಗಿದೆ. ಭಾರೀ ನೀರು ನುಗ್ಗಿದ ಪರಿಣಾಮ ಸಾಮಿಲ್‍ನಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣ ಮರಗಳು ನೀರಿನಲ್ಲಿ ನೆನೆದು ಹೋಗಿವೆ.

ಕೊಚ್ಚಿ ಹೋದ ಸೇತುವೆ

ಇನ್ನು ಕುಶಾಲನಗರ ಸಮೀಪದ ಕೊಪ್ಪದಿಂದ ಬೈಲುಕೊಪ್ಪದ ಟಿಬೆಟಿಯನ್ ಧರ್ಮಶಾಲಾಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಯ ಪರ್ಯಾಯ ಸೇತುವೆ ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದ ಕೊಪ್ಪ, ಟಿಬೆಟಿಯನ್ ಧರ್ಮಶಾಲಾ ಮತ್ತು ಮರಡಿಯೂರು ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಈ ಗ್ರಾಮಗಳ ಜನರು ಬೈಲುಕುಪ್ಪೆ ಮಾರ್ಗವಾಗಿ ಸುತ್ತಿ ಬಳಸಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ಕೊಚ್ಚಿ ಹೋದ ಸ್ಥಳದಲ್ಲಿ ಬ್ಯಾರಿಕೇಡ್

ಕೊಪ್ಪ ಮತ್ತು ಟಿಬೆಟಿಯನ್ ಕ್ಯಾಂಪ್ ನಡುವೆ ಸಂಪರ್ಕ ಕಲ್ಪಿಸುವ ಶಾಶ್ವತ ಸೇತುವೆ ನಿರ್ಮಾಣ ಕಾಮಗಾರಿ ಆಗುತ್ತಿದ್ದರಿಂದ ಬದಲೀ ಮಾರ್ಗವಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಆದರೆ ಬುಧವಾರ ಸುರಿದ ಭಾರೀ ಮಳೆಗೆ ತಾತ್ಕಾಲಿಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಸದ್ಯ ಸೇತುವೆ ಕೊಚ್ಚಿ ಹೋದ ಸ್ಥಳದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಜನರು ಅತ್ತ ಹೋಗದಂತೆ ಸಂಚಾರ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: PSI Exam Scam: ಮದುವೆ ಮುಗಿಸಿದವನನ್ನು 'ಮಾವನ ಮನೆ'ಗೆ ಕರೆದೊಯ್ದ ಸಿಐಡಿ ಪೊಲೀಸ್!

‘ಸ್ಥಳಕ್ಕೆ ಮೈಸೂರು ಲೋಕೋಪಯೋಗಿ ಇಲಾಖೆ ಅಧಿಕಾರಿ ಜಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು 20 ದಿನಗಳು ಕಳೆದಿದ್ದರೆ ಶಾಶ್ವತ ಸೇತುವೆ ಕಾಮಗಾರಿ ಮುಗಿದು ಜನರ ಬಳಕೆಗೆ ಮುಕ್ತಗೊಳ್ಳುತಿತ್ತು. ಆದರೆ ಮೊನ್ನೆಯಿಂದ ಸುರಿಯುತ್ತಿರುವ ಮಳೆಗೆ ಪರ್ಯಾಯ ಸೇತುವೆ ಕೊಚ್ಚಿ ಹೋಗಿರುವುದರಿಂದ ಸಂಪರ್ಕ ಕಡಿತವಾಗಿದೆ.

ಈಗ ಮಳೆ ಸುರಿಯುತ್ತಿರುವುದರಿಂದ ಸದ್ಯಕ್ಕೆ ಯಾವುದೇ ಕಾಮಗಾರಿ ಕೈಗೊಳ್ಳುವುದು ಕಷ್ಟ. ಹೀಗಾಗಿ ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲೆಯ ಸುಂಟಿಕೊಪ್ಪ, ಮಡಿಕೇರಿ ತಾಲ್ಲೂಕಿನ ಗಾಳಿಬೀಡು  ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ. ಗೋಣಿಕೊಪ್ಪ ಮತ್ತು ಹಾತೂರು ಮುಖ್ಯ ರಸ್ತೆಯಲ್ಲಿ ಭಾರೀ ಘಾತ್ರದ ಮರ ಉರುಳಿ ಬಿದ್ದಿತ್ತು. ಪರಿಣಾಮ ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು.

ಚಳಿಯಲ್ಲಿ ತತ್ತರಿಸುತ್ತಿದ್ದಾರೆ ಜನ

ಲೋಕೋಪಯೋಗಿ ಮತ್ತು ಕೆಇಬಿ ಇಲಾಖೆ ಸಿಬ್ಬಂದಿ ಶೀಘ್ರ ಕಾರ್ಯಪ್ರವೃತ್ತರಾಗಿ ಮರಗಳನ್ನು ತೆರವು ಮಾಡಿ ಜನರು ಓಡಾಡಕ್ಕೆ ರಸ್ತೆಗಳನ್ನು ಮುಕ್ತಗೊಳಿಸಿದರು. ಜಿಲ್ಲೆಯಲ್ಲಿ ಸದ್ಯ ಮಳೆಯೊಂದಿಗೆ ಭಾರೀ ಚಳಿಯ ವಾತಾವರಣ ಸೃಷ್ಟಿಯಾಗಿದ್ದು, ಜನರು ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ತಾಪಮಾನ ಕಡಿಮೆಯಾಗಿದ್ದು, ಕೇವಲ 15 ಡಿಗ್ರಿಗೆ ಕುಸಿದಿದೆ. ಹೀಗಾಗಿ ಜಿಲ್ಲೆಯ ಜನರು ಚಳಿಗೆ ತತ್ತರಿಸುವಂತೆ ಆಗಿದೆ.

ಇದನ್ನೂ ಓದಿ: Uniform: ಇನ್ಮುಂದೆ ಕಾಲೇಜು ವಿದ್ಯಾರ್ಥಿಗಳಿಗೂ ಯೂನಿಫಾರಂ ಕಡ್ಡಾಯ; ಪಿಯುಸಿ ಬೋರ್ಡ್ ಆದೇಶ

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ ಮಳೆ 49.12 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.65 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 318.65 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 413.89 ಮಿ.ಮೀ ಮಳೆಯಾಗಿತ್ತು.
Published by:Divya D
First published: