ರಾಯಚೂರಿನಲ್ಲಿ ಭಾರೀ ಮಳೆ: ಬಹುತೇಕ ಗ್ರಾಮಗಳು ಮುಳುಗಡೆ; ಬೀದಿಗೆ ಬಂದ ಜನರ ಜೀವನ

ಮೂರು ದಿನಗಳಾದರೂ ಯಾವ ಅಧಿಕಾರಿಗಳು ಹಾಗು ಜನಪ್ರತಿನಿಧಿ ಇತ್ತ ನೋಡಿಲ್ಲ. ಆಹಾರಕ್ಕಾಗಿ ಇಟ್ಟ ದವಸ ಧಾನ್ಯವು ಹಾಳಾಗಿದೆ. ಈಗ ಊಟಕ್ಕೂ ಪರದಾಡುವಂತಾಗಿದೆ. ಮೇಲಿಂದ ಮೇಲೆ ಇದೇ ರೀತಿ ಪ್ರವಾಹಕ್ಕೆ ತುತ್ತಾದ ಈ ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

news18-kannada
Updated:September 20, 2020, 5:43 PM IST
ರಾಯಚೂರಿನಲ್ಲಿ ಭಾರೀ ಮಳೆ: ಬಹುತೇಕ ಗ್ರಾಮಗಳು ಮುಳುಗಡೆ; ಬೀದಿಗೆ ಬಂದ ಜನರ ಜೀವನ
ಪ್ರವಾಹ
  • Share this:
ರಾಯಚೂರು(ಸೆ.20): ರಾಯಚೂರು ಮಹಾಮಳೆಗೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಸುರಿದ ಭಾರೀ ಮಳೆಗೆ ಕೆಲವು ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಬಿದ್ದ ಮನೆಗಳಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಮಳೆಯಿಂದ ನಿರಾಶ್ರಿತರಾದ ಗ್ರಾಮಸ್ಥರು ನಮ್ಮತ್ತ ಯಾರು ನೋಡಿಲ್ಲ, ನಾವೇನಾಗಿದ್ದೇವೆ ಎಂದು ನೋಡಿಲ್ಲ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಇಡಪನೂರು ಗ್ರಾಮ‌ವಂತೂ ಅಕ್ಷರಶಃ ನರಕದಂತಾಗಿದೆ. 2006ರಲ್ಲಿ ಮಹಾಮಳೆಯಿಂದ ನಲುಗಿದ್ದ ರಾಯಚೂರು ಜಿಲ್ಲೆಯಲ್ಲಿ ಈಗ ಮತ್ತೆ ಮಳೆಯಾಗಿದೆ. ಕಳೆದ 40 ವರ್ಷಗಳಲ್ಲಿಯೇ ಅತ್ಯಧಿಕ ಮಳೆ ಈ ವರ್ಷ ಜಿಲ್ಲೆಯಲ್ಲಿ ಆಗಿದೆ. ಐದು ದಿನಗಳಿಂದ ಬಹುತೇಕ‌ ಗ್ರಾಮಗಳ ಈ ನಲುಗಿ ಹೋಗಿವೆ. ಅದರಲ್ಲಿ ರಾಯಚೂರು ತಾಲೂಕಿನ ಇಡಪನೂರು ಗ್ರಾಮವು ಬಹುತೇಕ ನೆಲಸಮವಾಗಿದೆ. ಈ ಗ್ರಾಮದಲ್ಲಿ ಪ್ರಾಥಮಿಕ ವರದಿ ಪ್ರಕಾರ 500ಕ್ಕೂ ಅಧಿಕ ಮನೆಗಳು ಬಿದ್ದಿವೆ.

ಇನ್ನು, ಅನೇಕ ಮನೆಗಳು ಬೀಳುವ ಹಂತದಲ್ಲಿವೆ. ಶೇ.60ರಷ್ಟು ಮನೆಗಳು ಬಿದ್ದು ಮನೆಯಲ್ಲಿದ್ದ ವೃದ್ದರು, ಮಕ್ಕಳು ಬೀದಿಯಲ್ಲಿ ವಾಸವಾಗುವಂಥ ಸ್ಥಿತಿ ನಿರ್ಮಾಣವಾಗಿದೆ. ಮೂರು ದಿನಗಳ ಹಿಂದೆ ಸುರಿದ ಮಳೆಗೆ ಹಳ್ಳ ಹಾಗು ಕೆರೆಯ ನೀರು ಗ್ರಾಮಕ್ಕೆ ನುಗ್ಗಿದ್ದು ರಾತ್ರಿ ಇಡೀ ಗ್ರಾಮಸ್ಥರು ಮಳೆಯ ನೀರಿನಿಂದ ರಕ್ಷಿಸಲು ಪರದಾಡುವಂತಾಗಿದೆ. ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ಜನ ಈಗ ಬೀದಿಯಲ್ಲಿ ಬದುಕುವಂತಾಗಿದೆ.

ಮೂರು ದಿನಗಳಾದರೂ ಯಾವ ಅಧಿಕಾರಿಗಳು ಹಾಗು ಜನಪ್ರತಿನಿಧಿ ಇತ್ತ ನೋಡಿಲ್ಲ. ಆಹಾರಕ್ಕಾಗಿ ಇಟ್ಟ ದವಸ ಧಾನ್ಯವು ಹಾಳಾಗಿದೆ. ಈಗ ಊಟಕ್ಕೂ ಪರದಾಡುವಂತಾಗಿದೆ. ಮೇಲಿಂದ ಮೇಲೆ ಇದೇ ರೀತಿ ಪ್ರವಾಹಕ್ಕೆ ತುತ್ತಾದ ಈ ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ಸಂಪರ್ಕ‌ ಕಲ್ಪಿಸುವ ರಸ್ತೆಯೂ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ಮಿಡಗಲದಿನ್ನಿ ಮೂಲಕ ರಾಯಚೂರಿಗೆ ಬರಬೇಕಾದ ಗ್ರಾಮಸ್ಥರು 20 ಕಿಮೀ ದೂರ ಕ್ರಮಿಸಿ ಗುಂಜಳ್ಳಿ ಮೂಲಕ ಬರಬೇಕಾಗಿದೆ. ಈ ರಸ್ತೆಯೂ ಸಹ ಬೈಕ್​​ಗಳು ಮಾತ್ರ ಹೋಗುವಂತೆ ಇದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಂಬಗಳು ಬಿದ್ದು ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲ.

ಇದನ್ನೂ ಓದಿ: ಮದ್ಯವರ್ತಿಗಳಿಂದ ರೈತರಿಗೆ ಮುಕ್ತಿ, ಕೃಷಿ ಕ್ಷೇತ್ರದ ಗೆಲುವು: ಕೃಷಿ ಮಸೂದೆ ಸಂಬಂಧ ಪ್ರಧಾನಿ ಮೋದಿ ಪ್ರತಿಕ್ರಿಯೆ

ವಿದ್ಯುತ್ ಇಲ್ಲದೆ ದೈನಂದಿನ ಚಟುವಟಿಕೆಗಳು ಸಹ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಇಡೀ ಗ್ರಾಮ ಸಮಸ್ಯೆಯ ಆಗರವಾಗಿದೆ. ಇದು ಕೇವಲ ಇಡಪನೂರು ಗ್ರಾಮವಷ್ಟೆ ಅಲ್ಲ, ಅಕ್ಕದ ತಲಮಾರಿ, ಮಿಡಗಲದಿನ್ನಿ, ಮಿರ್ಜಾಪುರ ಗ್ರಾಮಗಳಲ್ಲಿ ಇದೇ ಸ್ಥಿತಿ. ಜಿಲ್ಲಾಡಳಿತ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕಾಗಿದೆ. ತುರ್ತಾಗಿ ಅವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಬೇಕಾಗಿದೆ.
Published by: Ganesh Nachikethu
First published: September 20, 2020, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading