news18-kannada Updated:September 13, 2020, 6:22 PM IST
ಸಾಂದರ್ಭಿಕ ಚಿತ್ರ
ಕೊಡಗು(ಸೆ.13): ಸೆಪ್ಟೆಂಬರ್ ಅರ್ಧ ತಿಂಗಳು ಮುಗಿದರೂ ಕೊಡಗು ಜಿಲ್ಲೆಯಲ್ಲಿ ಮಳೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ನದಿ ಪಾತ್ರದ ಮತ್ತು ಬೆಟ್ಟ ಪ್ರದೇಶಗಳ ಜನರು ಯಾವಾಗ ಏನು ಗಂಡಾಂತರ ಎದುರಾಗುವುದೋ ಎಂದು ಹಗಲು ರಾತ್ರಿ ಆತಂಕದಲ್ಲೇ ಕಾಲ ಕಳೆಯುವಂತೆ ಮಾಡಿದೆ. 2018-19 ಎರಡು ವರ್ಷಗಳಲ್ಲೂ ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ಮಳೆ ಸೆಪ್ಟೆಂಬರ್ ಎನ್ನುವಷ್ಟರಲ್ಲಿ ಸಂಪೂರ್ಣ ನಿಂತು ಬಿಡುತಿತ್ತು. ಆದರೆ ಈ ಬಾರಿ ಸೆಪ್ಟೆಂಬರ್ ಅರ್ಧ ತಿಂಗಳು ಕಳೆದರೂ ಮಳೆ ಸುರಿಯುತ್ತಲೇ ಇದೆ. ತಲಕಾವೇರಿ, ಬ್ರಹ್ಮಗಿರಿಬೆಟ್ಟ, ಬಾಗಮಂಡಲ, ನಾಪೋಕ್ಲು ಸೇರಿದಂತೆ ಕಾವೇರಿ ನದಿಪಾತ್ರದ ಪ್ರದೇಶದಲ್ಲಿ ಧಾರಕಾರವಾಗಿ ಸುರಿಯುತ್ತಿದೆ. ಬಾಗಮಂಡಲದಲ್ಲಿ ಸುತ್ತಮುತ್ತ ಕಳೆದ 24 ಗಂಟೆ ಅವಧಿಯಲ್ಲಿ 61 ಮಿ ಮೀಟರ್ ಮಳೆ ಸುರಿದಿದ್ದು, ತ್ರಿವೇಣಿ ಸಂಗಮ ಭರ್ತಿಯಾಗುವ ಹಂತ ತಲುಪಿದೆ.
ಇಡೀ ಜಿಲ್ಲೆಯಲ್ಲಿ ಸರಾಸರಿ 29 ಮಿ. ಮೀಟರ್ ಮಳೆ ಸುರಿದಿದೆ. ಹೀಗೆ ಮಳೆ ಮುಂದುವರೆದಲ್ಲಿ ತ್ರಿವೇಣಿ ಸಂಗ್ರಮ ಮುಳುಗಡೆಯಾಗುವ ಸಾಧ್ಯತೆ ಇದೆ. ತ್ರಿವೇಣಿ ಸಂಗಮ ಮುಳುಗಡೆ ಆಯಿತ್ತೆಂದರೆ, ನಾಪೋಕ್ಲು, ಚೆರಿಯಪರಂಬು, ಕರಡಿಗೋಡು, ಕಕ್ಕಟ್ಟುಕಾಡು, ಗುಹ್ಯ, ಕುಂಬಾರಗುಂಡಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಪ್ರವಾಹ ಉಂಟಾಗಲಿದೆ. ಸ್ವಲ್ಪವೇ ಜಾಸ್ತಿ ಮಳೆ ಬಂದರೂ ಮೊದಲು ಕರಡಿಗೋಡು ಗ್ರಾಮಕ್ಕೆ ಕಾವೇರಿ ನದಿ ಪ್ರವಾಹದ ನೀರು ನುಗ್ಗುತ್ತದೆ ಎನ್ನೋದು ಕರಡಿಗೋಡು ಗ್ರಾಮದ ನಿವಾಸಿ ಯಮುನಾ ಅವರ ಆತಂಕ.
ತಲಕಾವೇರಿ, ಬ್ರಹ್ಮಗಿರಿ ಬೆಟ್ಟದಲ್ಲಿ ಸುರಿಯುತ್ತಿರುವ ಮಳೆ ಕೋಳಿಕಾಡು, ಚೇರಂಗಾಲ, ಕೋರಂಗಾಲ ಸೇರಿದಂತೆ ಹಲವು ಹಳ್ಳಿಗಳ ಜನರಿಗೆ ಬೆಟ್ಟ ಕುಸಿಯುವ ಆತಂಕ ಮೂಡಿಸಿದೆ. ಆಗಸ್ಟ್ ತಿಂಗಳಲ್ಲಿ ಕುಸಿದಿದ್ದ ಗಜಗಿರಿಬೆಟ್ಟದಲ್ಲಿ ಮತ್ತಷ್ಟು ಬಿರುಕು ಇದೆ ಎನ್ನಲಾಗುತ್ತಿದೆ. ಅಲ್ಲದೆ ತಲಕಾವೇರಿಯ ಸಮೀಪದ ಬೆಟ್ಟವೊಂದರಲ್ಲಿ ಅಧಿಕಾರಿಯೊಬ್ಬ, ಅಕ್ರಮವಾಗಿ ಬೆಟ್ಟಕೊರೆದು ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದ. ಈ ಪ್ರದೇಶದಲ್ಲಿ ಬೆಟ್ಟ ಬಿರುಕುಬಿಟ್ಟಿವೆ.
ಇದನ್ನೂ ಓದಿ: ʼಎಸ್ಸಿಪಿ, ಟಿಎಸ್ಪಿ ಸ್ಕೀಮ್ ಹಣ ರಸ್ತೆ ಕಾಮಗಾರಿಗೆ ಬಳಸಬೇಡಿʼ - ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ
ಮಳೆ ಹೀಗೆ ಮುಂದುವರೆದಲ್ಲಿ ಈ ಎರಡು ಬೆಟ್ಟಗಳು ಕುಸಿದು ಚೇರಂಗಾಲ, ಕೋರಂಗಾಲ ಮತ್ತು ಕೋಳಿಕಾಡು ಗ್ರಾಮಗಳು ಸಂಪೂರ್ಣ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನೋದು ಬಾಗಮಂಡಲ ನಿವಾಸಿ ಸಂಜಯ್ ಅವರ ಅಭಿಪ್ರಾಯ. ಒಟ್ಟಿನಲ್ಲಿ ಮಳೆ ಜೋರಾದಂತೆ ಜನರು ಪ್ರಾಣ ಕೈಯಲ್ಲಿಡುದು ಬದುಕುತ್ತಿದ್ದಾರೆ.
Published by:
Ganesh Nachikethu
First published:
September 13, 2020, 6:10 PM IST