ಉತ್ತರ ಕನ್ನಡದಲ್ಲಿ ಪ್ರವಾಹ: ಗಂಗಾವಳಿ ನದಿ ಅಬ್ಬರಕ್ಕೆ ಕೊಚ್ಚಿ ಹೋದ‌ ಜನರ ಬದುಕು

Karnataka Rain Update: ಶಿರೂರು ಗ್ರಾಮದಲ್ಲಿ ಸ್ಥಳಾಂತರ ವೇಳೆ ದೋಣಿ ಪಲ್ಟಿಯಾದ ಪರಿಣಾಮ 65 ವರ್ಷದ ವೃದ್ಧೆ ಸಾವನ್ನಪ್ಪಿದ್ದಾಳೆ.

ಪ್ರವಾಹ

ಪ್ರವಾಹ

  • Share this:
ಉತ್ತರ ಕನ್ನಡ:  ಜಿಲ್ಲೆಯಲ್ಲಿ ವರುಣನ ಅಬ್ಬರ ಹಲವೆಡೆ ಅವಾಂತರ ಸೃಷ್ಟಿಸಿದೆ. ರಾತ್ರೋರಾತ್ರಿ ಸುರಿದ ರಣಭೀಕರ ಮಳೆಗೆ ನದಿಗಳು ಉಕ್ಕಿ ಹರಿದಿದ್ದು ನೂರಾರು ಮನೆಗಳು ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿಗಳ ಮೇಲೆ ನದಿ ನೀರು ಉಕ್ಕಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದ್ದು ನೆರೆಯಲ್ಲಿ‌ ಸಿಲುಕಿಕೊಂಡವರನ್ನ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.

ಅಂಕೋಲಾ ತಾಲ್ಲೂಕು ಸೇರಿ ವಿವಿಧೆಡೆ  ಮಳೆಯ ಅಬ್ಬರಕ್ಕೆ ಅಕ್ಷರಶಃ ಪರಿಸ್ಥಿತಿ ಬಿಗಡಾಯಿಸಿದ್ದು ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಘಟ್ಟದ ಮೇಲಿನ ಯಲ್ಲಾಪುರ, ಶಿರಸಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಇದರ ಪರಿಣಾಮ ಇದೀಗ ಕರಾವಳಿ ಭಾಗಕ್ಕೆ ತಟ್ಟಿದೆ. ಅಂಕೋಲಾದ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು ಪರಿಣಾಮ ಗ್ರಾಮೀಣ ಭಾಗದಲ್ಲಿ ನೂರಾರು ಮನೆಗಳು ಜಲಾವೃತಗೊಂಡಿದ್ದು ತಾಲ್ಲೂಕಿನ ಹಿಚ್ಕಡ ಗ್ರಾಮದಲ್ಲಿ ನೀರು ನಿಂತ ಪರಿಣಾಮ ಮನೆಯೊಂದು ಕುಸಿದುಬಿದ್ದ ದೃಶ್ಯಾವಳಿಗಳು ಮೊಬೈಲ್‌ನಲ್ಲಿ ಸೆರೆಯಾಗಿದೆ.

ತಾಲ್ಲೂಕಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 63 ಹಾಗೂ 66ರಲ್ಲಿ ರಸ್ತೆಗಳ ಮೇಲೆ ನೀರು ನಿಂತಿದೆ. ಪರಿಣಾಮ ಕಾರವಾರ, ಅಂಕೋಲಾ ಭಾಗದಿಂದ ಯಲ್ಲಾಪುರ, ಹುಬ್ಬಳ್ಳಿ, ಕುಮಟಾ, ಶಿರಸಿ, ಮಂಗಳೂರು ತೆರಳುವ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಸುಂಕಸಾಳ ಬಳಿ ಹೋಟೆಲ್‌ವೊಂದರ ಕೆಳ‌ಅಂತಸ್ಥಿನಲ್ಲಿ ನೀರು ತುಂಬಿದ್ದು ಹೊಟೇಲ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ಹೊಟೇಲ್ ಕಾರ್ಮಿಕರು ಸೇರಿ 15 ಮಂದಿ ಸಿಲುಕಿದ್ದರು. ಅವರನ್ನ ನೌಕಾನೆಲೆಯ ಸಹಕಾರದೊಂದಿಗೆ ಹೆಲಿಕಾಪ್ಟರ್ ಮೂಲಕ ಮದ್ಯಾಹ್ನದ ವೇಳೆಗೆ ರಕ್ಷಣೆ ಮಾಡಲಾಗಿದೆ. ಇನ್ನು ಹೊನ್ನಳ್ಳಿ ಭಾಗದಲ್ಲಿ ನೆರೆಯಿಂದಾಗಿ ಹಲವೆಡೆ ಮನೆಗಳಲ್ಲಿ ಸಿಲುಕಿದ್ದವರನ್ನ ದೋಣಿಗಳ‌ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನು ಶಿರೂರು ಗ್ರಾಮದಲ್ಲಿ ಸ್ಥಳಾಂತರ ವೇಳೆ ದೋಣಿ ಪಲ್ಟಿಯಾದ ಪರಿಣಾಮ 65 ವರ್ಷದ ವೃದ್ಧೆ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: Karnataka Rain: ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಮಳೆಯಿಂದಾಗಿ 400 ಕೋಟಿ ಹಾನಿ; ಡಿಸಿಎಂ ಗೋವಿಂದ ಕಾರಜೋಳ

ಇನ್ನು ಶಿರಸಿ, ಸಿದ್ದಾಪುರದಲ್ಲಿ ‌ವ್ಯಾಪಕ ಮಳೆಯಾದ ಪರಿಣಾಮ ಅಘನಾಶಿನಿ‌ ನದಿ ಕೂಡ ತುಂಬಿ ಹರಿಯುತಿದ್ದು, ಕುಮಟಾ ತಾಲ್ಲೂಕಿನ ನದಿಯಂಚಿನ ಬಡಾಳ, ಸಂತೆಗುಳಿ, ಹೆಗಡೆ, ದಿವಗಿ, ಮಿರ್ಜಾನ್ ಸೇರಿದಂತೆ ಹತ್ತಾರು ಗ್ರಾಮಗಳು ಮುಳುಗಡೆಯಾಗಿವೆ. ನದಿಪಾತ್ರದ ಬಹುತೇಕ ಕುಟುಂಬಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಕೆಲವರು ಸಂಬಂಧಿಕರ ಮನೆಗಳಿಗೆ ತೆರಳಿ ಆಶ್ರಯ ಪಡೆದಿದ್ದಾರೆ. ಇನ್ನು ಪ್ರವಾಹ ಸೃಷ್ಟಿಯಾಗುತ್ತಿದ್ದಂತೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕಾಗಮಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಸ್ವತಃ ನಾಡದೋಣಿ ಯಲ್ಲಿ ನೀರು ನುಗ್ಗಿದ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನು ನೆರೆ ಪರಿಸ್ಥಿತಿ ನಿರ್ಮಾಣವಾಗಿರುವ ಅಂಕೋಲಾ ತಾಲ್ಲೂಕಿನ ಪ್ರದೇಶಗಳಿಗೆ ಶಾಸಕಿ‌ ರೂಪಾಲಿ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆರೆಯಲ್ಲಿ ಸಿಲುಕಿರುವ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು ಅಗತ್ಯವಿರುವೆಡೆ ಕಾಳಜಿ ಕೇಂದ್ರಗಳನ್ನ ತೆರೆಯಲು ಸೂಚನೆ ನೀಡಿದ್ದಾರೆ.

ಒಟ್ಟಾರೇ ಎಡೆಬಿಡದೇ ಸುರಿದ ಧಾರಾಕಾರ ಮಳೆಗೆ ಉತ್ತರಕನ್ನಡ ತತ್ತರಿಸಿಹೋಗಿದ್ದು ಓರ್ವ ವೃದ್ಧೆ ಸಾವನ್ನಪ್ಪಿ ಮೂವರು ಕಣ್ಮರೆಯಾಗಿದ್ದು ನಾಪತ್ತೆಯಾದವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಕರಾವಳಿಯಲ್ಲಿ ಮಳೆ ಕಡಿಮೆಯಾಗಿದ್ದರೂ ಘಟ್ಟದ ಮೇಲೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದು ಜನರಿಗೆ 2019ರ ನೆರೆಯನ್ನ ನೆನಪಿಸಿದ್ದಂತೂ ಸತ್ಯ
Published by:Kavya V
First published: