• Home
  • »
  • News
  • »
  • state
  • »
  • ಚಿತ್ರದುರ್ಗದಲ್ಲಿ ಭಾರೀ ಮಳೆಯಿಂದ ತುಂಬಿ ಹರಿದ ಹಳ್ಳ-ಕೊಳ್ಳ, ಡ್ಯಾಂಗಳು

ಚಿತ್ರದುರ್ಗದಲ್ಲಿ ಭಾರೀ ಮಳೆಯಿಂದ ತುಂಬಿ ಹರಿದ ಹಳ್ಳ-ಕೊಳ್ಳ, ಡ್ಯಾಂಗಳು

ಚಿತ್ರದುರ್ಗದಲ್ಲಿ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು

ಚಿತ್ರದುರ್ಗದಲ್ಲಿ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು

ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಸದುರ್ಗ ತಾಲ್ಲೂಕಿನ ಹಿರೇಹಳ್ಳ ತುಂಬಿ ಹರಿಯುತ್ತಿದ್ದು, ಗೂಳಿಹಟ್ಟಿ, ಹಾಗೂ ಬನಸಿಹಳ್ಳಿ ಕರಡಿ ಕಾವಲು ಬಳಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಮೈದುಂಬಿ ಹರಿದಿವೆ.

  • Share this:

ಚಿತ್ರದುರ್ಗ : ಸತತ ಐದಾರು ವರ್ಷಗಳಿಂದ ಸಮರ್ಪಕ ಮಳೆಯಿಲ್ಲದೆ ಬರದ ಹಣೆಪಟ್ಟಿ ಹೊತ್ತಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ  ವರುಣದೇವನ ಕೃಪೆಯಿಂದ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಬರಿದಾಗಿದ್ದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ವರ್ಷಗಳ ಬಳಿಕ ಮೈದುಂಬಿ ಹರಿಯುವ ಹಳ್ಳ ಕೊಳ್ಳಗಳು ಹಾಗೂ ಚೆಕ್ ಡ್ಯಾಂಗಳನ್ನ ನೋಡಿ ಸಂತಸಗೊಂಡ ಶಾಸಕ ಗೂಳಿಹಟ್ಟಿ ಶೇಖರ್ ಗಂಗಾ ಮಾತೆಗೆ ಬಾಗಿನ ಅರ್ಪಿಸಿದ್ದಾರೆ. ಕಳೆದ ವರ್ಷ ಸುರಿದ ಭಾರೀ ಮಳೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಪ್ರವಾಹ ಎದುರಾಗಿತ್ತು. ಮಳೆಯಿಂದಾಗಿ ಕೆಲವು ಗ್ರಾಮಗಳಿಗೆ ನೀರು ನುಗ್ಗಿ ಜನರು ಪಡಬಾರದ ಕಷ್ಟ ಅನುಭವಿಸಿ ಗಂಜಿ ಕೇಂದ್ರಗಳನ್ನು ಆಶ್ರಯಿಸಿ ಬದುಕುವ ಸ್ಥಿತಿ ಬಂದುಬಿಟ್ಟಿತ್ತು.


ಸತತ ಮಳೆಯಿಲ್ಲದೆ ಬರ ಅನುಭವಿಸಿದ ಜಿಲ್ಲೆಯಲ್ಲಿ ಪ್ರವಾಹ ಬಂದಿತ್ತು ಅನ್ನೋದು ಅಚ್ಚರಿ ಎನಿಸಬಹುದು. ಆದರೆ, ಅದು ನಿಜ. ಕಾರಣ ಪುರಾತನ ಕಾಲದಿಂದ ಜಲ ಮೂಲಗಳಿಗೆ ದಾರಿ ಹಾಗೂ ಅಶ್ರಯಗಳಾಗಿದ್ದ ಕೆರೆ ಕಟ್ಟೆಗಳು, ಹಳ್ಳಕೊಳ್ಳಗಳು ಕಾಲ ಕಳೆದಂತೆ ಹೂಳು ತುಂಬಿ ಅವಸಾನದ ಅಂಚಿಗೆ ತಲುಪುತ್ತಿವೆ. ಇಂತಹ ಸಂದರ್ಭದಲ್ಲಿ ವರುಣದೇವನ ಅನುಗ್ರಹದಿಂದ ಮಳೆಯಾದರೆ ನೀರು ನಿಲ್ಲಲು, ಹರಿಯಲು ಜಾಗವಿಲ್ಲದೆ ಗ್ರಾಮಗಳಿಗೆ ನುಗ್ಗುವುದು‌ ಖಚಿತ. ಇದಕ್ಕೆ ಉದಾಹರಣೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ತಗ್ಗು ಪ್ರದೇಶದ ಗ್ರಾಮಗಳ ಬಳಿ ಹಾದುಹೋಗಿದ್ದ ಹಿರೇಹಳ್ಳದಲ್ಲಿ ಹೂಳು ತುಂಬಿದ್ದರಿಂದ ಕಳೆದ ವರ್ಷ ತಾಲ್ಲೂಕಿನ ಕಂಠಾಪುರ,ದೇವಪುರ ಕಾಲೋನಿ, ನರಸಾಪುರ, ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿತ್ತು.


ಇದನ್ನೂ ಓದಿ: ನೆಲಮಂಗಲ: ವಿಚ್ಛೇದನ ಪಡೆದ ಮರುಕ್ಷಣವೇ ಕೋರ್ಟ್​ ಆವರಣದಲ್ಲಿ ಗಂಡನ ಕಾರನ್ನು ಪುಡಿ ಪುಡಿ ಮಾಡಿದ ಹೆಂಡತಿ


ಹೀಗೆ ಪ್ರವಾಹಕ್ಕೆ ಸಿಕ್ಕು ನಲುಗಿದ ಜನರನ್ನು ರಕ್ಷಿಸೋಕೆ, ಅವರಿಗೆ ವಸತಿ‌ ಕಲ್ಪಿಸೋಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್  ಮಳೆಯಲ್ಲಿಯೇ ಹರಸಾಹಸದಿಂದ ಹಳ್ಳಗಳನ್ನು ದಾಟಿ ಕರ್ತವ್ಯ ನಿರ್ವಹಿಸಿದ್ದರು. ಹೀಗೆ ಜನರು ಮಳೆಯ ನೀರಿನ ಪ್ರವಾಹಕ್ಕೆ ಸಿಲುಕಲು ಕಾರಣ ಏನೆಂಬುದನ್ನು ಅರಿತು ಹೂಳು ತುಂಬಿದ್ದ ತಾಲ್ಲೂಕಿನ ಹಿರೇಹಳ್ಳ, ಸೇರಿದಂತೆ ಹಲವು ಕೆರೆಗಳ ಹೂಳು ತೆಗೆಸುವ ಕೆಲಸಕ್ಕೆ ಕೈಹಾಕಿ ಹಳ್ಳಗಳಗೆ ಅಡ್ಡಲಾಗಿ ಬೃಹತ್ ಚೆಕ್ ಡ್ಯಾಂ ಗಳನ್ನ ಕಟ್ಟಿಸಿದ್ದಾರೆ.  ಇದೀಗ ಈ ಭಾರಿ ಮುಂಗಾರಿನಿಂದಲೇ ಜಿಲ್ಲೆಯಲ್ಲಿ  ಮಳೆಯಾಗುತ್ತಿರುವುದು ರೈತರಿಗೆ ಖುಷಿ ತಂದಿದೆ.


ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಸದುರ್ಗ ತಾಲ್ಲೂಕಿನ ಹಿರೇಹಳ್ಳ ತುಂಬಿ ಹರಿಯುತ್ತಿದ್ದು, ಗೂಳಿಹಟ್ಟಿ, ಹಾಗೂ ಬನಸಿಹಳ್ಳಿ ಕರಡಿ ಕಾವಲು ಬಳಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಮೈದುಂಬಿ ಹರಿದಿವೆ. ಅಷ್ಟೆ ಅಲ್ಲದೆ ಹಿರೇಹಳ್ಳದ ಉದ್ದಕ್ಕೂ ಕಿಲೋ ಮೀಟರ್ ಗಳವರೆಗೆ ನೀರು ನಿಂತಿದೆ.  ಹೂಳು ತುಂಬಿ ಮುಚ್ಚಿ ಹೋಗಿದ್ದ ಹಳ್ಳ ಪುನಶ್ಚೇತನ ಆಗಿರುವ ಹಿನ್ನಲೆ ನೀರು ನೀರು ನಿಂತಿದ್ದರಿಂದ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಮರು ಜೀವ ಬಂದಂತಾಗಿದ್ದು, ಬತ್ತಿ ಹೋಗಿದ್ದ ಬೋರ್​ವೆಲ್​ಗಳು ಜೀವ ತುಂಬಿಕೊಳ್ಳುತ್ತಿವೆ. ಅಷ್ಟೇ ಅಲ್ಲದೇ ಕಳೆದ ಬಾರಿ ಪ್ರವಾಹಕ್ಕೆ ಸಿಕ್ಕಿ ನಲುಗಿದ್ದ ಗ್ರಾಮಗಳ ಜನರು ಈ  ಸಾರಿ ಪ್ರವಾಹದ ಬೀತಿ ಇಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದ್ದರಿಂದ ಇಡೀ ತಾಲ್ಲೂಕಿನ ರೈತ ಸಮೂಹಕ್ಕೆ,ಬಡ ಕುಟುಂಬಗಳ ರಕ್ಷಣೆಗೆ ಮಾಡಿದ ಅಭಿವೃದ್ದಿ ಕಾರ್ಯಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಹೀಗೆ ತುಂಬಿ ಹರಿಯುತ್ತಿರುವ ಹಳ್ಳ, ಕೊಳ್ಳಗಳ ಜಲಧಾರೆ ನೋಡಲು ಸ್ವತಃ ಶಾಸಕ ಗೂಳಿಹಟ್ಟಿ ಶೇಖರ್ ನಿನ್ನೆ ಬೆಳಗ್ಗೆಯಿಂದಲೇ ಸಂತಸದಿಂದ ಚೆಕ್ ಡ್ಯಾಂ, ಹಳ್ಳಗಳನ್ನು ವೀಕ್ಷಣೆ ಮಾಡಿ, ಸಾರ್ವಜನಿಕರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಸೇರಿದಂತೆ ಆರೂ ತಾಲ್ಲೂಕುಗಳಲ್ಲಿ ಮಳೆಯಾಗುತ್ತಿದ್ದು  ರೈತರಲ್ಲಿ ಸಂತಸ ಮನೆ ಮಾಡಿದೆ. ಅಲ್ಲದೆ ಮೊಳಕಾಲ್ಮೂರು ತಾಲ್ಲೂಕಿನ ಬೃಹತ್ ಕೆರೆ ಎಂದೆ ಹೆಸರುವಾಸಿ ಆಗಿರುವ ಪಕ್ಕುರ್ತಿ ಕೆರೆ ತುಂಬಿದ್ದು, ಹನ್ನೆರಡು ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಹಾಗಾಗಿ ಸತತ ಬರವನ್ನೇ ಅನುಭವಿಸಿದ್ದ ರೈತರು,ಬೀಸಿಲಿನ ತಾಪಕ್ಕೆ  ಬಸವಳಿದಿದ್ದ ಭೂಮಿಗೆ  ವರಣುದೇವ ತಂಪೆರೆದಿದ್ದು ಇಡೀ ಜಿಲ್ಲೆಯಲ್ಲಿ ಬಿತ್ತಿದ ಬೆಳೆ ಕೈಸೇರುತ್ತದೆ ಎಂಬ ಭರವಸೆ ಅನ್ನದಾತನ ಮೊಗದಲ್ಲಿ ಮೂಡಿದೆ.

Published by:Sushma Chakre
First published: