ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ರಾಜ್ಯದ ಇತರೆಡೆಯೂ ಸುರಿದ ವರ್ಷಧಾರೆ

ಅನ್​ಲಾಕ್​ 3.0ಗೂ ಮುಂಚೆ  ಮಳೆರಾಯ ಅನ್​ಲಾಕ್​ ಆಗಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಭಾನುವಾರ ಸಂಜೆ ಹೊತ್ತಿಗೆ ಸುರಿಯಲು ಪ್ರಾರಂಭಿಸಿದ ಮಳೆ ರಾತ್ರಿಯಾದರೂ  ರಾಜ್ಯ ರಾಜಧಾನಿಯನ್ನು ಬಿಡಲಿಲ್ಲ. 

ಮಳೆಯ ಪ್ರಾತಿನಿಧಿಕ ಚಿತ್ರ

ಮಳೆಯ ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ಹಲವು ದಿನಗಳಿಂದ ಮಳೆ ಕಾಣದೆ ವಿಪರೀತ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಜನರಿಗೆ ಇಂದು ಮಳೆರಾಯ ತಂಪನ್ನೆರೆದಿದ್ದಾನೆ. ಕೊರೋನಾ ಆರ್ಭಟದ ನಡುವೆ ತಣ್ಣಗಾಗಿದ್ದ ಮಳೆ ಭಾನುವಾರ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸುರಿದಿದೆ. ಕೆಲವೆಡೆ ಧಾರಾಕಾರವಾಗಿ ಮಳೆಯಾಗಿದ್ದರೆ ಇನ್ನು ಹಲವೆಡೆ ಸಾಧಾರಣ ಮಳೆಯಾಗಿದೆ. ಬೆಂಗಳೂರಿನಲ್ಲಿ ಭಾನುವಾರ ಸಂಜೆ ಆರಂಭವಾದ ಮಳೆ ಸತತ ಒಂದು ಗಂಟೆಗಳಿಗೂ ಹೆಚ್ಚು ಕಾಲ ಸುರಿಯಿತು. ಕೊರೋನಾ ನಿಮಿತ್ತ ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಹೆಚ್ಚಿನ ಜನಸಂಖ್ಯೆ ನಗರದ ಬೀದಿಗಳಲ್ಲಿ ಇಲ್ಲದ ಕಾರಣ ಸಾರ್ವಜನಿಕರಿಗೆ ಮಳೆಯಿಂದ ಅಂತಹ ಸಮಸ್ಯೆ ಏನು ಉಂಟಾಗಲಿಲ್ಲ.

  ಅನ್​ಲಾಕ್​ 3.0ಗೂ ಮುಂಚೆ  ಮಳೆರಾಯ ಅನ್​ಲಾಕ್​ ಆಗಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಭಾನುವಾರ ಸಂಜೆ ಹೊತ್ತಿಗೆ ಸುರಿಯಲು ಪ್ರಾರಂಭಿಸಿದ ಮಳೆ ರಾತ್ರಿಯಾದರೂ  ರಾಜ್ಯ ರಾಜಧಾನಿಯನ್ನು ಬಿಡಲಿಲ್ಲ.

  ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಗಾಂಧಿನಗರ, ಗೋವಿಂದರಾಜ ನಗರ, ಕಾಮಾಕ್ಷಿ ಪಾಳ್ಯ, ವಿಜಯನಗರ, ಪಟ್ಟೇಗಾರ ಪಾಳ್ಯ, ರಾಜಾಜಿ ನಗರ, ಸುಮ್ಮನಹಳ್ಳಿ, ನಾಗರಭಾವಿ, ಜಾಲಹಳ್ಳಿ ಸೇರಿದಂತೆ ಅನೇಕ ಕಡೆ ಮಳೆ ಆರ್ಭಟ ಜೋರಾಗಿತ್ತು. ಅಚಾನಕ್​ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಆಶ್ರಯ ಪಡೆದ ಕೆಲ ವಾಹನ ಸವಾರರು ಮನೆಗೆ ಮರಳಲು ಪರದಾಡುತ್ತಿದ್ದದ್ದು ಕಂಡು ಬಂತು. ಜೋರು ಮಳೆಯಾದ್ದರಿಂದ ರಸ್ತೆಗಳ ಮೇಲೆ ಭಾರೀ ಪ್ರಮಾಣದ ನೀರು  ಹರಿಯಿತು.

  ರಾಜ್ಯದ ಹಲವೆಡೆ ವರುಣನ ಆರ್ಭಟ

  ರಾಜ್ಯದಲ್ಲಿ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಭಾನುವಾರ ಕೆಲವೆಡೆ ಸುರಿದಿದೆ. ಹಾಸನ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬೆಣ್ಣೆ‌ನಗರಿ ದಾವಣಗೆರೆ ಸುತ್ತಮುತ್ತ ಭಾರಿ ಮಳೆ ದಾವಣಗೆರೆ ಸುತ್ತಮುತ್ತ ಸುರಿದ ಮಳೆಯಿಂದಾಗಿ ಮೆಕ್ಕೆ ಜೋಳ, ಸೇರಿ ವಿವಿಧ ಬೆಳೆ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹರಿಹರ, ಕುಂದವಾಡ, ಶಾಮನೂರು, ಅನಗೋಡು, ಸೇರಿ ಮುತ್ತ ಸೇರಿ ಹಲವೆಡೆ ಭಾರಿ ಮಳೆಯಾಗಿದೆ. ಕಳೆದ 20 ದಿನಗಳಿಂದ ಮಳೆ ಇಲ್ಲದೆ ರೈತರು ಕಂಗಲಾಗಿದ್ದರು. ಮಳೆಯಿಲ್ಲದೆ ಬೆಳೆಗಳೆಲ್ಲಾ ಒಣಗಿ ನಿಂತಿದ್ದವು. ಇದೀಗ ಸುರಿದ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ.

  ಇದನ್ನೂ ಓದಿ: Uttarakhand CM: ಉತ್ತರಾಖಂಡ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ ಸ್ವೀಕಾರ

  ಜೂನ್​ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದರೂ ಈ ಬಾರಿ ಈವರೆಗೂ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಸುರಿದಿಲ್ಲ. ಕೆಲವು ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಿದ್ದರೆ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಜಲಾನಯನ ಪ್ರದೇಶಗಳ ರೈತರು ಮುಂದಿನ ದಿನಗಳಲ್ಲಿ ಹೇಗೆ ಎಂಬುದಾಗಿ ಯೋಚಿಸುತ್ತಿದ್ದರು. ಮಲೆನಾಡು ಭಾಗದಲ್ಲೂ ಹೇಳಿಕೊಳ್ಳುವಂತಹ ಮಳೆ ಈವರೆಗೂ ಆಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆಯಾದರೆ ಮಾತ್ರ ರೈತರು ಈಗ ಬೆಳೆದಿರುವ ಬೆಳೆಗಳು ಉಳಿದುಕೊಳ್ಳಲಿವೆ. ಹಾಗೂ ಜಲಾಶಯಗಳು ಭರ್ತಿಯಾಗಲಿವೆ. ಹವಾಮಾನ ಇಲಾಖೆ ಸಹ ಈ ಬಾರಿ ಮುಂಗಾರು ಸಾಧಾರಣವಾಗಿ ಇರಲಿದೆ ಎಂದು ಹೇಳಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗುವುದನ್ನು ಆದಷ್ಟು ನಿಯಂತ್ರಿಸಿ ಹಾಗೂ ಅನಗತ್ಯವಾಗಿ ಗುಂಪುಗೂಡುವುದನ್ನು ತಪ್ಪಿಸಿ.
  Published by:HR Ramesh
  First published: