Heavy Rain: ಮಲೆನಾಡಲ್ಲಿ ಮಳೆ ಅಬ್ಬರ, ಮೈದುಂಬಿ ಹರಿಯುತ್ತಿರೋ ಭದ್ರೆ: ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಭಾಗದಲ್ಲಿ ಕಳೆದ ರಾತ್ರಿ ಸುರಿದಂತಹ ಧಾರಾಕಾರ ಮಳೆಯಿಂದ ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು ಹೆಬ್ಬಾಳೆ ಸೇತುವೆಗೆ ಮುಳುಗುಡೆ ಭೀತಿ ಆವರಿಸಿದೆ.

ಸೇತುವೆ ಮುಳುಗಡೆ ಭೀತಿ

ಸೇತುವೆ ಮುಳುಗಡೆ ಭೀತಿ

  • Share this:
ಚಿಕ್ಕಮಗಳೂರು (ಜು.2) : ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಭಾಗದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ (Heavy Rain) ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು ಹೆಬ್ಬಾಳೆ ಸೇತುವೆಗೆ ಮುಳುಗುಡೆ ಭೀತಿ ಆವರಿಸಿದೆ. ಕಳಸ (Kalasa) ಹಾಗೂ ಕುದುರೆಮುಖ ಸುತ್ತಮುತ್ತ ನಿನ್ನೆ ರಾತ್ರಿ 11 ಸುಮಾರಿಗೆ ಆರಂಭವಾದ ಮಳೆ ಬೆಳಗಿನ ಜಾವದವರೆಗೂ ಒಂದೇ ಸುಮನೆ ಸುರಿದಿದೆ. ಭಾರೀ ಮಳೆಯಿಂದ ಭದ್ರಾ ನದಿ (Bhadra River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತ ತಲುಪಿದೆ.

ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಭೀತಿ

ಈ ಸೇತುವೆ ಮುಳುಗಿದರೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸ ಸಂಪರ್ಕ ಕಡಿತಗೊಳ್ಳಲಿದೆ. ದೇವಸ್ಥಾನಕ್ಕೆ ಹೋಗಲು ಅನ್ಯ ಮಾರ್ಗವಿದ್ದರೂ ಸುಮಾರು 8-10 ಕಿ.ಮೀ. ಸುತ್ತಿ ಬಳಸಿ ಹೋಗಬೇಕು. ಆ ಮಾರ್ಗವೂ ಕಿರಿದಾದ ರಸ್ತೆಯಾಗಿದ್ದು, ದೊಡ್ಡ ವಾಹನಗಳ ಸಂಚಾರ ಕಷ್ಟದಾಯಕವಾಗಿದೆ. ಈ ಸೇತುವೆಯನ್ನ ಎತ್ತರಿಸಿ ಕೊಡಿ ಎಂದು ಸ್ಥಳಿಯರು ಹತ್ತಾರು ವರ್ಷಗಳಿಂದ ಮನವಿ ಮಾಡಿದರೂ ಸರ್ಕಾರ, ಅಧಿಕಾರಿಗಳು ಯಾರೂ ಸೂಕ್ತವಾಗಿ ಸ್ಪಂದಿಸಿಲ್ಲ.

ಪ್ರತಿ ಮಳೆಗಾಲದಲ್ಲೂ ಈ ಸೇತುವೆ ಮುಳುಗಿ ಜನಸಾಮಾನ್ಯರು ತೀವ್ರ ಸಂಕರ್ಷ ಅನುಭವಿಸುತ್ತಿದ್ದಾರೆ. ಒಂದು ಮಳೆಗಾಲಕ್ಕೆ ಕನಿಷ್ಟ 10ಕ್ಕೂ ಹೆಚ್ಚು ಬಾರಿ  ಈ ಸೇತುವೆ ಮುಳುಗಲಿದೆ. 2019ರಲ್ಲಿ ನಾಲ್ಕು ದಿನಗಳ ನಿರಂತರವಾಗಿ ಮುಳುಗಿತ್ತು. ಈ ಬಾರಿಯೂ ಒಂದೇ ರಾತ್ರಿಯ ಮಳೆಗೆ ಸೇತುವೆ ಮುಳುಗುವ ಹಂತ ತಲುಪಿದ್ದು ಸ್ಥಳಿಯರು ಆತಂಕದಿಂದ ಇದ್ದಾರೆ.

ಮಲೆನಾಡು ಭಾಗದಲ್ಲೂ ಧಾರಾಕಾರ ಮಳೆ

ಮಲೆನಾಡು ಭಾಗದಲ್ಲೂ ಧಾರಾಕಾರ ಮಳೆ ಮುಂದುವರೆದಿದ್ದು ಜಿಲ್ಲೆಯಲ್ಲಿರುವ ನದಿಗಳು ಮೈದುಂಬಿ ಹರಿಯುತ್ತಿವೆ.  ಜಿಲ್ಲೆಯ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್ ಆರ್ ಪುರ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕಿನಲ್ಲೂ ಬಿಟ್ಟುಬಿಟ್ಟು ಮಳೆ ಸುರಿಯುತ್ತಿದೆ.

ಧಾರಾಕಾರ ಮಳೆಯಿಂದ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ, ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನ ಮಟ್ಟ ಹೆಚ್ಚಾಗಿದೆ. ಇನ್ನು ಮಲೆನಾಡಿನ ಕೆಲ ಭಾಗದಲ್ಲಿ ಮರಗಳು ಧರೆಗುರುಳಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ‌. ಇನ್ನು ಕೆಲಭಾಗದಲ್ಲಿ ಮಳೆಯ ಆರ್ಭಟಕ್ಕೆ ವಿದ್ಯುತ್ ಕಂಬಗಳ ಉರುಳಿಬಿದ್ದಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಮಲೆನಾಡಿನ ಕುಗ್ರಾಮದಲ್ಲಿ ಜನರು ಕತ್ತಲಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚುರುಕುಗೊಂಡ ಕೃಷಿ ಚಟುವಟಿಕೆ

ಕಾಫಿನಾಡಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಬಿತ್ತನೆ ಕಾರ್ಯಗಳು ಕೂಡ ಆರಂಭವಾಗಿವೆ.  ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕಿನಲ್ಲಿ ಮೆಕ್ಕೆಜೋಳ, ಈರುಳ್ಳಿ, ಆಲೂಗೆಡ್ಡೆ ಸೇರಿದಂತೆ ಇತರ ಬೆಳೆಗಳು ಬಿತ್ತನೆ ಕಾರ್ಯ ಆರಂಭಗೊಂಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಜ್ಯದ ಹಲವೆಡೆ ಮುಂಗಾರಿನ ಅಬ್ಬರ

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಹಲವೆಡೆ ಭಾರೀ ಮಳೆಯಾಗ್ತಿದೆ. ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂದಿನ 4 ದಿನಗಳ ಕಾಲ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಜುಲೈ 5ರ ವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮುಂಗಾರು ಚುರುಕುಗೊಳ್ಳುತ್ತಿದ್ದು, ಹಲವೆಡೆಯ ಮಳೆಯ ಅಬ್ಬರ ಜೋರಾಗಿದೆ. ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Published by:Pavana HS
First published: