ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆರಾಯನ ಆರ್ಭಟ; ನೂರಾರು ಮನೆಗಳಿಗೆ ನುಗ್ಗಿದ ಚರಂಡಿ ನೀರು

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆ ನೀರು ಮನೆಯೊಳಗೆ  ನುಗ್ಗಿ ಅವಾಂತರ ಸೃಷ್ಟಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಪ್ರತೀ ಬಾರಿ ಮಳೆ ಸುರಿದಾಗಲೂ ಮನೆಯೊಳಗೆ ನೀರು ನುಗ್ಗುತ್ತದೆ. ಮನೆಯಲ್ಲಿ ನುಗ್ಗಿದ ಚರಂಡಿ ನೀರನ್ನು ಹೊರಗೆ ತೆಗೆದು ಹಾಕವುದು ಅನಿವಾರ್ಯ ಕರ್ಮವಾಗಿದೆಯೆಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ..

news18-kannada
Updated:July 12, 2020, 9:45 AM IST
ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆರಾಯನ ಆರ್ಭಟ; ನೂರಾರು ಮನೆಗಳಿಗೆ ನುಗ್ಗಿದ ಚರಂಡಿ ನೀರು
ಮನೆಗಳಿಗೆ ನುಗ್ಗಿರುವ ಚರಂಡಿ ನೀರು
  • Share this:
ಗದಗ(ಜು.12): ಗದಗ ಬೆಟಗೇರಿ ಅವಳಿ ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಚರಂಡಿಯಲ್ಲಿನ ನೀರು ನೂರಾರು ಮನೆಯೊಳಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿದೆ. ಮಳೆಯಿಂದಾಗಿ ಮನೆಯಲ್ಲಿನ ಪಾತ್ರೆ‌, ದಿನಬಳಕೆಯ ವಸ್ತುಗಳು, ದವಸ ಧಾನ್ಯ ಸಹ‌ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಮನೆಯಲ್ಲಿನ ದೈನದಂದಿನ ವಸ್ತುಗಳು ತೇಲಿ ಹೋಗಿದ್ದರಿಂದ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಜನತಾ ಕಾಲೋನಿ, ಅಂಬೇಡ್ಕರ್​ ಓಣಿ,ಸಿದ್ದರಾಮೇಶ್ವರ ನಗರ, ಜವುಳ ಪ್ರದೇಶ, ದತ್ತಾತ್ರೇಯ ದೇವಸ್ಥಾನದ ಮುಂದಿನ ಪ್ರದೇಶದಲ್ಲಿನ ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಬದಿಯಲ್ಲಿನ ಚರಂಡಿ ನೀರು ಮನೆಗೆ ನುಗ್ಗಿದ್ದರಿಂದ ಈ ಪ್ರದೇಶದಲ್ಲಿ  ದುರ್ವಾಸನೆ ಹರಡುತ್ತಿದೆ‌. ಈ ಪ್ರದೇಶದಲ್ಲಿನ ಜನರು ಮನೆಯಲ್ಲಿ ನುಗ್ಗಿರುವ ನೀರನ್ನು ಹೊರಗೆ ಹಾಕುವಲ್ಲಿ  ಹರಸಾಹಸ ಪಡುತ್ತಿದ್ದಾರೆ.

ಗದಗ ಬೆಟಗೇರಿ ಅವಳಿ ನಗರದಲ್ಲಿನ ಬಹುತೇಕ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿಲ್ಲ ಎಂಬ ಆರೋಪಗಳು ಸಹ ಇದೆ.  ಈ ಚರಂಡಿಗಳಲ್ಲಿ ಮಣ್ಣು ತುಂಬಿ ತುಳುಕುತ್ತಿದೆ.  ನಿನ್ನೆ ಸಂಜೆ ಸುಮಾರು ಮೂರು ಗಂಟೆ ಮಳೆಯ ಆರ್ಭಟಕ್ಕೆ ಮಳೆ ನೀರು ಚರಂಡಿಗಳಲ್ಲಿ ಹರಿಯದೇ ರಸ್ತೆಯ ಮೇಲೆಯೇ ರಭಸದಿಂದ ಹರಿದಿದೆ. ಹೀಗಾಗಿ ಚರಂಡಿಯಲ್ಲಿನ ಕೊಳಚೆ ನೀರು ಸಹ ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿದೆ.

ವಾಸುದೇವ ಮಯ್ಯ ಆತ್ಮಹತ್ಯೆ ಬೆನ್ನಲ್ಲೀಗ ಮತ್ತೊಂದು ಬಹುಕೋಟಿ ವಂಚನೆ ಆರೋಪ: 14 ಮಂದಿ ವಿರುದ್ಧ ಎಫ್​ಐಆರ್​​

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆ ನೀರು ಮನೆಯೊಳಗೆ  ನುಗ್ಗಿ ಅವಾಂತರ ಸೃಷ್ಟಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಪ್ರತೀ ಬಾರಿ ಮಳೆ ಸುರಿದಾಗಲೂ ಮನೆಯೊಳಗೆ ನೀರು ನುಗ್ಗುತ್ತದೆ. ಮನೆಯಲ್ಲಿ ನುಗ್ಗಿದ ಚರಂಡಿ ನೀರನ್ನು ಹೊರಗೆ ತೆಗೆದು ಹಾಕವುದು ಅನಿವಾರ್ಯ ಕರ್ಮವಾಗಿದೆಯೆಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ..

ಇಲ್ಲಿಯ ಸಿದ್ದರಾಮೇಶ್ವರ ನಗರ, ಹುಡ್ಕೋ ಕಾಲೋನಿಯಲ್ಲಿನ ಚರಂಡಿ, ಒಳಚರಂಡಿ ನೀರು ದತ್ತಾತ್ರೇಯ ದೇವಸ್ಥಾನದ ಮುಂದಿನ ರಸ್ತೆಯಲ್ಲಿನ ಚರಂಡಿಗಳ ಮೂಲಕ ಪಂಚರ ಹೊಂಡದ ಮಾರ್ಗವಾಗಿ ತೆರಳುತ್ತದೆ. ಇಲ್ಲಿಯ ಪಂಚರಹೊಂಡ, ದತ್ತಾತ್ರೇಯ ದೇವಾಲಯದ ರಸ್ತೆಗಳಲ್ಲಿ ತರಕಾರಿ ಮಾರಾಟಗಾರರು ರಸ್ತೆಯ ಪಕ್ಕದಲ್ಲಿಯೇ ತರಕಾರಿ ಮಾರಾಟ ಮಾಡುತ್ತಾರೆ. ಅವಳಿ ನಗರದಲ್ಲಿ ಚಿಕ್ಕ ಮಳೆಯಾದರೂ ಸಾಕು ಈ ಚರಂಡಿಯಲ್ಲಿನ ಕಸ ರಸ್ತೆಯ ಮೇಲೆ ಬಂದು ಸುತ್ತಮುತ್ತಲಿನ ಪ್ರದೇಶದಲ್ಲಿನ ಮನೆಗಳಿಗೆ ನುಗ್ಗುವದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ.

ಇನ್ನು ನಗರದ ಅಗ್ನಿಶಾಮಕದಳ ವಸತಿ ಗ್ರಹದ ಆವರಣದಲ್ಲಿ ಮಳೆಯ ನೀರು ನುಗ್ಗಿ ಕೆರೆಯಂತೆ ಮಾಡಿದೆ. ವಸತಿ ನಿಲಯದಲ್ಲಿರುವ ಅಗ್ನಿಶಾಮಕ ದಳ ಸಿಬ್ಬಂದಿ ಆಫೀಸ್ ಗೆ ಬರಬೇಕಾದರೆ ಮನೆಯ ಆವರಣದಲ್ಲಿ ನಿಂತಿರುವ ನೀರನ್ನು ದಾಟಿಕೊಂಡು ಬರಬೇಕಿದೆ. ಗದಗ ನಗರದಲ್ಲಿ ವರುಣ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಅಷ್ಟಲ್ಲದೇ ಗದಗದ ಎಸ್.ಎಂ. ಕೃಷ್ಣ ನಗರಕ್ಕೆ ತೆರಳುವ ರಸ್ತೆ ಮಾರ್ಗ ಸಹ ಬಂದಾಗಿತ್ತು.

ಮೂರು ಗಂಟೆಗಳ ಕಾಲ ಬಿಟ್ಟು ಬಿಡದೆ ಸುರಿದ ಭಾರೀ ಮಳೆಗೆ ಚರಂಡಿ ನೀರು ರಸ್ತೆಯ ಮೇಲೆ ರಭಸವಾಗಿ ಹರಿಯಲು ಆರಂಭಿಸಿತ್ತು.‌ ಹಾಗಾಗಿ ಸ್ಥಳೀಯರು ನೀರಿನ ರಭಸ ಕಡಿಮೆ ಆಗುವವರೆಗೂ ನಿಂತು ನಂತ್ರ ಪ್ರಯಾಣ ಬೆಳೆಸಿದರು. ಸುಮಾರು 3 ಗಂಟೆಗಳ ಕಾಲ ಜನರು ಮಳೆಯಲ್ಲಿ ಪರದಾಟ ನಡೆಸಿದ್ದಾರೆ.
Published by: Latha CG
First published: July 12, 2020, 9:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading