news18-kannada Updated:September 15, 2020, 7:50 AM IST
ಮನೆಯೊಳಗೆ ನೀರು ತುಂಬಿ, ಹೊರಗೆ ಅಡುಗೆ ಮಾಡುತ್ತಿರುವ ಯಾದಗಿರಿಯ ವೃದ್ಧೆ
ಯಾದಗಿರಿ: ಆ ವೃದ್ದೆ ಕಳೆದ ಮೂರು ತಿಂಗಳಿನಿಂದ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದಾಳೆ. ನಿತ್ಯವೂ ಯಾರಾದರೂ ಸಹಾಯ ಮಾಡುತ್ತಾರಾ... ಎಂದು ಕಣ್ಣೀರು ಹಾಕುತ್ತಾ ಜೀವನ ನಡೆಸುತ್ತಿದ್ದಾಳೆ. ಚುನಾವಣೆ ಸಂದರ್ಭದಲ್ಲಿ ವೋಟ್ ಕೇಳಲು ಬಂದ ಜನಪ್ರತಿನಿಧಿಗಳು ಈಗ ಅಜ್ಜಿಯ ಕಣ್ಣೀರು ಒರೆಸುವ ಪ್ರಯತ್ನ ಮಾಡದೆ, ಮರೆತಿದ್ದಾರೆ. ಇನ್ನೊಂದು ಕಡೆ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನ ವಹಿಸಿದ್ದಾರೆ. ಇದರಿಂದ ವೃದ್ದೆ ಗಿರಿಯಮ್ಮ ಮೂರು ತಿಂಗಳಿನಿಂದ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದಾಳೆ. ಯಾದಗಿರಿ ತಾಲೂಕಿನ ಮುಷ್ಟುರು ಗ್ರಾಮದ ಗಿರಿಯಮ್ಮ ಕಣ್ಣೀರಲ್ಲಿಯೇ ಬದುಕು ಸಾಗಿಸುತ್ತಿದ್ದಾಳೆ. ಕಳೆದ ಮೂರು ತಿಂಗಳಿನಿಂದ ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮೂರು ತಿಂಗಳ ಹಿಂದೆ ಕೂಡ ಹೆಚ್ಚಿನ ಮಳೆ ಹಿನ್ನೆಲೆ ಮುಷ್ಟುರು ಗ್ರಾಮದಲ್ಲಿ ಕೂಡ ನೀರು ನುಗ್ಗಿತ್ತು. ನಂತರ ಮಳೆ ಕಡಿಮೆಯಾದ ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು.
ಆದರೆ, ಮತ್ತೆ ಮಳೆ ಬರುತ್ತಿರುವ ಹಿನ್ನೆಲೆ ತಗ್ಗು ಪ್ರದೇಶದಲ್ಲಿ ನಿರಂತರವಾಗಿ ಮಳೆ ಹಾಗೂ ಚರಂಡಿ ನೀರು ಸಂಗ್ರಹಗೊಂಡು ಸಣ್ಣ ಕೆರೆಯಂತಾಗಿದೆ. ಕೊಳಚೆ ನೀರು ಸಂಗ್ರಹಗೊಂಡ ಹಿನ್ನೆಲೆ ಸಮೀಪದ ವೃದ್ದೆ ಗಿರಿಯಮ್ಮಳ ಮನೆಯೊಳಗೆ ನೀರಿನ ಝರಿ ಹರಿದು ಬಂದು ಈಗ ಮನೆ ಕೂಡ ಜಲಾವೃತಗೊಂಡಿದೆ. ಅದೇ ರೀತಿ ವೃದ್ದೆಯ ಮನೆ ಸುತ್ತಲೂ ಹತ್ತಕ್ಕೂ ಹೆಚ್ಚು ಮನೆ ಸುತ್ತಲೂ ನೀರು ಸಂಗ್ರಹವಾಗಿ ನೀರು ಕೂಡ ಪಾಚಿಗಟ್ಟಿ ಹೋಗಿದ್ದು, ಈಗ ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಡೋಂಟ್ ಕೇರ್ ಎಂದಿದ್ದಾರೆ. ಇಂತಹ ಜಾಗದಲ್ಲಿಯೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇರುತ್ತರಾ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಹೀಗಾಗಿ, ಕೋವಿಡ್ನಿಂದ ಆತಂಕದಲ್ಲಿರುವ ಜನರಿಗೆ ನೀರು ಸಂಗ್ರಹಗೊಂಡ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ.
ನೀರಿನಲ್ಲಿ ಕೊಚ್ಚಿ ಹೋದ ಬದುಕು ಕಣ್ಣೀರು!:
ವೃದ್ದೆಯ ಗಿರಿಯಮ್ಮಳ ಮನೆಯಲ್ಲಿರುವ ಬಟ್ಟೆ, ಆಹಾರ ಸಾಮಗ್ರಿ ಹಾಗೂ ಇನ್ನಿತರ ವಸ್ತುಗಳು ನೀರಿನಿಂದ ಹಾನಿಯಾಗಿವೆ. ಕೂಲಿ ಮಾಡಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡ ಅಜ್ಜಿಗೆ ವರುಣ ದೇವನ ಅವಾಂತರದಿಂದ ಈಗ ನಿತ್ಯವೂ ಕಣ್ಣೀರು ಹಾಕುತ್ತಿದ್ದಾಳೆ. ಮನೆ ಹಿಂಭಾಗದಲ್ಲಿಯೇ ಅಡುಗೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾಳೆ. ಆದರೆ, ರಾತ್ರಿ ಪರಿಚಿತರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಈ ಬಗ್ಗೆ ಮಾತನಾಡಿದ ಗಿರಿಯಮ್ಮ, ನಮ್ಮ ಕಷ್ಟ ಯಾರ ಕೇಳತ್ತಾರೆ, ಎಲೆಕ್ಷನ್ ಬಂದಾಗ ಹಾಂಗ ಮಾಡುತ್ತೇವೆ, ಹಿಂಗ್ ಸಹಾಯ ಮಾಡುತ್ತೆವೆಂದು ಹೇಳಿ ಹೋದವರು ನಮ್ಮ ಕಷ್ಟ ಕೇಳತ್ತಿಲ್ಲರಿ. ನಾನು ಹೇಗೆ ಬದುಕಬೇಕು? ಮನ್ಯಾಗ ನೀರು ನುಗ್ಗಾವ್ ನನ್ನ ಮಗ ಬೆಂಗಳೂರಿನಲ್ಲಿ ಅದಾನ. ಬಾ ಅಂದ್ರೆ ನಾನು ಹೇಗೆ ಬರಲಿ? ಎಲ್ಲಿ ಇರಬೇಕೆಂದು ಕೇಳತ್ತಾನ ಎಂದು ಕಣ್ಣೀರು ಹಾಕುತ್ತಾ ನೋವು ತೊಡಿಕೊಂಡಳು.
ವೃದ್ದೆ ಗಿರಿಯಮ್ಮ ಹಣ ಖರ್ಚು ಮಾಡಿ ನೀರು ಖಾಲಿ ಮಾಡಿಸಿದರೂ ನೀರು ಬರುತ್ತಿವೆ. ಮನೆಯಿದ್ದರೂ ಈಗ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅಜ್ಜಿ ವಾಸ ಮಾಡಲು ಈಗ ಅಲೆದಾಡುವಂತಾಗಿದೆ. ವೃದ್ದೆಯ ಪುತ್ರ ಬೆಂಗಳೂರಿನಲ್ಲಿದ್ದು ಮಗನಿಗೆ, ತಾಯಿ ಈ ಬಗ್ಗೆ ನೋವು ತೋಡಿಕೊಂಡರು. ಆತ ಕೂಡ ಕೊವೀಡ್ ಹಿನ್ನೆಲೆ ಬರಲು ಸಾಧ್ಯವಾಗದೆ ಜೊತೆ ನಾನು ಬಂದು ಯಾವ ಗುಡಿಯಲ್ಲಿ ಮಲಗಬೇಕೆಂದು ಹೆತ್ತಮ್ಮಳಿಗೆ ಹೇಳಿದ್ದಾನೆ.
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ, ಈ ಬಗ್ಗೆ ಪಿಡಿಓ ಅವರ ಗಮನಕ್ಕೆ ತಂದು ಆದಷ್ಟು ಬೇಗ ಸಮಸ್ಯೆ ಪರಿಹಾರ ಕಲ್ಪಿಸಲಾಗುತ್ತದೆ ಎಂದರು. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಳೆ ನೀರು ಹಾಗೂ ಚರಂಡಿ ನೀರು ಹರಿದು ಹೋಗುವಂತೆ ಅಗತ್ಯ ಕ್ರಮಕೈಗೊಂಡು ವೃದ್ದೆಯ ಗಿರಿಯಮ್ಮಳಿಗೆ ಸೂಕ್ತ ಸಹಾಯ ಮಾಡಬೇಕಿದೆ.
Published by:
Sushma Chakre
First published:
September 15, 2020, 7:50 AM IST