ಬೆಂಗಳೂರು (ಅ.10): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜಧಾನಿಯ ವಿವಿಧೆಡೆ ಮಳೆ ಆರ್ಭಟ ಜೋರಾಗಿದೆ. ಶುಕ್ರವಾರ ರಾತ್ರಿಯೆಲ್ಲಾ ಅಬ್ಬರಿಸಿದ್ದ ಮಳೆ ಶನಿವಾರ ಬೆಳಗ್ಗೆ ಕೊಂಚ ವಿರಾಮ ನೀಡಿತ್ತು. ಸಂಜೆ ಮೋಡ ಕವಿದ ವಾತಾವರಣವಿದ್ದು, ಜೋರು ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್, ಕೋರಮಂಗಲ, ಎಚ್ಎಸ್ಆರ್ ಬಡಾವಣೆ, ವಿಧಾನಸೌಧ, ಲಕ್ಕಸಂದ್ರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು.
ನಾಗರಬಾವಿ, ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್ ಆರ್ ನಗರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ. ಇನ್ನು, ಅಬ್ಬರದ ಮಳೆಗೆ ರಸ್ತೆಗಳೆಲ್ಲ ಬಹುತೇಕ ನದಿಗಳಂತಾಗಿವೆ.
ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಹೆಚ್ಚಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಈ ಹಿನ್ನಲೆ ಮುಂದಿನ 24 ಗಂಟೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಅ. 10ರಿಂದ 13ರವರೆಗೂ ಕರ್ನಾಟಕದ ಬಹುತೇಕ ಕಡೆ ಮಳೆಯ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಮಳೆ ಹೆಚ್ಚಾಗಲಿದೆ. ಈ ಮೂರು ಜಿಲ್ಲೆಗಳಲ್ಲಿ ಅ. 11ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ