news18-kannada Updated:October 21, 2020, 3:58 PM IST
ಬೆಂಗಳೂರಿನಲ್ಲಿ ಮಳೆಯಿಂದ ಮುಳುಗಿದ ಕಾರು
ಬೆಂಗಳೂರು(ಅ.21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ಹಲವೆಡೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ಅದರಲ್ಲೂ ಪ್ರಮುಖವಾಗಿ ಕೋರಮಂಗಲ ಸುತ್ತಮುತ್ತ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿತ್ತು. ರಾಜ್ಯದಲ್ಲಿ ಮಳೆರಾಯನ ರುದ್ರ ನರ್ತನ ಮುಂದುವರೆದಿದೆ. ಕಳೆದ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆರಾಯ ಜನ ಜೀವನವನ್ನ ಅಸ್ತವ್ಯಸ್ತಗೊಳಿಸಿದ್ದಾನೆ. ಅದೇ ರೀತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಹ ಕಳೆದ ಎರಡು ದಿನಗಳಿಂದ ಜೋರು ಮಳೆಯಾಗುತ್ತಿದೆ. ನಿನ್ನೆ ಮಂಗಳವಾರ ಸಂಜೆ ಸುರಿದ ಮಳೆಯಿಂದ ಸಿಲಿಕಾನ್ ಸಿಟಿ ಸಂಪೂರ್ಣ ಜಲಮಯವಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ಧಾರಾಕಾರವಾಗಿ ಬಿದ್ದ ಮಳೆಯಿಂದಾಗಿ ಎಲ್ಲೆಡೆ ಭಾರಿ ಅವಾಂತರ ಸೃಷ್ಟಿಯಾಗಿದೆ.
ಪ್ರಮುಖವಾಗಿ ನಗರದ ಹೈಪೈ ಏರಿಯಾಗಳಲ್ಲಿ ಒಂದಾದ ಕೋರಮಂಗಲ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಆಧಿಕ ಮಳೆಯಾಗಿದ್ದು ಅಲ್ಲಿನ ಬಹುತೇಕ ರಸ್ತೆಗಳು, ಕಟ್ಟಡಗಳು ಜಲಾವೃತವಾಗಿದ್ದವು. ಕೋರಮಂಗಲ 4ನೇ ಬ್ಲಾಕ್ ನ 80 ಅಡಿ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದು ಉತ್ತರ ಕರ್ನಾಟಕದ ಪ್ರವಾಹದ ಚಿತ್ರಣವನ್ನ ನೆನಪಿಸುವಂತಿತ್ತು. ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ.ಗು ಹೆಚ್ಚು ನೀರು ನಿಂತಿದ್ದರಿಂದ ಕೆಲವು ವಾಹನಗಳು ನೀರಿನಲ್ಲಿ ಸಂಚರಿಸಿ ಕೆಟ್ಟು ನಿಂತಿದ್ದವು. ಕಳೆದ ರಾತ್ರಿ ಸುಮಾರು 4 ಗಂಟೆಗು ಅಧಿಕ ಕಾಲ ಮಳೆ ಸುರಿದಿದ್ದರಿಂದ ಕೋರಮಂಗಲದ 8 ಮತ್ತು 10 ನೇ ಮುಖ್ಯರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ರಸ್ತೆ ಬದಿಯ ಮನೆಗಳಿಗೆ ನೀರು ನುಗ್ಗಿದೆ.
ವಿವಿಗಳ ಅಭಿವೃದ್ಧಿ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಮಗ್ರ ಅನುಷ್ಠಾನ: ಡಿಸಿಎಂ ಅಶ್ವತ್ಥ ನಾರಾಯಣ
ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತಳಮಹಡಿ ಖಾಲಿ ಮಾಡಿ ಮೊದಲ ಮಹಡಿಗಳಿಗೆ ಶಿಫ್ಟ್ ಅಗಬೇಕಾಗಿತ್ತು. ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ನಿದ್ದೆ ಇಲ್ಲದೆ ಜಾಗರಣೆ ಮಾಡುವಂತೆ ಮಾಡಿದ ವರುಣ ಸ್ಥಳೀಯರ ಅಕ್ರೋಶಕ್ಕೂ ಕಾರಣವಾಗಿದ್ದ. ಮನೆಗಳಲ್ಲದೆ ರಸ್ತೆ ಬದಿಯ ಅಪಾರ್ಟ್ಮೆಂಟ್ ಗಳು, ಬ್ಯಾಂಕ್ ಗಳ ಬೇಸ್ಮೆಂಟ್, ಹೊಟೇಲ್ ಸೇರಿ ಹಲವು ಕಚೇರಿಗಳ ತಳಮಹಡಿಗಳು ನೀರಿನಿಂದ ತುಂಬಿ ತುಳುಕುತ್ತಿದ್ದವು.
ಇನ್ನು ಮಳೆಯಿಂದಾಗಿ ಬಾರಿ ಅವಾಂತರ ಸೃಷ್ಟಿಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಬಿಬಿಎಂಪಿ ಆಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ರಸ್ತೆಯಲ್ಲಿ ನಿಂತಿದ್ದ ನೀರು ಖಾಲಿ ಮಾಡಿ ರಸ್ತೆ ಗುಂಡಿ ಮತ್ತು ಹಳ್ಳ ಕೊಳ್ಳಗಳನ್ನ ಜೆಸಿಬಿ ಮೂಲಕ ಮುಚ್ಚಿಸಿದರು. ಇನ್ನೂ ಪ್ರತಿ ವರ್ಷ ಮಳೆ ಬಂದಾಗ ಇಂತಹ ಪರಿಸ್ಥಿತಿ ಮರುಕಳಿಸುತ್ತಿದ್ದು ಯಾರು ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
Published by:
Latha CG
First published:
October 21, 2020, 3:51 PM IST