ಆಶ್ಲೇಷ ಮಳೆ ಅಬ್ಬರ: ಜಲಾಶಯಗಳ ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳ; ನದಿ ಪಾತ್ರದ ಜನರಿಗೆ ಎಚ್ಚರಿಕೆ

news18
Updated:August 10, 2018, 11:28 AM IST
ಆಶ್ಲೇಷ ಮಳೆ ಅಬ್ಬರ: ಜಲಾಶಯಗಳ ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳ; ನದಿ ಪಾತ್ರದ ಜನರಿಗೆ ಎಚ್ಚರಿಕೆ
news18
Updated: August 10, 2018, 11:28 AM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಆ.10): ರಾಜ್ಯದಲ್ಲಿ ಆಶ್ಲೇಷ ಮಳೆ ಅಬ್ಬರ ಜೋರಾಗಿದ್ದು, ಮಳೆಯ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಮಡಿಕೇರಿ, ಕೊಡಗು ಚಿಕ್ಕಮಗಳೂರಿನಲ್ಲಿ ಬಹುತೇಕ ನದಿಗಳು ಉಕ್ಕಿಹರಿಯುತ್ತಿರುವುದರಿಂದ ಸೇತುವೆಗಳು ಮುಳಗಡೆಗೊಂಡು ಅನೇಕ ಕಡೆ ಸಂಚಾರ ಮಾರ್ಗ ಬಂದ್​ ಆಗಿದೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದ್ದು, ಪರ್ಯಾಯ ರಸ್ತೆ ಮಾರ್ಗ ಬಳಸುವಂತೆ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ನೀಡಿದ್ದಾರೆ,

ರಸ್ತೆಗಳು ಬಂದ್​:  ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಕೆಲವೆಡೆ ಭೂಕುಸಿತ ಉಂಟಾಗಿದ್ದು, ಮರಗಿಡಗಳು ಧರೆಗೆ ಉರುಳಿದೆ., ಇನ್ನು ಕೆಲವೆಡೆ ವಿದ್ಯುತ್​ ಸಂಪರ್ಕ ಕಡಿತಗೊಂಡಿದ್ದು, ಜನರು ಪರದಾಡುವಂತೆ ಆಗಿದೆ.

ಹಾಸನದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಮುಳುಗಡೆಯಾಗಿದೆ. ಅಲ್ಲದೇ ಎಡಕುಮೇರಿ ಹಾಗೂ ಅರೆಬೆಟ್ಟ ನಡುವೆ ರೈಲು ಹಳಿ ಮೇಲೆ ಮಣ್ಣು ಕುಸಿದ ಪರಿಣಾಮ ಸಕಲೇಶಪುರ- ಕುಕ್ಕೆ ಸುಬ್ರಮಣ್ಯ ರಸ್ತೆ ಬಂದ್​ ಮಾಡಲಾಗಿದೆ.

ಜಲಾಶಯಗಳ ಹೊರ ಹರಿವಿನಲ್ಲಿ ಹೆಚ್ಚಳ: ಕೇರಳದಲ್ಲಿಯೂ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ಜಲಾಶಯಗಳ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಮೊದಲು ಭರ್ತಿಯಾದ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಈ ಹಿನ್ನಲೆ 82 ಸಾವಿರ ಕ್ಯೂಸೆಕ್ಸ್​ ನೀರನ್ನು ಅಣೆಕಟ್ಟಿನಿಂದ ಹೊರಗೆ ಬಿಡಲಾಗುತ್ತಿದೆ.ಶಿವಮೊಗ್ಗದಲ್ಲಿಯೂ ಅಧಿಕ ಮಳೆಯಾಗುತ್ತಿದ್ದು ಗಾಜನೂರಿನ ತುಂಗಾ ಜಲಾಶಯಕ್ಕೆ ಅತಿಹೆಚ್ಚಿನ ನೀರು ಹರಿದು ಬರುತ್ತಿದೆ. ಈ ಹಿನ್ನಲೆ ಡ್ಯಾಂನ 10 ಗೇಟ್​ ಮೂಲಕ ನೀರು ಹೊರಗೆ ಹರಿಸಲಾಗುತ್ತಿದೆ.

ಸತತ ಮಳೆ ಜೊತೆಯಲ್ಲಿ ಅಣೆಕಟ್ಟಿನಿಂದ ಅಧಿಕ ನೀರು ಹೊರ ಬರುತ್ತಿರುವ ಹಿನ್ನಲೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೆಲವೆಡೆ ನೀರುಗಳು ಕೃಷಿ ಜಮೀನಿಗೆ ನುಗ್ಗಿದ್ದು, ಅಪಾರ ಹಾನಿಯಾಗಿದೆ.ಆ.13ರವರೆಗೂ  ಮಲೆನಾಡು, ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರೆಯಲಿದ್ದು,  ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...