ವಿಜಯಪುರದ ಆಲಮೇಲದಲ್ಲಿಂದು ಗರಿಷ್ಠ ಉಷ್ಣಾಂಶ ದಾಖಲು; ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಭೀತಿ

Heat Wave: ಬಿಸಿ ಗಾಳಿ ಹೆಚ್ಚಿರುವುದರಿಂದ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಹೊರಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು.  ಸಾಕಷ್ಟು ನೀರು, ಉಪ್ಪು ಮಿಶ್ರಿತ ಮಜ್ಜಿಗೆ, ಗ್ಲೂಕೋಸ್ ನೀರನ್ನು ಜೊತೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಎಂದು ಸೂಚಿಸಲಾಗಿದೆ.

news18-kannada
Updated:May 24, 2020, 11:00 PM IST
ವಿಜಯಪುರದ ಆಲಮೇಲದಲ್ಲಿಂದು ಗರಿಷ್ಠ ಉಷ್ಣಾಂಶ ದಾಖಲು; ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಭೀತಿ
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ (ಮೇ. 24): ಕೊರೋನಾ ಹೊಡೆತದಿಂದ ತತ್ತರಿಸಿರುವ ಜನರಿಗೆ ಮುಂದಿನ 5 ದಿನಗಳಲ್ಲಿ ಸೂರ್ಯದೇವ ತನ್ನ ಶಾಕ್ ನೀಡಲು ಸಿದ್ಧನಾಗಿದ್ದಾನೆ.  ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಭಾನುವಾರ ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ 45.3 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಜನ ಬೆಚ್ಚಿ ಬೀಳುವಂತೆ ಮಾಡಿದೆ.

ಮುಂದಿನ 3-4 ದಿನಗಳಲ್ಲಿ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಾಗುವ ಜೊತೆಗೆ ಬಿಸಿಗಾಳಿ ಬೀಸಲಿದ್ದು, ಎಚ್ಚರಿಕೆ ವಹಿಸುವಂತೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರ ವರದಿಯಲ್ಲಿ ಎಚ್ಚರಿಕೆ ನೀಡಿದೆ. ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾಹಿತಿ ನೀಡಿದ್ದಾರೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಕಂಡುಬಂದಿದೆ.  ಮೇ. 23 ರಂದು ಸಾಮಾನ್ಯಕ್ಕಿಂತ 1.6 ರಿಂದ 3.0 ಡಿಗ್ರಿ ಸೆಲ್ಷಿಯಸ್​ನಷ್ಟು ಉಷ್ಣಾಂಶ ಹೆಚ್ಚಾಗಿದೆ.  ಉತ್ತರ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಪಕ್ಕದ ಮಹಾರಾಷ್ಟ್ರ ಮತ್ತು ತೆಲಂಗಾಣ ಭಾಗಗಳಿಂದ ಮತ್ತು ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಯಲಸೀಮಾ ಭಾಗದಿಂದ ಬಿಸಿಗಾಳಿ ಬೀಸಿದೆ.

ಇದನ್ನೂ ಓದಿ: Heatwave: ಬಿಸಿಗಾಳಿಯಿಂದ ಉತ್ತರ ಭಾರತದಲ್ಲಿ ರೆಡ್ ಅಲರ್ಟ್​ ಘೋಷಣೆ; ಕರ್ನಾಟಕದಲ್ಲೂ ಎಚ್ಚರಿಕೆ!

ಮೇ. 23 ರಂದು ಶನಿವಾರ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ 45.2 ಡಿ. ಸೆ. ಉಷ್ಣಾಂಶ ದಾಖಲಾಗಿತ್ತು  ರಾಜ್ಯದ ಶೇ. 30ಕ್ಕೂ ಹೆಚ್ಚು ಭೂಪ್ರದೇಶದಲ್ಲಿ 40 ಡಿ. ಸೆ. ಗೂ ಹೆಚ್ಚು ಉಷ್ಣಾಂಶ ದಾಖಲಾಗಿದೆ.  ಮೇ. 24ರ ರವಿವಾರ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ 45.3 ಡಿ. ಸೆ. ಉಷ್ಣಾಂಶ ದಾಖಲಾಗಿದೆ.  ಅಷ್ಟೇ ಅಲ್ಲ, ಮುಂದಿನ ಮೂರು ದಿನಗಳಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಾಲಿ ಉಷ್ಣಾಂಶಕ್ಕಿಂತ 1.6 ರಿಂದ 3 ಡಿ. ಸೆ. ತಾಪಮಾನ ಹೆಚ್ಚಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೊರೋನಾ ಹೊಡೆತಕ್ಕೆ ಮಂಕಾಯ್ತು ಬಾಗಲಕೋಟೆ ನೆರೆ ಸಂತ್ರಸ್ತರ ಬದುಕು!

ಮುಂದಿನ ಮುಂದಿನ 3 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಬೇಕು.  ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ದಿನಗಳಲ್ಲಿ ಶಾಲೆ, ಸರಕಾರಿ ಕಚೇರಿಗಳ ಸಮಯವನ್ನು ಪುನರ್ ನಿಗದಿ ಪಡಿಸಬೇಕು. ನರೇಗಾ ಯೋಜನೆಯಡಿ ಸಮಯವನ್ನು ಬದಲಾಯಿಸಬೇಕು.  ಜನರಲ್ಲಿ ಬಿಸಿಗಾಳಿ ಮತ್ತು ಬಳಲಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು.  ಆಯಕಟ್ಟಿನ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸಾಕಷ್ಟು ಓ ಆರ್ ಎಸ್ ವ್ಯವಸ್ಥೆ ಮಾಡಬೇಕು.  ಕಾರ್ಮಿಕರಿಗೆ ಕೆಲಸದ ಒತ್ತಡ ತಡೆದು ಪೂರ್ಣ ಪ್ರಮಾಣದಲ್ಲಿ ವೇತನ ನೀಡಬೇಕು. ಈ ಸಮಯದಲ್ಲಿ ನೆರಳು ಇರುವ ಕಡೆ ಇರಲು ಪ್ರಯತ್ನಿಸಬೇಕು.  ಛತ್ರಿ (ಕೊಡೆ) ಬಳಸಬೇಕು.  ಕಾಟನ್ ಮತ್ತು ಲೂಸ್ ಆಗಿರುವ ಬಟ್ಟೆಗಳನ್ನು ಅದರಲ್ಲೂ ಬಿಳಿ ಬಣ್ಣದ ಬಟ್ಟೆಗಳನ್ನು ಬಳಸಬೇಕು.  ತಲೆಗೆ ಕಾಟನ್ ಬಟ್ಟೆಯ ಟೋಪಿ ಹಾಕಿಕೊಳ್ಳಬೇಕು ಅಥವಾ ರುಮಾಲು (ಪೇಟ) ಸುತ್ತಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಹೊರಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು.  ಸಾಕಷ್ಟು ನೀರು, ಉಪ್ಪು ಮಿಶ್ರಿತ ಮಜ್ಜಿಗೆ, ಗ್ಲೂಕೋಸ್ ನೀರನ್ನು ಜೊತೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.  ಕೋಣೆಗಳಲ್ಲಿಯೂ ಗಾಳಿ ಹೆಚ್ಚು ಬರಲು ಸೂಕ್ತ ಕ್ರಮ ಕೈಗೊಳ್ಳಬೇಕು.  ಬಿಸಿಲಿನ ಸಮಸ್ಯೆ ಎದುರಿಸುವವರನ್ನು ನೆರಳಿನ ಕಡೆಗೆ ಇರಲು ಸೂಚಿಸಬೇಕು ಎಂದು ವರದಿಯಲ್ಲಿ ಸೂಚನೆಗಳನ್ನು ನೀಡಲಾಗಿದೆ.


First published: May 24, 2020, 10:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading