News18 Impact: ಕೋಲಾರ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಅಮಾನತು; ತಡರಾತ್ರಿ 12 ಗಂಟೆ ವೇಳೆ ಸಚಿವ ಸುಧಾಕರ್ ಆದೇಶ

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಜೊತೆಗೆ ಅವರ ಸಂಬಂಧಿಕರನ್ನ ಇರಿಸಿಕೊಂಡಿದ್ದಾರೆ. ಇದು ಮೊದಲನೆಯ ತಪ್ಪಾಗಿದೆ, ಇಂತಹ ಬೆಳವಣಿಗೆಯನ್ನು ನಾನು ಎಲ್ಲೂ ಗಮನಿಸಿಲ್ಲ, ಇದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ಡಾ. ಕೆ ಸುಧಾಕರ್

ಡಾ. ಕೆ ಸುಧಾಕರ್

  • Share this:
ಕೋಲಾರ(ಏ.27): ಕೋಲಾರ ಜಿಲ್ಲಾಸ್ಪತ್ರೆಯ ಕೋವಿಡ್ -19 ಐಸೋಲೇಷನ್ ವಾರ್ಡ್​​ನಲ್ಲಿ ಕಳೆದ ಎರಡು  ದಿನದ ಹಿಂದೆ,  ಆಕ್ಸಿಜನ್ ಕೊರತೆಯಿಂದ ಮೂವರು ಸೋಂಕಿತರು ಸಾವನ್ನಪ್ಪಿದ್ದರು. ಈ ಹಿನ್ನೆಲೆ, ಆಸ್ಪತ್ರೆಗೆ ನಿನ್ನೆ ರಾತ್ರಿ 11 ಗಂಟೆಗೆ ಆರೋಗ್ಯ ಸಚಿವ  ಡಾ.ಸುಧಾಕರ್ ಭೇಟಿ ನೀಡಿದ್ದರು. ಸಚಿವರು ಬರುತ್ತಿದ್ದಂತೆಯೇ, ವೃದ್ದೆಯೊಬ್ಬರು ಸಚಿವ ಸುಧಾಕರ್ ಕಾಲಿಗೆ ಬೀಳಲು  ಮುಂದಾದರು. ಖಾಸಗಿ ಆಸ್ಪತ್ರೆಯಲ್ಲಿ  ಆಕ್ಸಿಜನ್, ಬೆಡ್ ಇಲ್ಲ ಅಂತಿದ್ದಾರೆ. ನಮ್ಮವರಿಗೆ ಐಸಿಯುನಲ್ಲಿ ಬೆಡ್ ಬೇಕು. ಅವರನ್ನ ಉಳಿಸಿ ಎಂದು ವೃದ್ದೆ ಕೇಳಿಕೊಂಡರು. ಬಳಿಕ ವೈದ್ಯರನ್ನ ಕರೆಸಿ ಸಮಸ್ಯೆ ಬಗೆಹರಿಸಲು ಸಚಿವರು ಸೂಚನೆ‌ ನೀಡಿದರು.

ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ರಾತ್ರಿ 11.15 ರ ವೇಳೆಯಲ್ಲಿ  ಸಭೆ ‌ನಡೆಸಿದ ಸಚಿವ ಡಾ ಸುಧಾಕರ್ ರಾತ್ರಿ 12.30  ಕ್ಕೆ ಸಭೆ ಮುಗಿಸಿದರು.  ಸಭೆಯಲ್ಲಿ ಡಿಸಿ ಆರ್‌ ಸೆಲ್ವಮಣಿ, ಎಸ್ಪಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಆರೋಗ್ಯ ಅಧಿಕಾರಿ ವಿಜಯ್ ಕುಮಾರ್, ವಿವಿಧ ವಿಭಾಗಗಳ ವೈದ್ಯರು, ಸಿಬ್ಬಂದಿ ಭಾಗಿಯಾಗಿದ್ದರು. ಸಭೆಯಲ್ಲಿ ಪ್ರಮುಖವಾಗಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ಸಿಟ್ಟು ಹೊರಹಾಕಿದ ಸಚಿವರು, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ಸಭೆ ನಂತರ ಮಾತನಾಡಿದ ಸಚಿವರು, ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಜೊತೆಗೆ ಅವರ ಸಂಬಂಧಿಕರನ್ನ ಇರಿಸಿಕೊಂಡಿದ್ದಾರೆ. ಇದು ಮೊದಲನೆಯ ತಪ್ಪಾಗಿದೆ, ಇಂತಹ ಬೆಳವಣಿಗೆಯನ್ನು ನಾನು ಎಲ್ಲೂ ಗಮನಿಸಿಲ್ಲ, ಇದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ನಂತರ ರಾಜ್ಯ ಸರ್ಕಾರ ವೆಂಟಿಲೇಟರ್​ಗಳನ್ನು ಕಳುಹಿಸಿತ್ತು.  ಆಕ್ಸಿಜನ್ ಲೈನ್ ದೋಷವಿದೆ ಎಂದು 40 ವೆಂಟಿಲೇಟರ್​​ಗಳನ್ನು ಬಳಸದೆ ಹಾಗೆಯೇ ಇರಿಸಿಕೊಂಡಿದ್ದಾರೆ, ಇದು ಎರಡನೇಯ ತಪ್ಪಾಗಿದೆ. 40 ಆಕ್ಸಿಜನ್ ಎಂದರೆ 40 ಜನರ ಪ್ರಾಣ ಉಳಿಸುವ ಸಾಧನ. ಬೆಂಗಳೂರಿನಲ್ಲಿ ಒಂದು ಬೆಡ್ ಸಿಗದೆ  ರೋಗಿಗಳು ಪರದಾಡುತ್ತಿದ್ದಾರೆ.  ಇಲ್ಲಿನ ಸಮಸ್ಯೆಯನ್ನು ಕೂಡಲೇ ತಾಂತ್ರಿಕ ವರ್ಗದ ಸಿಬ್ಬಂದಿ ಜೊತೆಗೆ ಚರ್ಚಿಸಿ ಶೀಘ್ರವಾಗಿ ವೆಂಟಿಲೇಟರ್ ಉಪಯೋಗಕ್ಕೆ ಬರುವಂತೆ ಕ್ರಮ ವಹಿಸುವೆ ಎಂದರು.

ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ 10 ಸಾವಿರ ರೂ. ಆರ್ಥಿಕ ನೆರವು ಘೋಷಿಸಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ, ಜಿಲ್ಲಾಸ್ಪತ್ರೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು,  ಮೃತರು ಆಕ್ಸಿಜನ್ ಸಮಸ್ಯೆಯಿಂದಲೇ ಸಾವನ್ನಪ್ಪಿದ್ದಾರೆ ಎನ್ನಲು ಆಗಲ್ಲ. ಆಸ್ಪತ್ರೆಗೆ ಬಂದಾಗ ಇಬ್ಬರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ. ಸೋಂಕಿತರ  ಡೆತ್ ರಿಪೋರ್ಟ್ ಕೊಡಲು  ಹೇಳಿದ್ದೇನೆ. ಪ್ರತಿ ಸಾವಿನ ಡೆತ್ ಬಗ್ಗೆಯೂ ಆಡಿಟ್ ನಡೆಸಲೇಬೇಕು. ನಿರ್ಲಕ್ಷ್ಯ ಆಗಿದ್ದಲ್ಲಿ, ಸೋಂಕಿತರ ಸಾವಿನ ಬಗ್ಗೆ ಕೂಲಂಕುಷ ತನಿಖೆ ನಡೆಸುವೆ ಎಂದು ಭರವಸೆ ನೀಡಿದರು.

ಇನ್ನು  ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಹಲವು ನ್ಯೂನ್ಯತೆಗಳು ಇದೆಯೆಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಆ್ಯಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ, ಬೆಡ್ ಸಮಸ್ಯೆ, ತಜ್ಞರ ಸಮಸ್ಯೆ ಇಂತಹ ಸಮಸ್ಯೆಗಳು ಆಸ್ಪತ್ರೆಯಲ್ಲಿ ರೋಗಿಗಳನ್ನ ಕಾಡುತ್ತಿದೆ. ಎರಡು ದಿನದ ಹಿಂದೆ ಐಸಿಯು ಕೇಂದ್ರದಲ್ಲಿ ಆ್ಯಕ್ಸಿಜನ್ ಸಿಗದ ಮೂವರು ಸಾವನ್ನಪ್ಪಿದ್ದು, ನಿನ್ನೆ ಇಡೀ ದಿನ ಆ ಬಗ್ಗೆ ನ್ಯೂಸ್ 18 ಕನ್ನಡ ವಿಸ್ತೃತ ವರದಿ ಪ್ರಸಾರ ಮಾಡಿತ್ತು,  ಇದೀಗ ಎಚ್ಚೆತ್ತುಕೊಂಡ ಸಚಿವ ಸುಧಾಕರ್,  ಸೋಂಕಿತರ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ  ಜಿಲ್ಲಾಸ್ಪತ್ರೆ ವೈದ್ಯಾದಿಕಾರಿ ಡಾ SG ನಾರಾಯಣಸ್ವಾಮಿ ಮತ್ತು ಆರ್ ಎಮ್ ಒ. ಡಾ ನಾರಾಯಣಸ್ವಾಮಿ ಇಬ್ಬರು ವೈದ್ಯಾಧಿಕಾರಿಗಳನ್ನ ಅಮಾನತು ಮಾಡಿರುವುದಾಗಿ ತಿಳಿಸಿದರು.

ಇಬ್ಬರು ಅಧಿಕಾರಿಗಳ ನಿವೃತ್ತಿಗೆ ಕೇವಲ 3 ತಿಂಗಳಿದೆ ಎನ್ನುವ ಉದ್ದೇಶದಿಂದ, ಸೋಂಕಿತರಿಗೆ ಚಿಕಿತ್ಸೆ ಕೊಡಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು ಕಂಡುಬಂದಿದೆ, ಹಾಗಾಗಿ ಅಮಾನತು ಮಾಡಿ  ಒಳ್ಳೆಯ ಅಧಿಕಾರಿಗಳನ್ನ ನೇಮಿಸುವುದಾಗಿ ತಿಳಿಸಿದ್ದಾರೆ.
Published by:Latha CG
First published: