ಬೆಂಗಳೂರು(ಏ. 07): ಸರ್ಕಾರ ಮತ್ತು ಸಾರಿಗೆ ನೌಕರರ ಮಧ್ಯೆ ಉತ್ತಮ ಬಾಂಧವ್ಯ ಇದೆ. ಈ ಸಂಬಂಧವನ್ನು ಕೆಡಿಸಲು ನಕಲಿ ಹೋರಾಟಗಾರರ ಕಿಮ್ಮತ್ತು ಇದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕಿಡಿಕಾರಿದರು. ನ್ಯೂಸ್18 ಕನ್ನಡದ ಜೊತೆ ಮಾತನಾಡುತ್ತಿದ್ದ ಸಚಿವ ಸುಧಾಕರ್, ರಾಜಕೀಯ ಆಟಗಳಿಗೆ ಸಾರಿಗೆ ನೌಕರರು ದಾಳಗಳಾಗವಾರದು ಎಂದು ಸರ್ಕಾರ ನಿನ್ನೆ ನೀಡಿದ್ದ ಎಚ್ಚರಿಕೆಯನ್ನು ಪುನರುಚ್ಚರಿಸಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಕಲಿ ಹೋರಾಟಗಾರರು ಬಂದಿದ್ದಾರೆ. ಹೀಗಾಗಿ ಅವರ ಬಗ್ಗೆ ಸಾರಿಗೆ ನೌಕರರು ಎಚ್ಚರ ವಹಿಸಬೇಕು. ಈ ನಕಲಿ ಹೋರಾಟಗಾರರ ಮಾತುಗಳನ್ನ ಕಟ್ಟುಕೊಂಡು ಸರ್ಕಾರದ ವಿರುದ್ಧ ನಿಲ್ಲುವ ಧೋರಣೆ ಸರಿಯಲ್ಲ ಎಂದು ಆರೋಗ್ಯ ಸಚಿವರು ಕಿವಿಮಾತು ಹೇಳಿದರು.
ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ ಎಂಟು ಬೇಡಿಕೆಗಳನ್ನ ಸರ್ಕಾರ ಈಗಾಗಲೇ ಈಡೇರಿಸಿದೆ. ಇನ್ನುಳಿದ ಬೇಡಿಕೆ ಈಡೇರಿಸಲು ಸ್ವಲ್ಪ ಕಾಲಾವಕಾಶ ಕೇಳಿದೆ. ಅಲ್ಲಿಯವರೆಗೂ ನೌಕರರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದ ಡಾ. ಕೆ ಸುಧಾಕರ್, ಸರ್ಕಾರಕ್ಕೆ ನಿಮ್ಮ ಬಗ್ಗೆ ಕಾಳಜಿ ಇದೆ. ಇದನ್ನು ಅರ್ಥ ಮಾಡಿಕೊಂಡು ಕರ್ತವ್ಯಕ್ಕೆ ತೊಡಗಿಸಿಕೊಳ್ಳಿ ಎಂದು ಸಾರಿಗೆ ನೌಕರರಿಗೆ ಕರೆ ನೀಡಿದರು.
ಇದನ್ನೂ ಓದಿ: KSRTC Workers Strike - ಮುಷ್ಕರ ಎಫೆಕ್ಟ್ - ಖಾಸಗಿ ಬಸ್ಗಳು ಬಂದರೂ ನಿಲ್ದಾಣಕ್ಕೆ ಬಾರದ ಜನರು
ಸಾರಿಗೆ ನೌಕರರು ಮುಂದಿಟ್ಟಿರುವ 9 ಪ್ರಮುಖ ಬೇಡಿಕೆಗಳ ಪೈಕಿ 6ನೇ ವೇತನ ಆಯೋಗ ವರದಿ ಅನ್ವಯ ಮಾಡುವುದು ಬಿಟ್ಟು ಉಳಿದವನ್ನು ಈಡೇರಿಸಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಆರನೇ ವೇತನ ಜಾರಿ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಶೇ. 8ರಷ್ಟು ಸಂಬಳ ಹೆಚ್ಚಳಕ್ಕೆ ಸಿದ್ಧ ಎಂದು ಹೇಳಿದೆ. ಆದರೆ, ಸಾರಿಗೆ ನೌಕರರ ಮುಖಂಡರು ಸರ್ಕಾರದ ಮಾತುಗಳನ್ನ ತಿರಸ್ಕರಿಸಿದ್ದಾರೆ. ಆರನೇ ವೇತನ ಜಾರಿ ಇರಲಿ ಉಳಿದ ಎಂಟು ಬೇಡಿಕೆಗಳನ್ನೂ ಸರ್ಕಾರ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಸುಮ್ಮನೆ ಸುಳ್ಳು ಹೇಳುತ್ತಿದೆ. ಮೂರು ತಿಂಗಳು ಕಾಲಾವಕಾಶ ನೀಡಿದ್ದರೂ ಸರ್ಕಾರ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ನಿನ್ನೆ ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದ ನಾಯಕರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದಿನಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಸಾರಿಗೆ ನಿಗಮಗಳ ಬಹುತೇಕ ಬಸ್ಸುಗಳು ರಸ್ತೆಗಳಿದಿಲ್ಲ. ಸರ್ಕಾರ ಖಾಸಗಿ ಬಸ್ಸುಗಳ ವ್ಯವಸ್ಥೆ ಮಾಡಿದ್ದರೂ ಹಲವು ಕಡೆ ಪ್ರಯಾಣಿಕರಿಗೆ ನಿಗದಿತ ಸ್ಥಳ ತಲುಪಲು ಬಸ್ ಇಲ್ಲದೇ ಪರದಾಡುತ್ತಿರುವುದು ಕಂಡುಬಂದಿದೆ. ಇನ್ನೂ ಹಲವೆಡೆ ಖಾಸಗಿ ಬಸ್ಸುಗಳಿದ್ದರೂ ಪ್ರಯಾಣಿಕರ ಸುಳಿವೇ ಇಲ್ಲದಿರುವ ಸ್ಥಿತಿ ಇದೆ. ಬೆಂಗಳೂರಿನಲ್ಲಿ 6 ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳಿದ್ದು, ಅವುಗಳ ಪೈಕಿ ಬೆಳಗ್ಗೆ 9ರವರೆಗೆ ರಸ್ತೆಗೆ ಇಳಿದದ್ದು ಸುಮಾರು ಇಪತ್ತು ಮಾತ್ರ. ಇದು ಮುಷ್ಕರಕ್ಕೆ ಸಾರಿಗೆ ನೌಕರರು ನೀಡಿರುವ ಬೆಂಬಲಕ್ಕೆ ನಿದರ್ಶನ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ