news18-kannada Updated:March 6, 2021, 6:03 PM IST
ಸಚಿವ ಕೆ. ಸುಧಾಕರ್.
ಬೆಂಗಳೂರು (ಮಾ. 6): ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ನಗರದಲ್ಲಿ ಇನ್ನೆರಡು ತಿಂಗಳು ಯಾವುದೇ ಪ್ರತಿಭಟನೆ, ಗುಂಪು ಸೇರುವ ಕ್ರಮಗಳಿಗೆ ತಡೆ ನೀಡುವಂತೆ ತಾಂತ್ರಿಕ ಸಮಿತಿ ಸಲಹೆ ನೀಡಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು. ನಗರದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಪ್ರತಿದಿನ 200ರಿಂದ ಈಗ 450ಕ್ಕೆ ಏರಿಕೆ ಆಗುತ್ತಿದೆ. ಈ ಹಿನ್ನಲೆ ಜನರು ಗುಂಪುಗೂಡುದಂತೆ ಎಚ್ಚರವಹಿಸುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದ್ದು, ಅದರ ಪಾಲನೆ ಮಾಡಬೇಕಾಗಿದೆ. ಈ ಕುರಿತು ಸಿಎಂ ಜೊತೆಗೆ ಚರ್ಚಿಸುತ್ತೇನೆ. ಈ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಆದರೆ ಈ ಸಮಯ ಸಂದರ್ಭ ಸರಿಯಿಲ್ಲ. ಇನ್ನೆರಡು ತಿಂಗಳು ಎಚ್ಚರಿಕೆಯಿಂದ ಇರಬೇಕು. ಹೋರಾಟಗಳು ಇನ್ನೆರಡು ತಿಂಗಳು ಕಾಯಬಹುದು. ಈ ಬಗ್ಗೆ ಆದೇಶ ಹೊರಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.
ಪ್ರಕರಣ ಹೆಚ್ಚುತ್ತಿರುವ ಬೆಂಗಳೂರಿನ 12 ಕ್ಲಸ್ಟರ್ಗಳು ಗುರುತು ಮಾಡಲಾಗಿದ್ದು, ಈವರೆಗೆ 30 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇನ್ಮೇಲೆ ದಿನಕ್ಕೆ 40 ಸಾವಿರ ಟೆಸ್ಟ್ ಗುರಿ ಇದ್ದು, ತಿಂಗಳ ಮಟ್ಟಿಗೆ ಗುಂಪು ಸೇರಿ ಬರಬೇಡಿ. ಬೆಂಗಳೂರಿಗೆ ಗುಂಪಾಗಿ ಯಾರೂ ಬರಬೇಡಿ. ಮದುವೆಗಳಲ್ಲಿ 500 ಜನರಿಗಿಂತ ಮೀರಬಾರದು. ಮದುವೆ ಮನೆಗಳಲ್ಲಿ ಮಾರ್ಷಲ್ಗಳ ಸಂಖ್ಯೆ ಹೆಚ್ಚಿಸಲಾಗುವುದು. ಪೊಲೀಸರೂ ಈ ನಿಟ್ಟಿನಲ್ಲಿ ಕಣ್ಣಿಡಲಿದ್ದಾರೆ ಎಂದರು.
ಇದನ್ನು ಓದಿ: ಇಷ್ಟಾರ್ಥ ಫಲಿಕೆ: ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ
ಲಸಿಕೆಯ ವಿತರಣೆ, ಶೇಖರಣೆಗೆ ಎಲ್ಲಾ ವ್ಯವಸ್ಥೆ ಆಗಿದೆ.ಬೆಂಗಳೂರು ನಗರ, ದ.ಕ, ಮೈಸೂರು, ಚಾಮರಾಜನಗರ, ಉಡುಪಿ, ಕೊಡಗು, ಬೆಳಗಾವಿ, ತುಮಕೂರು ಜಿಲ್ಲೆಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದ್ದು, ಈ ಜಿಲ್ಲೆಗಳಲ್ಲಿ ಕೋವಿಡ್ ಬಿಗಿ ನಿಯಮ ಪಾಲನೆ ಮಾಡಬೇಕು ಎಂದರು.
ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. 300 ಆಸ್ಪತ್ರೆಗಳಲ್ಲಿ ತರಬೇತಿ ನೀಡಲಾಗಿದೆ. ನಿನ್ನೆ 11 ಸಾವಿರ ಜನ ಬೆಂಗಳೂರು ಜನ ಲಸಿಕೆ ತೆಗೆದುಕೊಂಡಿದ್ದಾರೆ . ಇನ್ನು 60 ದಿನಗಳಲ್ಲಿ ಎಲ್ಲರೂ ಲಸಿಕೆ ಪಡೆದರೆ ಅತೀ ಹೆಚ್ಚು ಜನರಿಗೆ ಲಸಿಕೆ ನೀಡಿದ ರಾಜ್ಯ ನಮ್ಮದಾಗುತ್ತದೆ. ಮಹಾರಾಷ್ಟ್ರ ಮತ್ತು ಕೇರಳದ ಅಪಾಯದಿಂದ ನಾವು ತಪ್ಪಿಸಿಕೊಳ್ಳಬೇಕು. ಸರ್ಕಾರ ಆ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತಿದೆ ಎಂದರು.
Published by:
Seema R
First published:
March 6, 2021, 6:03 PM IST