• Home
  • »
  • News
  • »
  • state
  • »
  • Health Kiosks: ಉದ್ಘಾಟನೆ ಮಾಡಿದ್ದೊಂದೇ ಭಾಗ್ಯ, ಜನರ ಬಳಕೆಗೆ ಸಿಗದೇ ತುಕ್ಕು ಹಿಡಿಯುತ್ತಿವೆ ಹೆಲ್ತ್ ಘಟಕಗಳು!

Health Kiosks: ಉದ್ಘಾಟನೆ ಮಾಡಿದ್ದೊಂದೇ ಭಾಗ್ಯ, ಜನರ ಬಳಕೆಗೆ ಸಿಗದೇ ತುಕ್ಕು ಹಿಡಿಯುತ್ತಿವೆ ಹೆಲ್ತ್ ಘಟಕಗಳು!

ತುಕ್ಕು ಹಿಡಿಯುತ್ತಿರುವ ಹೆಲ್ತ್ ಕಿಯೋಕ್ಸ್

ತುಕ್ಕು ಹಿಡಿಯುತ್ತಿರುವ ಹೆಲ್ತ್ ಕಿಯೋಕ್ಸ್

ಜನರಿಗೆ ಆರೋಗ್ಯವೆನ್ನುವ ಮೂಲಸೌಕರ್ಯ ಕೈಗೆಟುಕುವಲ್ಲಿ ಸಿಗಬೇಕು ಎನ್ನುವ ಉದ್ಧೇಶದಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ 2018ರಲ್ಲಿ ಹೆಲ್ತ್ ಕಿಯೋಕ್ಸ್ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿತ್ತು. ಅಂದಿನ ಆರೋಗ್ಯ ಸಚಿವ, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ‌. ಖಾದರ್ ಈ ಯೋಜನೆ ಬಗ್ಗೆ ಆಸಕ್ತಿ ವಹಿಸಿದ್ದರು. ಆದರೆ ಅವರ ತವರು ಜಿಲ್ಲೆಯಲ್ಲೇ ಯೋಜನೆ ಹಳ್ಳಹಿಡಿದಿದೆ.

ಮುಂದೆ ಓದಿ ...
  • Share this:

ದಕ್ಷಿಣ ಕನ್ನಡ: ಕೇವಲ ಪ್ರಚಾರಕ್ಕಾಗಿ ಜನರ ತೆರಿಗೆ ಹಣವನ್ನು ಜನಪ್ರತಿನಿಧಿಗಳು ಯಾವ ರೀತಿ ಪೋಲು ಮಾಡುತ್ತಿದ್ದಾರೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯೊಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿದೆ. ಸಾರ್ವಜನಿಕರಿಗೆ ತಕ್ಷಣಕ್ಕೆ ಆರೋಗ್ಯ ಸೌಲಭ್ಯಗಳು ಸಿಗಲಿ ಎನ್ನುವ ಕಾರಣಕ್ಕೆ 2018ರಲ್ಲಿ ಅಂದಿನ ಆರೋಗ್ಯ ಇಲಾಖೆ ಹೆಲ್ತ್ ಕಿಯೋಕ್ಸ್ (Health Kiosk) ಎನ್ನುವ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಈ ಸಂಬಂಧ ಆಗಿನ ಆರೋಗ್ಯ ಸಚಿವ (Health Minister) ಯು.ಟಿ. ಖಾದರ್ (U.T. Khader) ಈ ಯೋಜನೆಯನ್ನು ಪ್ರಯೋಗಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಜಾರಿಗೊಳಿಸಿದ್ದರು. ಈ ಯೋಜನೆಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 8 ಹೆಲ್ತ್ ಕಿಯೋಕ್ಸ್ ಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಘಟಕಗಳ ಉದ್ಘಾಟನೆಯೊಂದು ಬಿಟ್ಟರೆ ಮತ್ಯಾವ ಚಟುವಟಿಕೆಗಳೂ ಈ ಘಟಕಗಳ ಮೂಲಕ ನಡೆದಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿರುವ ಈ ಘಟಕಗಳು ಇದೀಗ ತುಕ್ಕು (Rust) ಹಿಡಿಯುತ್ತಿವೆ.


2018ರಲ್ಲಿ ಜಾರಿಗೆ ತಂದಿದ್ದ ಯೋಜನೆ


ಜನರಿಗೆ ಆರೋಗ್ಯವೆನ್ನುವ ಮೂಲಸೌಕರ್ಯ ಕೈಗೆಟುಕುವಲ್ಲಿ ಸಿಗಬೇಕು ಎನ್ನುವ ಉದ್ಧೇಶದಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ 2018 ರಲ್ಲಿ ಹೆಲ್ತ್ ಕಿಯೋಕ್ಸ್ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿತ್ತು. ಅಂದಿನ ಆರೋಗ್ಯ ಸಚಿವ, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ‌. ಖಾದರ್ ಈ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೆ ತರಲು ಉದ್ಧೇಶಿಸಿದ್ದರು. ಇದನ್ನು ಪ್ರಯೋಗಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ತರಲು ಆಗಿನ ಸಚಿವ ಯು.ಟಿ. ಖಾದರ್ ತೀರ್ಮಾನಿಸಿದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ 8 ಹೆಲ್ತ್ ಕಿಯೋಕ್ಸ್ ಗಳನ್ನು ಆರಂಭಿಸಲಾಗಿತ್ತು.


ಉದ್ಘಾಟನೆ ಮಾಡಿದ್ದೊಂದೇ ಭಾಗ್ಯ!


ಅತ್ಯಂತ ಅದ್ಧೂರಿಯಾಗಿ ಈ ಯೋಜನೆಯ ಉದ್ಧಾಟನೆಯನ್ನೂ ಮಂಗಳೂರಿನಲ್ಲಿ ನಡೆಸಲಾಗಿತ್ತು.  ಆದರೆ ಈ ಘಟಕಗಳ ಉದ್ಘಾಟನೆಯೊಂದನ್ನು ಬಿಟ್ಟರೆ ಘಟಕ ಸಾರ್ವಜನಿಕರ ಉಪಯೋಗಕ್ಕಾಗಿ ಒಂದು ದಿನವೂ ಬಳಕೆಯಾಗಿಲ್ಲ. ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ ಪ್ರಕಾರ ಈ ಹೆಲ್ತ್ ಕಿಯೋಕ್ಸ್ ನಲ್ಲಿ ಬ್ಲಡ್ ಟೆಸ್ಟ್, ಬಿ.ಪಿ, ಶುಗರ್ ಟೆಸ್ಟ್ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಲು ಅವಕಾಶವತ್ತು. ಅಲ್ಲದೆ 15 ದಿನಗಳಿಗೊಮ್ಮೆ ಇದರಲ್ಲಿ ವೈದ್ಯರು ಕೂಡಾ ಇರಲಿದ್ದಾರೆ ಎಂದಿದ್ದರು. ಆದರೆ ಉದ್ಘಾಟನೆಯಾಗಿ ನಾಲ್ಕು ವರ್ಷ ಕಳೆದರೂ, ಈವರೆಗೂ ಹೆಲ್ತ್ ಕಿಯೋಕ್ಸ್ ಗಳು ಬಾಗಿಲು ತೆರೆದಿಲ್ಲ.


ಇದನ್ನೂ ಓದಿ: Snake Dance Video: ಹಾವು ಹಿಡಿಯಲು ಬಂದವರ ಮುಂದೆ ಮಹಿಳೆಯರ ನಾಗನೃತ್ಯ! ಇದು ದೇವಿ ಪವಾಡ ಎಂದ ಜನ!


ತುಕ್ಕು ಹಿಡಿಯುತ್ತಿವೆ ಕಿಯೋಕ್ಸ್ ಘಟಕಗಳು


ಸಿದ್ಧ ಪಡಿಸಿದ ಕಿಯೋಕ್ಸ್ ಗಳಲ್ಲಿ ಕೆಲವು ತುಕ್ಕು ಹಿಡಿದಿದ್ದರೆ, ಇನ್ನು ಕೆಲವು ಪೆಟ್ಟಿಗೆ ಅಂಗಡಿಗಳ ಸೋಡಾ ಬಾಟಲಿಗಳನ್ನು ಇಡುವ ಸ್ಥಳವಾಗಿ ಮಾರ್ಪಟ್ಟಿದೆ. ಪ್ರತಿಯೊಂದು ಘಟಕಕ್ಕೂ ಅಂದು ಸುಮಾರು ಐದು ಲಕ್ಷಕ್ಕೂ ಮಿಕ್ಕಿ ಖರ್ಚು ಮಾಡಿಲಾಗಿದ್ದು, ಒಟ್ಟು ಐವತ್ತು ಲಕ್ಷ ರೂಪಾಯಿಗಳನ್ನು ಅಂದು ಈ ಘಟಕಗಳಿಗಾಗಿ ವಿನಿಯೋಗಿಸಲಾಗಿತ್ತು.


ಯುಟಿ ಖಾದರ್ ವಿರುದ್ಧ ಬಿಜೆಪಿ ಆರೋಪ


ಕೇವಲ ಜನರ ಮುಂದೆ ಶೋಕಿ ಮಾಡಲು ಹಾಲಿ ಮಂಗಳೂರು ಶಾಸಕ ಹಾಗೂ ಅಂದಿನ ಆರೋಗ್ಯ ಸಚಿವರು ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಂಗಳೂರು ವಿಧಾನಸಭಾ ವ್ಯಾಪ್ತಿಯಲ್ಲೇ ಎಲ್ಲಾ ಹೆಲ್ತ್ ಕಿಯೋಕ್ಸ್ ಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗಿಲ್ಲ. ಆದರೆ ಶಾಸಕರುವ ತಮ್ಮ ಬೆಂಬಲಿಗರಿಗೆ ಈ ಕಿಯೋಕ್ಸ್ ಗಳ ನಿರ್ಮಾಣದ ಕೆಲಸವನ್ನು ನೀಡುವ ಮೂಲಕ ಜನರ ಹಣವನ್ನು ಪೋಲು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.


ಅನುದಾನದ ಮೂಲದ ಬಗ್ಗೆ ಪ್ರಶ್ನೆ


ಒಂದು ಯೋಜನೆಯನ್ನು ಜಾರಿ ಮಾಡುವಾಗ ಅದರ ಸಾಧಕ-ಬಾಧಕಗಳನ್ನು ವಿಮರ್ಶಿಸದೆ ಈ ಹೆಲ್ತ್ ಕಿಯೋಕ್ಸ್ ಗಳನ್ನು ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆಗೂ ಈ ಕಿಯೋಕ್ಸ್ ಗಳ ನಿರ್ವಹಣೆ ಹೇಗೆ ಎನ್ನುವ ಕುರಿತು ಸ್ಪಷ್ಟತೆ ಇಲ್ಲದಾಗಿದೆ. ಘಟಕ ಕಾರ್ಯನಿರ್ವಹಿಸಲು ಬೇಕಾದ ಅನುದಾನ ಯಾವ ಮೂಲದಿಂದ ಎನ್ನುವ ಬಗ್ಗೆಯೂ ಅಧಿಕಾರಿಗಳಲ್ಲಿ ಅನುಮಾನವಿದ್ದು, ಈ ರೀತಿಯ ಯೋಜನೆಯಿಂದ ಏನು ಫಲ ಎಂದು  ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಮುಖಂಡ ಅಜಿತ್ ತೊಕ್ಕೋಟು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Super Speciality Hospital: ಉತ್ತರ ಕನ್ನಡ ಜನರ ಆಗ್ರಹಕ್ಕೆ ಮಣಿದ ಸರ್ಕಾರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ


ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಬೈಕ್ ಅಂಬ್ಯುಲೆನ್ಸ್ ಕೂಡಾ ಹೇಳ ಹೆಸರಿಲ್ಲದೆ ಮಾಯವಾಗಿದ್ದು, ಹೆಲ್ತ್ ಕಿಯೋಕ್ಸ್ ಕೂಡಾ ಈ ಸಾಲಿನಲ್ಲಿ ಸೇರುತ್ತಿದೆ.

Published by:Annappa Achari
First published: