ಬೆಂಗಳೂರು, (ಡಿಸೆಂಬರ್ 24); ಪ್ರತಿ ಕನ್ನಡಿಗನಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಗುರಿಯೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಮುದಾಯ ಆರೋಗ್ಯ ಸೇವೆ ಉತ್ತಮವಾಗಿದೆ ಎಂದು ಜನರು ಮಾತನಾಡುತ್ತಾರೆ. ಆದರೆ ಇಡೀ ದೇಶದಲ್ಲಿ ಕರ್ನಾಟಕದ ಆರೋಗ್ಯ ಸೇವೆ ಉತ್ತಮ ಹಾಗೂ ಮಾದರಿಯಾಗಿರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕನಸು ಕಂಡಿದ್ದಾರೆ. ಈ ಕನಸಿಗೆ ಪೂರಕವಾಗಿ ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯದಲ್ಲಿ 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇದರಲ್ಲಿ ಅಸಮತೋಲನವಿದ್ದರೆ ಹೊಸ ಕೇಂದ್ರ ನಿರ್ಮಾಣ ಹಾಗೂ ಅಸ್ತಿತ್ವದಲ್ಲಿರುವ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಹೊಸ ಯೋಜನೆಯ ಉದ್ದೇಶ. ಪಿಎಚ್ಸಿಯಲ್ಲಿ 6 ಹಾಸಿಗೆ ಇದ್ದು, ಅದನ್ನು 12 ರಿಂದ 20 ಹಾಸಿಗೆಗೆ ಹೆಚ್ಚಿಸಲಾಗುವುದು. ಪಿಎಚ್ಸಿಯಲ್ಲಿ ಒಬ್ಬ ವೈದ್ಯ ಇದ್ದು, ಈ ಸಂಖ್ಯೆಯನ್ನು ಕನಿಷ್ಠ 3-4 ಕ್ಕೆ ಹೆಚ್ಚಿಸಲಾಗುವುದು. ಈ ಪೈಕಿ ಒಬ್ಬ ಮಹಿಳಾ ವೈದ್ಯೆ ಹಾಗೂ ಮತ್ತೊಬ್ಬರು ಆಯುಷ್ ವೈದ್ಯರಿರುತ್ತಾರೆ ಎಂದು ವಿವರಿಸಿದರು.
ಉತ್ತಮ ವಸತಿ ಕಲ್ಪಿಸದ ಕಾರಣಕ್ಕೆ ಅನೇಕ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದರು. ಒಂದೇ ಸಮುಚ್ಛಯದಲ್ಲಿ ನರ್ಸ್, ವೈದ್ಯರಿಗೆ ವಸತಿ, ಇತರೆ ಆರೋಗ್ಯ ಸಿಬ್ಬಂದಿಗೆ ವಸತಿ ಕಲ್ಪಿಸಲಾಗುತ್ತದೆ. 2 ಎಕರೆ ಪ್ರದೇಶದಲ್ಲಿ 6-8 ಕೋಟಿ ರೂ. ಖರ್ಚು ಮಾಡಿ ಹೊಸ ಪಿಎಚ್ ಸಿ ನಿರ್ಮಿಸಲಾಗುತ್ತದೆ. 20 ಸಾವಿರ ಚದರ ಮೀಟರ್ ಆಡಳಿತ ಕಟ್ಟಡ, 12 ಹಾಸಿಗೆಯ ವಿಭಾಗ, ತಾಯಿ ಮತ್ತು ಶಿಶು ಕಾಳಜಿ ಕೇಂದ್ರ, ಪ್ರಯೋಗಾಲಯ ಇರಲಿದೆ. ಮಧುಮೇಹ ಪರೀಕ್ಷೆ, ರಕ್ತ ಪರೀಕ್ಷೆ ಸೇರಿದಂತೆ ನಾನಾ ಪರೀಕ್ಷೆಗಳನ್ನು ಉಚಿತವಾಗಿ ಮಾಡುವ ವ್ಯವಸ್ಥೆ ಇರಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಬಳಸಿ ಉಚಿತ ಸೇವೆ ನೀಡಲಾಗುವುದು ಎಂದು ವಿವರಿಸಿದರು.
ಇ-ಆಸ್ಪತ್ರೆ
ಸಣ್ಣ ಆಸ್ಪತ್ರೆಗಳಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆವರೆಗೂ ಅಂತರ್ಜಾಲ ಬಳಸಿ ಸಂಪರ್ಕ ಕಲ್ಪಿಸುವ ಇ-ಆಸ್ಪತ್ರೆ ಸೌಲಭ್ಯವಿರಲಿದೆ. ಪಿಎಚ್ ಸಿಯಲ್ಲಿ ಎಕ್ಸ್ ರೇ ತೆಗೆದರೂ ಅದಕ್ಕೆ ಬೇಕಾದ ಸಲಹೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಜ್ಞರು ನೀಡುವಂತಹ ವ್ಯವಸ್ಥೆ ಇರಲಿದೆ. ತಜ್ಞ ವೈದ್ಯರ ತಪಾಸಣೆಗೆ ಅನುಕೂಲವಾಗಲು ಉತ್ತಮ ಗುಣಮಟ್ಟದ ಕ್ಯಾಮರಾ ಮತ್ತು ಟಿವಿಯೊಂದಿಗೆ ಟೆಲಿ-ಮೆಡಿಸಿನ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
ಇದನ್ನು ಓದಿ: ಸಾರ್ವಜನಿಕರು, ಸಚಿವರು, ಅಧಿಕಾರಿಗಳು, ವಿಪಕ್ಷಗಳ ವಿರೋಧ; ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರ
80 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಕೂಡ ಮೇಲ್ದರ್ಜೆಗೇರಿಸಲಾಗುವುದು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುವುದು. 200 ಹಾಸಿಗೆಗಳ ಜಿಲ್ಲಾಸ್ಪತ್ರೆಗಳು ಮುಂದಿನ ದಿನಗಳಲ್ಲಿ 500-700 ಹಾಸಿಗೆಯ ಆಸ್ಪತ್ರೆಯಾಗಿ ಅಭಿವೃದ್ಧಿಯಾಗಲಿವೆ. ಬೆಂಗಳೂರು, ಹುಬ್ಬಳ್ಳಿಗೆ ಆರೋಗ್ಯ ಕೇಂದ್ರಗಳು ಕೇಂದ್ರೀಕೃತವಾಗದೆ ಎಲ್ಲ ಕಡೆಗೂ ವಿಸ್ತರಿಸಲಾಗುವುದು. ಆಯಾ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಸಿಗುವಂತೆ ಮಾಡಲಾಗುವುದು ಎಂದರು.
ಈ ಹಿಂದೆ 1 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ನೀಡಲಾಗುತ್ತಿತ್ತು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಂಬ್ಯುಲೆನ್ಸ್ ನೀಡಲಾಗುವುದು. ಅಂದರೆ, 30 ಸಾವಿರ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ