news18-kannada Updated:March 7, 2020, 7:26 PM IST
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
ಮೈಸೂರು (ಮಾರ್ಚ್ 07); ಮಾಜಿ ಸಚಿವ ಹೆಚ್. ವಿಶ್ವನಾಥ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಇಂದು ಮೈಸೂರಿನಲ್ಲಿ ಹರಿಹಾಯ್ದಿರುವ ಹೆಚ್.ಡಿ. ಕುಮಾರಸ್ವಾಮಿ, “ನನ್ನ ಕುಟುಂಬದ ಮದುವೆ ವಿಚಾರದ ಬಗ್ಗೆ ಇವರಿಗೇಕೆ ಚಿಂತೆ? ಇವರು ಉಪ ಚುನಾವಣೆಯಲ್ಲಿ ಕ್ಷೇತ್ರ ಒಂದಕ್ಕೆ 60 ರಿಂದ 100 ಕೋಟಿ ಹಣ ಖರ್ಚು ಮಾಡಿದ್ರಲ್ಲ ಆ ಹಣ ಯಾರಪ್ಪನ ಮನೆ ದುಡ್ಡು?” ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಮದುವೆಗೆ ಅಭಿಮಾನಿಗಳನ್ನು ಮತ್ತು ಹಿತೈಷಿಗಳನ್ನು ಆಹ್ವಾನಿಸಿದ್ದರು. ಆದರೆ, ಇದು ಆಡಂಭರದ ಮದುವೆ ಎಂದು ಮಾಜಿ ಸಚಿವ ವಿಶ್ವನಾಥ್ ಕುಮಾರಸ್ವಾಮಿ ಅವರ ಕುಟುಂಬದ ಖಾಸಗಿ ಸಂಭ್ರಮವನ್ನು ಟೀಕಿಸಿದ್ದರು.
ಆದರೆ, ಇಂದು ಈ ಕುರಿತ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, “ನನ್ನ ಕುಟುಂಬದಲ್ಲಿ ನಾನು ಮದುವೆ ಕಾರ್ಯ ನಡೆಸುವುದಕ್ಕೆ ಇವರಿಗೇನು ಚಿಂತೆ? ಇವರು ಉಪ ಚುನಾವಣೆಯಲ್ಲಿ ಪ್ರತೀ ಕ್ಷೇತ್ರಕ್ಕೆ 60 ರಿಂದ 100 ಕೋಟಿ ಹಣ ಖರ್ಚು ಮಾಡಿದ್ದರಲ್ಲ ಆವಾಗ ಇವರಿಗೆ ಜನರ ಪರಿಸ್ಥಿತಿ ನೆನಪಾಗಲಿಲ್ವಾ? ಅದಕ್ಕೆಲ್ಲಾ ಬಂಡವಾಳ ಹಾಕಿದ್ದು ಯಾರು? ಅದೇನು ಇವರ ಅಪ್ಪನ ಮನೆ ದುಡ್ಡಾ? ಅಭಿಮಾನಿಗಳಿಗೆ, ಹಿತೈಷಿಗಳಿಗೆ ಆಹ್ವಾನ ಕೊಡೋದು ಆಡಂಭರವಾ, ದುಂದು ವೆಚ್ಚವಾ? ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಉರುಳಿಸುವ ಕುರಿತೂ ಸೂಚನೆ ನೀಡಿರುವ ಅವರು, “ಯಾವುದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಬಿದ್ದು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬಹುದು. ಹೀಗಾಗಿ ಮಾಜಿ ಸಚಿವ ಜಿ.ಟಿ. ದೇವೇಗೌಡ ಆತುರಪಡುವ ಅಗತ್ಯವಿಲ್ಲ. ಈ ಕುರಿತು ನನಗೇನೂ ಆತುರ ಇಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದನ್ನೂ ಓದಿ : ಯೋಗೇಶ್ವರ್ ನೇತೃತ್ವದಲ್ಲಿ ಸರ್ಕಾರ ಉರುಳಿಸುವ ಷಡ್ಯಂತ್ರ ಎಂಬುದು ಸುಳ್ಳು ವದಂತಿ; ಡಿಸಿಎಂ ಅಶ್ವತ್ಥ್ ನಾರಾಯಣ್
First published:
March 7, 2020, 7:26 PM IST