ಇಬ್ಬನಿ ರೆಸಾರ್ಟ್​​ನಲ್ಲಿ ಕುಮಾರಸ್ವಾಮಿ ಹೆಣೆದ ರಣತಂತ್ರವೇನು? ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯುವ ಪ್ಲಾನ್ ನಡೆಯಿತಾ?

ಕುಮಾರಸ್ವಾಮಿ ಕೇಂದ್ರದಲ್ಲಿ ದೊಡ್ಡ ಖಾತೆ ಪಡೆಯುವುದು; ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವುದು; ಖರ್ಗೆ ಮೂಲಕ ಮೈತ್ರಿ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಇವು ಜೆಡಿಎಸ್ ಲೆಕ್ಕಾಚಾರ.

news18
Updated:May 16, 2019, 7:18 AM IST
ಇಬ್ಬನಿ ರೆಸಾರ್ಟ್​​ನಲ್ಲಿ ಕುಮಾರಸ್ವಾಮಿ ಹೆಣೆದ ರಣತಂತ್ರವೇನು? ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯುವ ಪ್ಲಾನ್ ನಡೆಯಿತಾ?
ಕುಮಾರಸ್ವಾಮಿ
  • News18
  • Last Updated: May 16, 2019, 7:18 AM IST
  • Share this:
ಬೆಂಗಳೂರು(ಮೇ 15): ಮಡಿಕೇರಿಯ ಇಬ್ಬನಿ ರೆಸಾರ್ಟ್​ನಲ್ಲಿ ಕುಮಾರಸ್ವಾಮಿ ಅವರು ಎರಡು ದಿನ ರಹಸ್ಯ ವಾಸ್ತವ್ಯ ನಡೆಸಿದ ಘಟನೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಕನ್ನಡ ಭಾಷೆ ಬಾರದ ಸಿಬ್ಬಂದಿಯವರನ್ನು ಮಾತ್ರ ಒಳಗೆ ಸೇರಿಸಿಕೊಂಡ ಅವರ ಕ್ರಮವು ಊಹಾಪೋಹಗಳಿಗೆ ಪೂರಕವಾಗಿಯೇ ಇದೆ. ಇಷ್ಟು ರಹಸ್ಯವಾಗಿ ಕುಮಾರಸ್ವಾಮಿ ವಾಸ್ತವ್ಯ ನಡೆಸಲು ಕಾರಣವೇನು? ಮನಸ್ಸಿಗೆ ಏಕಾಂತ ಸಿಗಲೆಂದೇ? ಅಲ್ಲವೆನ್ನುತ್ತವೆ ನಂಬಲರ್ಹ ಮೂಲಗಳು. ಇಲ್ಲಿ ತಮ್ಮ ಕಟ್ಟಾ ನಂಬಿಕಸ್ಥರಾದ ಸಾ.ರಾ. ಮಹೇಶ್, ಪುಟ್ಟರಾಜು ಅವರ ಜೊತೆ ಕುಮಾರಸ್ವಾಮಿ ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯ ವಿಷಯಗಳು ಹೊರಗೆಲ್ಲೂ ಸುಳಿಯದಂತೆ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ಕೆಲ ವಿಚಾರಗಳು ಲೀಕ್ ಆಗಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಆಪ್ತರೊಂದಿಗಿನ ರಹಸ್ಯ ಸಭೆಯಲ್ಲಿ ಭವಿಷ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದರೆನ್ನಲಾಗಿದೆ. ಒಂದೆ ಕಲ್ಲಿಗೆ ಎರಡು ಹಕ್ಕಿ, ಮೂರು ಲಾಭ ತರುವ ಸಖತ್ ಪ್ಲಾನ್ ರೂಪಿಸಲಾಗಿದೆ. ಲೋಕಸಭೆ ಚುನಾವಣೆಯ ಪೂರ್ವಸಮೀಕ್ಷೆಗಳಲ್ಲಿ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸೂಚನೆ ಇದೆ. ಮೇ 23ರಂದು ಫಲಿತಾಂಶ ಹೊರಬಂದು ಕೇಂದ್ರದಲ್ಲಿ ಸರಕಾರ ರಚನೆಯಲ್ಲಿ ಮಹಾಘಟಬಂಧನ್ ಪಾತ್ರಕ್ಕೆ ಅವಕಾಶ ಬಂದರೆ ಗೇಮ್ ಆಡುವುದು ಮೊದಲ ಅಜೆಂಡಾ. ಅಂದರೆ, ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡರೂ ಸೂತ್ರಧಾರರಾಗುತ್ತಾರೆ. ಆಗ ಅಪ್ಪನ ಮೂಲಕ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಪ್ರಬಲ ಖಾತೆ ಗಿಟ್ಟಿಸುವುದು ಮೊದಲ ಲಾಭ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ 6 ವರ್ಷ ನಿರ್ಬಂಧ? ದೇವೇಗೌಡರ ಮೊಮ್ಮಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದಿಂದ ಸೂಚನೆ

ಕೇಂದ್ರ ಸ್ಥಾನಕ್ಕಾಗಿ ರಾಜ್ಯದಲ್ಲಿ ಸಿಎಂ ಕುರ್ಚಿ ಬಿಟ್ಟುಕೊಟ್ಟರೆ ಅದು ಸಿದ್ದರಾಮಯ್ಯ ಅವರ ಪಾಲಾಗಿ ಬಿಡಬಹುದೆಂಬ ಭಯವೂ ಹೆಚ್​ಡಿಕೆ ಬಳಗಕ್ಕೆ ಇದೆ. ಅದಕ್ಕಾಗಿಯೇ ಅವರು ಇನ್ನೊಂದು ಕಾರ್ಯತಂತ್ರ ರೂಪಿಸಿದ್ಧಾರೆ. ಅದೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವುದು. ಅದಕ್ಕಾಗೇ ಕುಮಾರಸ್ವಾಮಿ ಅವರು ಮೊನ್ನೆಮೊನ್ನೆ ಮಾತನಾಡುತ್ತಾ ಖರ್ಗೆ ಅವರು ಸಿಎಂ ಆಗಬೇಕಿತ್ತು ಎಂಬ ಡೈಲಾಗ್ ಹೊಡೆದದ್ದು. ಖರ್ಗೆಯನ್ನು ಸಿಎಂ ಮಾಡುತ್ತೀವೆಂದು ಹೇಳಿದರೆ ಸಿದ್ದರಾಮಯ್ಯ ಅವರು ವಿರೋಧಿಸುವುದು ಕಷ್ಟ. ಅವರು ಅನಿವಾರ್ಯವಾಗಿ ಖರ್ಗೆ ಅವರನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆಯೇ, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜಿ. ಪರಮೇಶ್ವರ್ ಅವರ ಆಟವನ್ನೂ ನಿಲ್ಲಿಸಿದಂತಾಗುತ್ತದೆ.

ಇದಕ್ಕಿಂತ ಮೇಲಾಗಿ, ಖರ್ಗೆ ಮೂಲಕ ದಲಿತ ವ್ಯಕ್ತಿಯನ್ನು ಸಿಎಂ ಸ್ಥಾನಕ್ಕೆ ಕೂರಿಸಿದ ಕೀರ್ತಿಯೂ ಜೆಡಿಎಸ್​ಗೆ ಸಿಗುತ್ತದೆ. ಸಿಎಂ ಸ್ಥಾನದ ಇರಾದೆಯಲ್ಲಿ ಖರ್ಗೆ ಅವರು ಸಿದ್ದರಾಮಯ್ಯ ಅಂಡ್ ಟೀಮ್​ನ ಬಂಡಾಯವನ್ನು ಹತ್ತಿಕ್ಕಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಶತಾಯಗತಾಯ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಕುಮಾರಸ್ವಾಮಿ ಅವರದ್ದಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರಕ್ಕೆ ನಿಷೇಧ; ಚುನಾವಣೆ ಇತಿಹಾಸದಲ್ಲಿ ಇದೇ ಮೊದಲು

ಅಲ್ಲಿಗೆ, ಒಂದೇ ಕಲ್ಲಿನಲ್ಲಿ ಹಲವು ಲಾಭಗಳನ್ನ ಮಾಡಿಕೊಳ್ಳುವುದು ಜೆಡಿಎಸ್​ನ ಯೋಜನೆಯಾಗಿದೆ. ಮೊದಲನೆಯದು, ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ದೊಡ್ಡ ಖಾತೆ ಪಡೆಯುವುದು; ಎರಡನೆಯದು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವುದು; ಮೂರನೆಯದು ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವುದನ್ನು ತಪ್ಪಿಸುವುದು; ನಾಲ್ಕನೆಯದು ಖರ್ಗೆ ಮೂಲಕ ಮೈತ್ರಿ ಬಾಂಧವ್ಯವನ್ನು ಉಳಿಸಿಕೊಳ್ಳುವುದು. ಇವು ಇಬ್ಬನಿ ರೆಸಾರ್ಟ್​​ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಪ್ಲಾನ್ ಎನ್ನಲಾಗಿದೆ.ಇವೆಲ್ಲವೂ ನೆರವೇರುವುದು ಕೇಂದ್ರದಲ್ಲಿ ಮಹಾಘಟಬಂಧನ್ ಬೆಂಬಲದೊಂದಿಗೆ ಯುಪಿಎ ಸರಕಾರ ಅಧಿಕಾರ ರಚಿಸಿದಾಗ ಮಾತ್ರ. ಒಂದು ವೇಳೆ ಎನ್​ಡಿಎ ಬಹುಮತಕ್ಕೆ ಕೆಲವೇ ಸ್ಥಾನಗಳ ಕೊರತೆ ಎದುರಾದರೆ ಕುಮಾರಸ್ವಾಮಿ ಏನು ಮಾಡುತ್ತಾರೆ ಎಂಬುದು ಕುತೂಹಲ.

(ವರದಿ: ಚಿದಾನಂದ ಪಟೇಲ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​ನಲ್ಲೂ ಹಿಂಬಾಲಿಸಿ
First published: May 16, 2019, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading